'ನಾವು ಅದೇ ದಿನ ಬರಬೇಕು': ಹಠಕ್ಕೆ ಬಿದ್ರಾ ರಾಜಮೌಳಿ?
ಎಲ್ಲವೂ ಸಹಜವಾಗಿ ಇದ್ದಿದ್ದರೆ ಅಕ್ಟೋಬರ್ 13 ರಂದು ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ವರ್ಲ್ಡ್‌ವೈಡ್ ತೆರೆಗೆ ಬರಬೇಕಿತ್ತು. ಕೋವಿಡ್ ಕಾರಣದಿಂದ ಮುಂದಕ್ಕೆ ಹೋಗಬೇಕಾಯಿತು. ಹೊಸ ದಿನಾಂಕದ ಹುಡುಕಾಟದಲ್ಲಿ ರಾಜಮೌಳಿ ಸಂಕ್ರಾಂತಿ ಹಬ್ಬವನ್ನು ಟಾರ್ಗೆಟ್ ಮಾಡಿದ್ದರು. ಆದರೆ ಜಕ್ಕಣ್ಣ ಅಧಿಕೃತವಾಗಿ ಘೋಷಣೆ ಮಾಡುವುದಕ್ಕೆ ಮುಂಚೆಯೇ ಇತರೆ ಸ್ಟಾರ್ ನಟರ ತಮ್ಮ ಚಿತ್ರಗಳನ್ನು ಸಂಕ್ರಾಂತಿ ಹಬ್ಬಕ್ಕೆ ಲಾಕ್ ಮಾಡಿದರು.
ಹೆಚ್ಚು ಕಡಿಮೆ ಅಂದ್ರೂ ತಮಿಳು ಮತ್ತು ತೆಲುಗಿನಲ್ಲಿ ಆರೇಳು ದೊಡ್ಡ ಚಿತ್ರಗಳು ಸಂಕ್ರಾಂತಿ ಹಬ್ಬಕ್ಕೆ ಬರಲು ತಯಾರಾಗಿದೆ. ಹೀಗಾಗಿ, ಆರ್‌ಆರ್‌ಆರ್ ಚಿತ್ರತಂಡ ಗೊಂದಲಕ್ಕೆ ಒಳಗಾಯಿತು. ಸಂಕ್ರಾಂತಿ ಹಬ್ಬಕ್ಕೆ ಬರೋದಾ ಅಥವಾ ಇನ್ನಷ್ಟು ಮುಂದಕ್ಕೆ ಹೋಗೋದಾ ಎಂಬ ಚಿಂತೆ ಶುರುವಾಯಿತು.
ಈ ಗೊಂದಲದ ನಡುವೆ ರಾಜಮೌಳಿ ಹಠಕ್ಕೆ ಬಿದ್ದಂತೆ ಕಂಡು ಬರುತ್ತಿದೆ. ಸದ್ಯದ ವರದಿ ಪ್ರಕಾರ ಆರ್ ಆರ್ ಆರ್ ಸಿನಿಮಾವನ್ನು ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಮಾಡಬೇಕು ಎಂದು ತೀರ್ಮಾನಿಸಿದ್ದಾರಂತೆ. ಒಂದು ವೇಳೆ ಇದು ನಿಜವೇ ಆದರೆ ಸಂಕ್ರಾಂತಿ ಹಬ್ಬಕ್ಕೆ ಚಿತ್ರಪ್ರೇಮಿಗಳಿಗೆ ಭರಪೂರ ಮನರಂಜನೆ. ಮತ್ತೊಂದೆಡೆ ಈಗಾಗಲೇ ದಿನಾಂಕ ಘೋಷಿಸಿರುವ ಸಿನಿಮಾಗಳಲ್ಲಿ ಯಾರಾದರೂ ಮುಂದೂಡಿಕೆ ಮಾಡಿದರೂ ಅಚ್ಚರಿ ಇಲ್ಲ.

