Rukmini Vasanth: ತೆಲುಗು ಬಾಬುಗಳ ಹೊಸ ಕ್ರಶ್ ನಮ್ ಪುಟ್ಟಿ: ಶೀಘ್ರದಲ್ಲೇ ಟಾಲಿವುಡ್‌ನತ್ತ ರುಕ್ಮಿಣಿ ವಸಂತ್
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಭರ್ಜರಿ ಸಕ್ಸಸ್ ಕಂಡಿದೆ. ಸದ್ಯ ತೆಲುಗಿಗೂ ಡಬ್ ಆಗಿ ಸೌಂಡ್ ಮಾಡ್ತಿದೆ. ಮನು-ಪ್ರಿಯಾ ಪ್ರೇಮಕಥೆಗೆ ಟಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ರಕ್ಷಿತ್-ರುಕ್ಮಿಣಿ ಕೆಮೆಸ್ಟ್ರಿ ವರ್ಕೌಟ್ ಆಗಿದ್ದು ಸಿನಿರಸಿಕರು ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
'ಸಪ್ತ ಸಾಗರಾಲು ದಾಟಿ' ಟೈಟಲ್‌ನಲ್ಲಿ ಸಿನಿಮಾ ಆಂಧ್ರ, ತೆಲಂಗಾಣದಲ್ಲಿ ರಿಲೀಸ್ ಆಗಿದೆ. ಮೊದಲ ದಿನವೇ ಬ್ರೇಕ್ ಈವನ್ ಆದ ಸಿನಿಮಾ ಶನಿವಾರ, ಭಾನುವಾರವೂ ಭರ್ಜರಿ ಗಳಿಕೆ ಕಂಡಿದೆ. ಸ್ಲೋ ಪಾಯ್ಸನ್ ರೀತಿ ಸಿನಿಮಾ ನಿಧಾನವಾಗಿ ತೆಲುಗು ಪ್ರೇಕ್ಷಕರನ್ನು ಆವರಿಸಿಕೊಳ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ ಮಹಾಪೂರವೇ ಹರಿದು ಬರ್ತಿದೆ.

ಪ್ರಿಯಾ ಪಾತ್ರದಲ್ಲಿ ರುಕ್ಮಿಣಿ ವಸಂತ್ ಅಕ್ಷರಶಃ ತೆಲುಗು ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ಆಕೆಯ ನಟನೆಯ ಬಗ್ಗೆ ಅಲ್ಲಿನ ಪ್ರೇಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆಕೆಯ ಕ್ಯೂಟ್ ಕ್ಯೂಟ್ ಲುಕ್ಸ್, ನಟನೆಗೆ ಮಾರು ಹೋಗಿದ್ದಾರೆ. ಬೇಗ ತೆಲುಗು ಸಿನಿಮಾಗಳಲ್ಲಿ ಆಕೆ ನಟಿಸುವಂತಾಗಲಿ ಎಂದು ಹಾರೈಸುತ್ತಿದ್ದಾರೆ. ಈಗಾಗಲೇ ಕೆಲವರು ನಾನಿ ಹಾಗೂ ರುಕ್ಮಿಣಿ ಜೋಡಿ ಚೆನ್ನಾಗಿರುತ್ತದೆ ಬೇಗ ಕಾಸ್ಟ್ ಮಾಡಿ ಸಿನಿಮಾ ಮಾಡಿ ಎನ್ನುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲೂ ಸಾಲು ಸಾಲು ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ಬಣ್ಣ ಹಚ್ಚಿದ್ದಾರೆ. ಶ್ರೀನಿ ನಿರ್ದೇಶಿಸಿ ನಟಿಸಿದ 'ಬೀರ್‌ಬಲ್' ಚಿತ್ರದಲ್ಲಿ ಆಕೆ ಮೊದಲಿಗೆ ನಟಿಸಿದರು. ಬಳಿಕ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರಕ್ಕೆ ಆಯ್ಕೆ ಆಗಿದ್ದರು. ರಕ್ಷಿತ್ ಹಾಗೂ ರುಕ್ಮಿಣಿಗೆ ವರ್ಕ್‌ಶಾಪ್ ನಡೆಸಿ ನಿರ್ದೇಶಕ ಹೇಮಂತ್ ರಾವ್ ಚಿತ್ರದಲ್ಲಿ ನಟಿಸುವಂತೆ ಮಾಡಿದ್ದರು. ಆ ಐಡಿಯಾ ವರ್ಕ್ ಆಗಿದೆ. ಇವರಿಬ್ಬರ ಕೆಮೆಸ್ಟ್ರಿ ಬಗ್ಗೇನೇ ಈಗ ಎಲ್ಲರೂ ಮಾತನಾಡುತ್ತಿದ್ದಾರೆ.

