ಆಸ್ಕರ್ ಸಿಕ್ಕಿದ್ದು 'RRR' ತಂಡಕ್ಕೆ.. ಪೋಸ್ ಕೊಟ್ಟಿದ್ದು 'ಬಾಹುಬಲಿ' ನಿರ್ಮಾಪಕ.. ಏನ್ ರಾಜಮೌಳಿ ಇದೆಲ್ಲಾ?
ಅದ್ಧೂರಿಯಾಗಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿದೆ. ಭಾರತಕ್ಕೆ ಈ ಬಾರಿ 2 ಆಸ್ಕರ್ ಪ್ರಶಸ್ತಿ ಲಭಿಸಿರೋದು ವಿಶೇಷ. ಅದರಲ್ಲೂ 'RRR' ಚಿತ್ರದ 'ನಾಟು ನಾಟು' ಗೀತೆ ಮತ್ತೊಮ್ಮೆ ವಿಶ್ವದ ಪ್ರತಿಷ್ಠಿತ ವೇದಿಕೆಯಲ್ಲಿ ಸದ್ದು ಮಾಡಿದೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಚಿತ್ರಕ್ಕೆ ಆಸ್ಕರ್ ಗೌರವ ಧಕ್ಕಿದೆ. 'RRR' ಚಿತ್ರತಂಡ ಡಾಲ್ಬಿ ಹಾಲ್‌ನಲ್ಲಿ ಕುಣಿದು ಕುಪ್ಪಳಿಸಿದೆ.
ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿತ್ತು. ವರ್ಷ ಕಳೆದರೂ ರಾಮ್-ಭೀಮ್ ಆರ್ಭಟ ನಿಂತಿಲ್ಲ. ಅಂತರಾಷ್ಟ್ರೀಯ ಸಿನಿಮಾ ವೇದಿಕೆಗಳಲ್ಲಿ ತೆಲುಗು ಸಿನಿಮಾ ಸದ್ದು ಮಾಡ್ತಾ ಬರ್ತಿದೆ. ಇದೀಗ ಆಸ್ಕರ್ ವೇದಿಕೆಯಲ್ಲೂ ಪ್ರಶಸ್ತಿ ಗೆದ್ದು ಮತ್ತೊಮ್ಮೆ ಟಾಕ್ ಆಫ್ ದ ಟೌನ್ ಆಗಿದೆ. ತಂಡದ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಹಾಗೂ ಹಾಡು ಬರೆದ ಚಂದ್ರಬೋಸ್ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಿರ್ದೇಶಕ ರಾಜಮೌಳಿ, ನಟರಾದ ರಾಮ್‌ಚರಣ್, ಜ್ಯೂ.ಎನ್‌ಟಿಆರ್ ಜೊತೆಗೆ 'RRR' ತಂಡದ ಹಲವರು ಭಾಗಿ ಆಗಿದ್ದರು. ಆದರೆ ಚಿತ್ರದ ನಿರ್ಮಾಪಕರಾದ ಡಿ ವಿ ವಿ ದಾನಯ್ಯ ಗೈರು ಎದ್ದು ಕಾಣುತ್ತಿತ್ತು. ಇದಕ್ಕೆ ಕಾರಣ ಏನು ಎಂದು ಕೆಲವರು ಅಚ್ಚರಿಗೊಂಡಿದ್ದಾರೆ. ದಾನಯ್ಯ ತಂಡದ ಜೊತೆ ಕಾಣಿಸದಿದ್ದರೂ ಪರವಾಗಿಲ್ಲ, 'ಬಾಹುಬಲಿ' ಸಿನಿಮಾ ನಿರ್ಮಾಪಕರಾದ ಶೋಬು ಎರ್ಲಗಡ್ಡ ಯಾಕೆ ತಂಡದ ಜೊತೆ ಇದ್ದಾರೆ ಎಂದು ಕೇಳುತ್ತಿದ್ದಾರೆ.
