ಟಾಲಿವುಡ್‌ನಲ್ಲಿ ರುಕ್ಮಿಣಿ ರಾಕ್ಸ್: ಸ್ಟಾರ್ ನಟನ ಚಿತ್ರಕ್ಕೆ ಸಹಿ ಮಾಡಿದ ಚೆಲುವೆ
'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾ ಮೂಲಕ ಮೋಡಿ ಮಾಡಿದ ರುಕ್ಮಿಣಿ ವಸಂತ್ ಇದೀಗ ಸೌತ್ ಸಿನಿದುನಿಯಾದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿರುವ ಚೆಲುವೆ ಈಗ ಟಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ದೇವರಕೊಂಡ ಮುಂದಿನ ಚಿತ್ರದಲ್ಲಿ ರುಕ್ಕು ನಟಿಸ್ತಾರೆ ಎನ್ನಲಾಗ್ತಿದೆ. ದಿಢೀರನೆ ಬೇರೆ ಚಿತ್ರಕ್ಕೆ ಸಹಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಶ್ರೀನಿ ನಿರ್ದೇಶನದ 'ಬೀರ್‌ಬಲ್' ಸಿನಿಮಾ ಮೂಲಕ ರುಕ್ಮಿಣಿ ಚಿತ್ರರಂಗಕ್ಕೆ ಬಂದರು. 'ಸಪ್ತಸಾಗರದಾಚೆ ಎಲ್ಲೋ' ಬಳಿಕ ಗಣೇಶ್ ನಟನೆಯ 'ಬಾನ ದಾರಿಯಲ್ಲಿ' ಚಿತ್ರದಲ್ಲೂ ಮಿಂಚಿದ್ದರು. ಸದ್ಯ ಶ್ರೀಮುರಳಿ ಜೋಡಿಯಾಗಿ 'ಬಘೀರ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಬೈರತಿ ರಣಗಲ್' ಚಿತ್ರದಲ್ಲಿ ಶಿವಣ್ಣನ ಜೊತೆ ನಟಿಸೋ ಅವಕಾಶ ಸಿಕ್ಕಿದೆ.

'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿತ್ತು. ರುಕ್ಕು ಚೆಲುವು, ನಟನೆ ನೋಡಿ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದರು. ಕೆಲವರ ಪಾಲಿಗೆ ಈ ಬೆಂಗಳೂರು ಬೆಡಗಿ ಕ್ರಶ್ ಆಗಿಬಿಟ್ಟರು. ಅದೇ ಕಾರಣಕ್ಕೆ ಆಕೆ ಟಾಲಿವುಡ್ ಎಂಟ್ರಿ ಬಗ್ಗೆ ಭಾರೀ ಚರ್ಚೆ ನಡೀತಿತ್ತು. ನಿತಿನ್ ಜೋಡಿಯಾಗಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು.
ವಿಜಯ್ ದೇವರಕೊಂಡ ನಟನೆಯ ಹೊಸ ಚಿತ್ರಕ್ಕೂ ರುಕ್ಮಿಣಿ ನಾಯಕಿಯಾಗುತ್ತಾರೆ ಎನ್ನುವ ಗುಸು ಗುಸು ಶುರುವಾಗಿತ್ತು. ಶ್ರೀಲೀಲಾ ಈಗಾಗಲೇ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇದೀಗ ಆಕೆ ಹೊರ ಬಂದಿದ್ದು ಹೊಸ ನಟಿಯ ಹುಡುಕಾಟದಲ್ಲಿ ಚಿತ್ರತಂಡ ಇದೆ ಎನ್ನಲಾಗ್ತಿದೆ. ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ ಹೆಸರು ಕೂಡ ಈ ಚಿತ್ರಕ್ಕೆ ಕೇಳಿಬರ್ತಿದೆ. ಇದೆಲ್ಲದರ ನಡುವೆ ರುಕ್ಮಿಣಿ ಹೆಸರು ಚಾಲ್ತಿ ಬಂದಿತ್ತು.

ರವಿತೇಜಾ ಹೊಸ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆ ಆಗಿರುವ ಮಾತುಗಳು ಕೇಳಿಬರ್ತಿದೆ. ಈಗಾಗಲೇ ಚಿತ್ರಕ್ಕೆ ಸ್ಯಾಂಡಲ್‌ವುಡ್ ಸಹಿ ಮಾಡಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಅನುದೀಪ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು ಸಿತಾರಾ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಜನವರಿ 26ಕ್ಕೆ ಅಧಿಕೃತವಾಗಿ ಸಿನಿಮಾ ಘೋಷಣೆ ಆಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.
'ಜಾತಿ ರತ್ನಾಲು' ಎನ್ನುವ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಕೊಟ್ಟು ಅನುದೀಪ್ ಗಮನ ಸೆಳೆದಿದ್ದರು. ಇದೀಗ ಅನುದೀಪ್ ಜೊತೆ ಟಾಲಿವುಡ್ ಮಾಸ್ ಮಹಾರಾಜ ರವಿತೇಜ ಕೈ ಜೋಡಿಸಿದ್ದಾರೆ. ಸಿತಾರಾ ಸಂಸ್ಥೆ ರವಿತೇಜಾ ಜೊತೆ 'ಭೀಮ್ಲಾ ನಾಯಕ್' ಸಿನಿಮಾ ಮಾಡಲು ಮುಂದಾಗಿತ್ತು. ಆದರೆ ಪವನ್ ಕಲ್ಯಾಣ್ ಆ ಪಾತ್ರ ಮಾಡುವಂತಾಯಿತು. ಹಾಗಾಗಿ ರವಿತೇಜಗಾಗಿ ಸಂಸ್ಥೆ ಹೊಸ ಸಿನಿಮಾ ಕೈಗೆತ್ತಿಕೊಂಡಿದೆ.
ಕನ್ನಡದಲ್ಲೂ ರುಕ್ಮಿಣಿ ವಸಂತ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಟಾಲಿವುಡ್ ಪ್ರವೇಶ ಮಾಡಿದ್ದಾರೆ. ಈಗಾಗಲೇ ಕನ್ನಡದ ಸಾಕಷ್ಟು ನಟಿಯರು ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ನಭಾ ನಟೇಶ್, ಶ್ರೀಲೀಲಾ, ಶ್ರದ್ಧಾ ಶ್ರೀನಾಥ್ ಹಾಗೂ ಆಶಿಕಾ ರಂಗನಾಥ್ ತೆಲುಗು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಸಪ್ತಮಿ ಗೌಡ ಸಹ ತೆಲುಗು ಚಿತ್ರಕ್ಕೆ ಸಹಿ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಬಾಲಿವುಡ್ ಎಂಟ್ರಿ ಬಳಿಕ ಟಾಲಿವುಡ್‌ನಲ್ಲಿ ಶ್ರೀಲೀಲಾ ಕ್ರೇಜ್ ಹೆಚ್ಚಾಗಿತ್ತು. ಇದೀಗ ಕಿಸ್ ಬೆಡಗಿಗೆ ರುಕ್ಮಿಣಿ ವಸಂತ್ ಪೈಪೋಟಿ ಕೊಡುವಂತೆ ಕಾಣುತ್ತಿದೆ. ಕನ್ನಡದಲ್ಲೂ ಸಾಕಷ್ಟು ಕಥೆಗಳನ್ನು ಆಕೆ ಕೇಳುತ್ತಿದ್ದಾರೆ. ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.


Click it and Unblock the Notifications