ಇನ್ನು ಗಣೇಶ್ ಜೋಡಿಯಾಗಿ 'ಬಾನದಾರಿಯಲ್ಲಿ' ಚಿತ್ರದಲ್ಲಿ ರುಕ್ಮಿಣಿ ನಟಿಸಿದ್ದಾರೆ. ಚಿತ್ರದಲ್ಲಿ ಈಜುಪಟುವಾಗಿ ಮಿಂಚಿದ್ದಾರೆ. ಈ ವಾರವೇ ಸಿನಿಮಾ ತೆರೆಗೆ ಬರ್ತಿದೆ. ಇನ್ನು ಶ್ರೀಮುರಳಿ ನಟನೆಯ 'ಬಘೀರ' ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿರುವ ಬೆಂಗಳೂರು ಬೆಡಗಿ 'ಬೈರತಿ ರಣಗಲ್' ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿದ್ದಾರೆ. ಒಟ್ನಲ್ಲಿ ಈಗ ಸ್ಯಾಂಡಲ್‌ವುಡ್‌ನಲ್ಲಿ ರುಕ್ಮಿಣಿ ಹವಾ ಜೋರಾಗಿದೆ.
ಅತ್ತ ಟಾಲಿವುಡ್‌ನಲ್ಲಿ ಕೂಡ ಕನ್ನಡ ನಟಿಯರ ಕಾರುಬಾರು ಜೋರಾಗಿದೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ ಸ್ಟಾರ್ ನಟಿಯರಾಗಿ ಮಿಂಚುತ್ತಿದ್ದಾರೆ. ಇನ್ನು ನೇಹಾ ಶೆಟ್ಟಿ, ನಭಾ ನಟೇಶ್ ಸೇರಿದಂತೆ ಕೆಲವರು ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ತೆಲುಗು ಪ್ರೇಕ್ಷಕರು ಹಾಗೂ ತೆಲುಗು ಫಿಲ್ಮ್ ಮೇಕರ್ಸ್ ಗಮನ ಸೆಳೆದಿರುವ ರುಕ್ಮಿಣಿ ವಸಂತ್ ಶೀಘ್ರದಲ್ಲೇ ಟಾಲಿವುಡ್‌ಗೆ ಎಂಟ್ರಿ ಕೊಟ್ಟರೂ ಅಚ್ಚರಿಪಡಬೇಕಿಲ್ಲ.
'ಸಪ್ತ ಸಾಗರಾಲು ದಾಟಿ' ಚಿತ್ರದ ಪ್ರಚಾರದ ವೇಳೆ ಸಾಕಷ್ಟು ತೆಲುಗು ಸಂದರ್ಶನಗಳಲ್ಲಿ ರುಕ್ಮಿಣಿ ಮಾತನಾಡಿದ್ದಾರೆ. ನನಗೆ ತೆಲುಗು ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆ ಎಂದಿದ್ದಾರೆ. ತೆಲುಗಿನಲ್ಲಿ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ ಎಂದಿರುವ ನಟ ನಾನಿ ಜೊತೆ ನಟಿಸೋ ಆಸೆ ವ್ಯಕ್ತಪಡಿಸಿದ್ದರು. ರುಕ್ಮಿಣಿ ನನ್ನ ಹೊಸ ಕ್ರಶ್ ಎನ್ನುತ್ತಿರುವ ತೆಲುಗು ಬಾಬುಗಳು ಆಕೆಯನ್ನು ತಮ್ಮ ನೆಚ್ಚಿನ ನಟರ ಜೊತೆ ಜೋಡಿಯಾಗಿ ನೋಡಲು ಕಾಯುತ್ತಿದ್ದಾರೆ.


Click it and Unblock the Notifications