ಈ ಹಿಂದೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸೆರೆಮನಿಯಲ್ಲೂ ಕೂಡ ಇದೇ ರೀತಿ ಆಗಿತ್ತು. ದಾನಯ್ಯ ಬದಲು ಶೋಬು ಎರ್ಲಗಡ್ಡ ತಂಡದ ಜೊತೆ ಪೋಸ್ ಕೊಟ್ಟಿದ್ದರು. ಇದೀಗ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲೂ ಇದೇ ಪುನರಾವರ್ತನೆ ಆಗಿದೆ. 'RRR' ಚಿತ್ರದ ನಿರ್ಮಾಪಕ ದಾನಯ್ಯ ಬದಲು ಇದೀಗ ಶೋಬು ಎರ್ಲಗಡ್ಡ ಆಸ್ಕರ್ ಪ್ರಶಸ್ತಿ ಹಿಡಿದು ಪೋಸ್ ಕೊಟ್ಟಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದನ್ನು ನೋಡಿ ರಾಜಮೌಳಿ- ದಾನಯ್ಯ ನಡುವೆ ಏನಾದರೂ ವೈಮನಸ್ಸು ಇದ್ಯಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಮೌಳಿ- ದಾನಯ್ಯ ನಡುವೆ ಏನಾದ್ರೂ ಇಶ್ಯೂ ಇದ್ಯಾ? 'RRR' ಆಸ್ಕರ್ ಪ್ರಶಸ್ತಿ ಸುತ್ತು ಪ್ರವೇಶಿಸಲು ಬೇಕಾದ ಖರ್ಚು ಮಾಡಲ್ಲ ಎಂದು ದಾನಯ್ಯ ಹೇಳಿದ್ರಾ? ಅಥವಾ ರಾಜಮೌಳಿ ಜೊತೆ ಶೊಬು ಎರ್ಲಗಡ್ಡ ಇರೋದು ದಾನಯ್ಯಗೆ ಇಷ್ಟವಾಗಲಿಲ್ವಾ? ಅಸಲಿ ಕಾರಣ ಏನು ಎನ್ನುವುದನ್ನು ಚಿತ್ರತಂಡವೇ ಹೇಳಬೇಕಿದೆ. ನಿರ್ಮಾಪಕರಾದ ದಾನಯ್ಯ ಕೂಡ ಇಂತಹ ಸಮಯದಲ್ಲಿ ತಂಡದ ಜೊತೆ ಇದ್ದಿದ್ದರೆ ಚೆನ್ನಾಗಿತ್ತು. ನೂರಾರು ಕೋಟಿ ಬಂಡವಾಳ ಹಾಕಿ ಸಿನಿಮಾ ನಿರ್ಮಾಣಕ್ಕೆ ಕಾರಣರಾದವರು ಹೀಗೆ ದೂರ ಇರುವುದು ಸರಿಯಲ್ಲ ಎನ್ನುವುದು ಕೆಲವರ ವಾದ.
ನಿರ್ದೇಶಕ ರಾಜಮೌಳಿ, ರಾಮ್‌ಚರಣ್, ಎಂ. ಎಂ ಕೀರವಾಣಿ ದಂಪತಿ ಸಮೇತರಾಗಿ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗಿ ಆಗಿದ್ದರು. ಇನ್ನು ಗಾಯಕರಾದ ರಾಹುಲ್ ಸಿಪ್ಲಿಗಂಜ್, ಕಾಲಭೈರವ ವೇದಿಕೆಯಲ್ಲಿ 'ನಾಟು ನಾಟು' ಲೈವ್ ಪರ್ಫಾರ್ಮೆನ್ಸ್ ನೀಡಿದರು. ಎಂ. ಎಂ ಕೀರವಾಣಿ, ಚಂದ್ರಬೋಸ್ ವೇದಿಕೆ ಏರಿ ಪ್ರಶಸ್ತಿ ಸ್ವೀಕರಿಸಿದರು. ಕೊನೆಯ ಸಾಲಿನಲ್ಲಿ ಕುಂತಿದ್ದ ರಾಜಮೌಳಿ ಪ್ರಶಸ್ತಿ ಘೋಷಣೆ ಆಗುತ್ತಿದಂತೆ ಕುಣಿದು ಸಂಭ್ರಮಿಸಿದರು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೆಲವೊತ್ತು ಕಾರ್ಯಕ್ರಮದ ನಿರೂಪಕಿಯಾಗಿ 'RRR' ತಂಡವನ್ನು ಪರಿಚಯಿಸಿದರು.
'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ ಗೌರವ ಸಿಕ್ಕಿರುವುದರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ದಾನಯ್ಯ ಸಂತಸ ಹಂಚಿಕೊಂಡಿದ್ದಾರೆ. "ನಾನು ಮಾತ್ರವಲ್ಲ ಇಡೀ ದೇಶವೇ ಇದಕ್ಕಾಗಿ ಹೆಮ್ಮೆ ಪಡುತ್ತಿದೆ. ನಾವು ಮತ್ತಷ್ಟು ಪ್ರಶಸ್ತಿಗಾಗಿ ಶ್ರಮಿಸುತ್ತೇವೆ" ಎಂದಿದ್ದಾರೆ.


Click it and Unblock the Notifications