ರಾಜಮೌಳಿ ಅವರ ಆಪ್ತ ನಟ ಪ್ರಭಾಸ್ ನಟನೆ 'ರಾಧೆಶ್ಯಾಮ್' ಚಿತ್ರ ಹಾಗೂ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಚಿತ್ರಗಳು ಸಹ ಸಂಕ್ರಾಂತಿ ಹಬ್ಬಕ್ಕೆ ಬರ್ತಿದೆ. ಇಂತಹ ದೊಡ್ಡ ಚಿತ್ರಗಳ ಜೊತೆ ಆರ್‌ಆರ್‌ಆರ್ ರೇಸ್‌ನಲ್ಲಿರುವುದು ಸಹಜವಾಗಿ ಬಾಕ್ಸ್ ಆಫೀಸ್‌ನಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ಹಿಂದಿನ ವರದಿಗಳಂತೆ ರಾಧೆಶ್ಯಾಮ್ ಚಿತ್ರವನ್ನು ಮುಂದೂಡುವಂತೆ ಸ್ವತಃ ರಾಜಮೌಳಿ, ನಟ ಪ್ರಭಾಸ್ ಬಳಿ ಕೇಳಿಕೊಂಡಿದ್ದರಂತೆ. ಆದರೆ, ಪ್ರಭಾಸ್ ಇದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ. ಈಗಾಗಲೇ ಬಹಳ ವಿಳಂಬವಾಗಿದೆ. ಮತ್ತೆ ಮುಂದೂಡುವುದು ಅಂದ್ರೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಮನವಿ ನಿರಾಕರಿಸಿದರಂತೆ.
ಈಗ ಬೇರೆ ದಾರಿ ಕಾಣದ ರಾಜಮೌಳಿ 'ನಾವು ಅದೇ ದಿನಕ್ಕೆ ಬರ್ತೇವೆ' ಎಂದು ನಿರ್ಧರಿಸಿದ್ದಾರೆ ಎಂಬ ಸುದ್ದಿಗಳು ಸಿನಿಮಾ ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದೆ. ಬಾಹುಬಲಿ ಆದ್ಮೇಲೆ ರಾಜಮೌಳಿ ನಿರ್ದೇಶಿಸಿರುವ ಸಿನಿಮಾ ಇದಾಗಿರುವುದರಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ.

ಅಂದ್ಹಾಗೆ, ಆರ್‌ಆರ್‌ಆರ್ ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೊಮ್ಮರನ್ ಭೀಮ್ ಮತ್ತು ಅಲ್ಲುರಿ ಸೀತಾರಾಮರಾಜು ಅವರ ಸುತ್ತ ಕಥೆ ಮಾಡಲಾಗಿದ್ದು, ಜೂ ಎನ್‌ಟಿಆರ್ ಮತ್ತು ರಾಮ್ ಚರಣ್ ತೇಜ ನಟಿಸಿದ್ದಾರೆ. ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀತಾ ಪಾತ್ರದಲ್ಲಿ ಹಿಂದಿ ನಟಿ ಅಲಿಯಾ ಭಟ್ ಅಭಿನಯಿಸಿದ್ದಾರೆ. ಇವರ ಜೊತೆಗೆ ಹಾಲಿವುಡ್ ಕಲಾವಿದರು ಚಿತ್ರದಲ್ಲಿದ್ದಾರೆ. ಡಿವಿವಿ ದಾನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸುಮಾರು 450 ಕೋಟಿಗೂ ಅಧಿಕ ಬಜೆಟ್ ಆಗಿದೆ ಎಂದು ಹೇಳಲಾಗಿದೆ. ಈ ನಡುವೆ ಆರ್‌ಆರ್‌ಆರ್ ಸಿನಿಮಾದ ಪ್ರಮೋಷನಲ್ ಹಾಡಿನ ಚಿತ್ರೀಕರಣ ಪ್ಲಾನ್ ಮಾಡಿರುವ ರಾಜಮೌಳಿ ಅದಕ್ಕಾಗಿ 6 ಕೋಟಿ ಖರ್ಚು ಮಾಡಲು ಮುಂದಾಗಿದ್ದಾರಂತೆ. ಈ ಹಾಡಿನಲ್ಲಿ ಆಲಿಯಾ ಭಟ್ ಜೊತೆ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಹೆಜ್ಜೆ ಹಾಕಲಿದ್ದಾರೆ.
ಸಂಕ್ರಾಂತಿ ಬಿಡುಗಡೆ ಅಧಿಕೃತ
ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ', ಪ್ರಭಾಸ್ ಅಭಿನಯದ 'ರಾಧೆಶ್ಯಾಮ್', ಪವನ್ ಕಲ್ಯಾಣ್-ರಾಣಾ ದಗ್ಗುಬಾಟಿ ನಟನೆಯ ಭೀಮ್ಲಾ ನಾಯ್ಕ್, ವೆಂಕಟೇಶ್ ನಟನೆಯ 'ಎಫ್ 3 'ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಬರುವುದಾಗಿ ಪ್ರಕಟಿಸಿಕೊಂಡಿದೆ.


Click it and Unblock the Notifications











