'ಆರ್‌ಆರ್‌ಆರ್' ವಿಡಿಯೋ ತುಣುಕು ಬಿಡುಗಡೆ: 'ಬಾಹುಬಲಿ'ಯನ್ನೂ ಮೀರಿಸುವ ದೃಶ್ಯ ವೈಭವ
ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ಆರ್‌ಆರ್‌ಆರ್'ನ ವಿಡಿಯೋ ತುಣುಕೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು 'ಬಾಹುಬಲಿ' ಸಿನಿಮಾವನ್ನೂ ಮೀರಿಸುವ ದೃಶ್ಯ ವೈಭವ 'ಆರ್‌ಆರ್‌ಆರ್'ನಲ್ಲಿದೆಯೆಂಬ ಸುಳಿವನ್ನು ವಿಡಿಯೋ ತುಣುಕು ನೀಡುತ್ತಿದೆ.
ಇದೀಗ ಬಿಡುಗಡೆ ಮಾಡಲಾಗಿರುವ ವಿಡಿಯೋ ತುಣುಕಿನಲ್ಲಿ ಆಕ್ಷನ್ ದೃಶ್ಯಗಳು ಮೈನವಿರೇಳುವಂತೆ ಇವೆ. ಕೇವಲ 45 ಸೆಕೆಂಡ್‌ನ ಈ ವಿಡಿಯೋ ತುಣುಕು ಸಿನಿಮಾದಲ್ಲಿನ ಅದ್ಭುತ ಆಕ್ಷನ್ ದೃಶ್ಯಗಳ ಕಿರು ಪರಿಚಯ ನೀಡುತ್ತಿವೆ.
ವಿಡಿಯೋದ ಆರಂಭದಲ್ಲಿಯೇ ಜೂ ಎನ್‌ಟಿಆರ್ ಕಣ್ಣ ಮೇಲಿಂದ ನೆತ್ತರು ಜಾರಿದರೆ ರಾಮ್ ಚರಣ್ ಕಣ್ಣ ಮುಂದೆ ಅಗ್ನಿ ನರ್ತಿಸುತ್ತದೆ ಆ ನಂತರದ ವಿಡಿಯೋ ರೋಲರ್‌ಕೋಸ್ಟರ್ ರೈಡ್. ಅದ್ಭುತ ಗ್ರಾಫಿಕ್ಸ್, ಫೈಟ್ ದೃಶ್ಯಗಳು, ಅದ್ಧೂರಿತನ, ಸಿನಿಮಾಗಳ ಪ್ರಮುಖ ಪಾತ್ರಗಳ ಝಲಕ್ ಎಲ್ಲವೂ ಈ 45 ಸೆಕೆಂಡ್‌ನ ವಿಡಿಯೋನಲ್ಲಿ ಅಡಕವಾಗಿದೆ.

ಭಾರತೀಯ ಸಿನಿಮಾದ ವೈಭವವನ್ನು ಮತ್ತೆ ಮರುಕಳಿಸಲು ಸಿನಿಮಾವು ಜನವರಿ 07ಕ್ಕೆ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ ಎಂದು 'ಆರ್‌ಆರ್‌ಆರ್' ಚಿತ್ರತಂಡ ವಿಡಿಯೋದ ಕೊನೆಯಲ್ಲಿ ಹೇಳಿದೆ.
ಚಿತ್ರತಂಡ ಈಗ ಬಿಡುಗಡೆ ಮಾಡಿರುವ ವಿಡಿಯೋ ಟೀಸರ್ ಅಲ್ಲವಂತೆ ಇದು ಕೇವಲ 'ಗ್ಲಿಂಪ್ಸ್' ಅಥವಾ ವಿಡಿಯೋ ತುಣುಕು ಎಂದಷ್ಟೆ ಕರೆದಿದೆ. ಹಾಗಾಗಿ ಸಿನಿಮಾದ ಟೀಸರ್ ಇನ್ನಷ್ಟು ಅದ್ಭುತವಾಗಿ ಇರಬಹುದೆಂಬ ನಿರೀಕ್ಷೆ ಅಭಿಮಾನಿಗಳದ್ದು.
'ಆರ್‌ಆರ್ಆರ್' ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ಜೂ.ಎನ್‌ಟಿಆರ್, ರಾಮ್ ಚರಣ್ ತೇಜ, ಬಾಲಿವುಡ್ ನಟಿ ಆಲಿಯಾ ಭಟ್, ನಟ ಅಜಯ್ ದೇವಗನ್, ನಟಿ ಶ್ರೆಯಾ ಶಿರಿನ್, ರಾಹುಲ್ ರಾಮಕೃಷ್ಣ, ವಿದೇಶಿ ನಟಿ ಒಲಿವಿಯಾ ಮೋರಿಸ್, ನಟ ರೇ ಸ್ಟೇವನ್‌ಸನ್, ಅಲಿಸನ್ ಡೂಡಿ, ಡೇಸಿ ಎಡ್ಗರ್ ಜಾನ್ಸ್ ಇನ್ನೂ ಹಲವು ಸ್ಥಳೀಯ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಡಿವಿವಿ ದಯಾನಂದ್ ಬಂಡವಾಳ ಹೂಡಿದ್ದಾರೆ.
'ಆರ್ಆರ್ಆರ್' ಸಿನಿಮಾವು ತೆಲುಗು ರಾಜ್ಯಗಳ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೋಮರಂ ಭೀಮ್ ಜೀವನ ಆಧರಿಸಿದ ಕತೆಯಾಗಿದೆ. ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ್ ನಟಿಸುತ್ತಿದ್ದರೆ, ಕೋಮರಂ ಭೀಮ್ ಪಾತ್ರದಲ್ಲಿ ಜೂ ಎನ್‌ಟಿಆರ್ ನಟಿಸುತ್ತಿದ್ದಾರೆ. ಸೀತಾ ಪಾತ್ರದಲ್ಲಿ ನಟಿ ಆಲಿಯಾ ಭಟ್ ನಟಿಸುತ್ತಿದ್ದಾರೆ. ಜೂ.ಎನ್‌ಟಿಆರ್ ತಂದೆ ಪಾತ್ರದಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಸಿನಿಮಾಕ್ಕೆ 400 ಕೋಟಿ ಬಂಡವಾಳ ಹೂಡಲಾಗಿದೆ. ಸಿನಿಮಾವು ಮುಂದಿನ ವರ್ಷ ಜನವರಿ 07 ರಂದು ಚಿತ್ರಮಂದಿರಗಳಲ್ಲಿ, ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











