ತಾರಕ್ ಬಳಿಕ ಮತ್ತೊಬ್ಬ ತೆಲುಗು ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾಗಿ ರುಕ್ಮಿಣಿ ಆಯ್ಕೆ?
ಸದ್ಯ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಕಮಾಲ್ ಮಾಡುತ್ತಿರುವ ನಟಿ ರುಕ್ಮಿಣಿ ವಸಂತ್. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳ ಮೂಲಕ ಕನ್ನಡದ ನಟಿ ಗಮನ ಸೆಳೆಯುತ್ತಿದ್ದಾರೆ. ಮುಂದೆ ಮತ್ತಷ್ಟು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
'ಕಾಂತಾರ-1' ಚಿತ್ರದಲ್ಲಿ ಕನಕವತಿಯಾಗಿ ಅಚ್ಚರಿ ಮೂಡಿಸಿದ್ದ ರುಕ್ಮಿಣಿ ವಸಂತ್ ಸದ್ಯ ಬಾಲಿವುಡ್ ಅಂಗಳಕ್ಕೆ ಜಿಗಿಯುವ ಸುದ್ದಿ ಬರ್ತಿದೆ. ತೆಲುಗಿನಲ್ಲಿ ಜ್ಯೂ. ಎನ್‌ಟಿಆರ್ ಜೊತೆ 'ಡ್ರ್ಯಾಗನ್' ಚಿತ್ರದಲ್ಲಿ ನಟಿಸ್ತಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆಗೂ ಮಿಂಚುತ್ತಿದ್ದಾರೆ. ಮುಂದೆ ಮತ್ತಷ್ಟು ದೊಡ್ಡ ಸಿನಿಮಾಗಳಲ್ಲಿ ಬೆಂಗಳೂರು ಬೆಡಗಿ ಬಣ್ಣ ಹಚ್ಚಿ ರಂಜಿಸಲಿದ್ದಾರೆ.

ರಾಮ್‌ಚರಣ್ ಮುಂದಿನ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿ ಎನ್ನಲಾಗ್ತಿದೆ. ಸದ್ಯ 'ಪೆದ್ದಿ' ಚಿತ್ರದಲ್ಲಿ ರಾಮ್‌ಚರಣ್ ನಟಿಸುತ್ತಿದ್ದಾರೆ. ಬುಚ್ಚಿಬಾಬು ನಿರ್ದೇಶನದ ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ. ಆ ಬಳಿಕ ಸುಕುಮಾರ್ ನಿರ್ದೇಶನದ ಚಿತ್ರದಲ್ಲಿ ಚರಣ್ ನಟಿಸಬೇಕಿದೆ. ಆ ಚಿತ್ರಕ್ಕೆ ರುಕ್ಮಿಣಿ ನಾಯಕಿ ಎನ್ನುವ ಚರ್ಚೆ ಫಿಲ್ಮ್ ನಗರ್‌ನಲ್ಲಿ ಶುರುವಾಗಿದೆ.
ಅಕ್ಕಪಕ್ಕದ ಇಂಡಸ್ಟ್ರಿಗಳಲ್ಲಿ ಕೂಡ ರುಕ್ಮಿಣಿ ವಸಂತ್ ಕ್ರೇಜ್ ಶುರುವಾಗಿದೆ. ಈಗಾಗಲೇ ತೆಲುಗು, ತಮಿಳು ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಆದರೆ ದೊಡ್ಡ ಬ್ರೇಕ್ ಸಿಕ್ಕಿಲ್ಲ. ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಚಿತ್ರ ಅದಕ್ಕೆ ಉತ್ತರ ಕೊಡುವಂತಿದೆ. ಇನ್ನುಳಿದಂತೆ ಮಣಿರತ್ನಂ ನಿರ್ದೇಶನದ ಮುಂದಿನ ಚಿತ್ರಕ್ಕೂ ರುಕ್ಕು ನಾಯಕಿ ಎನ್ನಲಾಗ್ತಿದೆ.

'ಕಾಂತಾರ- 1' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿದ್ದು ಗೊತ್ತೇಯಿದೆ. ಕನಕವತಿಯಾಗಿ ನೆಗೆಟಿವ್ ರೋಲ್‌ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಂದ ಹಾಗೂ ಅಭಿನಯ ಎರಡನ್ನು ಸ್ವಂತ ಮಾಡಿಕೊಂಡಿರುವ ನಟಿಗೆ ಅವಕಾಶಗಳ ಸುರಿಮಳೆ ಆಗುತ್ತಿದೆ. ಆದರೆ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ತಮಿಳು 2 ಹಾಗೂ ಕನ್ನಡ 1 ಚಿತ್ರದಲ್ಲಿ ರುಕ್ಮಿಣಿ ನಟಿಸಿದ್ದಾರೆ. ಮುಂದಿನ ವರ್ಷ 'ಟಾಕ್ಸಿಕ್' ಹಾಗೂ 'ಡ್ರ್ಯಾಗನ್' ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
6 ವರ್ಷಗಳ ಹಿಂದೆ 'ಬೀರ್‌ಬಲ್' ಚಿತ್ರದಲ್ಲಿ ರುಕ್ಮಿಣಿ ಮೊದಲ ಬಾರಿಗೆ ನಟಿಸಿದ್ದರು. ಬಳಿಕ ಒಂದು ಹಿಂದಿ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಸಪ್ತಸಾಗರದಾಚೆ ಎಲ್ಲೋ ಸರಣಿ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. 'ಬಾನದಾರಿಯಲ್ಲಿ', 'ಬಘೀರ', 'ಭೈರತಿ ರಣಗಲ್' ಸಿನಿಮಾಗಳಲ್ಲಿ ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡಿದ್ದರು. ತಮಿಳಿನ 'ಮದರಾಸಿ' ಚಿತ್ರದಲ್ಲಿ ನಟಿಸಿ ಗೆದ್ದಿದ್ದರು.
ಇತ್ತೀಚೆಗೆ ಮುಂಬೈನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ರುಕ್ಮಿಣಿ ವಸಂತ್ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಶೀಘ್ರದಲ್ಲೇ ಆಕೆ ನಟಿಸುವ ಬಾಲಿವುಡ್ ಸಿನಿಮಾ ಸುದ್ದಿ ಹೊರಬೀಳಲಿದೆ. ಈಗಾಗಲೇ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಹೀಗೆ ಸಾಲು ಸಾಲಾಗಿ ಕನ್ನಡ ನಟಿಯರು ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ರುಕ್ಮಿಣಿ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಅಭಿಮಾನಿಗಳಿಗೂ ಇದು ಖುಷಿ ಕೊಟ್ಟಿದೆ.
ಸುಕುಮಾರ್- ರಾಮ್‌ಚರಣ್ ಕಾಂಬಿನೇಷನ್ ಚಿತ್ರ ಕೂಡ ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿಬಿಟ್ಟರೆ ರುಕ್ಮಿಣಿ ಅದೃಷ್ಟದ ಬಾಗಿಲು ಬಡಿದಂತೆಯೇ ಸರಿ. ಮುಂದೆ ಮತ್ತಷ್ಟು ದೊಡ್ಡ ಅವಕಾಶಗಳನ್ನು ಆಕೆಯನ್ನು ಹುಡುಕಿ ಬರಲಿದೆ.


Click it and Unblock the Notifications











