"ನಮ್ಮ ತಾಯಿನ ಮದ್ವೆ ಆಗೋಕು ಮೊದ್ಲೆ ಪರಿಚಯ ಇತ್ತು, ಆಗ್ಲೇ ರಾಜಮೌಳಿ ತಂದೆ ಅಂತ ಫಿಕ್ಸ್ ಆಗಿಬಿಟ್ಟಿದ್ದೆ": ಕಾರ್ತಿಕೇಯ
ನಿರ್ದೇಶಕ ಎಸ್. ಎಸ್ ರಾಜಮೌಳಿ ಹಾಗೂ ರಮಾ ರಾಜಮೌಳಿ ಬಗ್ಗೆ ಪುತ್ರ ಎಸ್. ಎಸ್ ಕಾರ್ತಿಕೇಯ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಕಾರ್ತಿಕೇಯ ಕೂಡ ಸಿನಿಮಾ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'RRR' ಚಿತ್ರ ಆಸ್ಕರ್ ಪ್ರಶಸ್ತಿ ಗೆಲ್ಲುವಲ್ಲಿ ಈತನ ಶ್ರಮವೂ ಇದೆ. ಕಾರ್ತಿಕೇಯ ನಿರ್ದೇಶಕ ರಾಜಮೌಳಿ ಸ್ವಂತ ಮಗ ಅಲ್ಲ ಅನ್ನೋದು ಬಹಳ ಜನಕ್ಕೆ ಗೊತ್ತಿಲ್ಲ.
ಮೌಳಿ ಹಾಗೂ ರಮಾ ಪ್ರೀತಿಸಿ ಮದುವೆ ಆಗಿದ್ದರು. ಅದಕ್ಕಿಂತ ಏಳೆಂಟು ವರ್ಷಗಳ ಮುಂದೆ ಕಾರ್ತಿಕೇಯ ಹುಟ್ಟಿದ್ದರು. ಮೊದಲಿಗೆ ರಾಜಮೌಳಿ ಜೊತೆ ಮದುವೆಗೆ ನಿರಾಕರಿಸಿದ್ದ ರಮಾ, ಕಾರ್ತಿಕೇಯ ಮೇಲೆ ರಾಜಮೌಳಿ ತೋರುತ್ತಿದ್ದ ಪ್ರೀತಿ ಕಂಡು ಒಪ್ಪಿಕೊಂಡಿದ್ದರಂತೆ. ಮದುವೆಗೂ ಮೊದಲು ರಮಾ, ಕೀರವಾಣಿ, ರಾಜಮೌಳಿ ಎಲ್ಲರೂ ಸಂಬಂಧಿಕರಾಗಿದ್ದರು. ಮದುವೆ ನಂತರ ರಾಜಮೌಳಿ- ಕಾರ್ತೀಕೇಯ ತಂದೆ ಮಗನಂತೆಯೇ ಇದ್ದಾರೆ. ಯಾವತ್ತು ಇವರಿಬ್ಬರು ಸ್ವಂತ ತಂದೆ ಮಗ ಅಲ್ಲ ಎನ್ನುವ ಅನುಮಾನ ಬಂದಿರಲಿಲ್ಲ.

ಸದ್ಯ ಸಂದರ್ಶನವೊಂದರಲ್ಲಿ ಎಸ್. ಎಸ್ ಕಾರ್ತಿಕೇಯ ಸಿನಿಮಾ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಆಸ್ಕರ್ ಚಿತ್ರಕ್ಕೆ ಆಸ್ಕರ್ ಸಿಗಲು 80 ಕೋಟಿ ರೂ. ವ್ಯಯಿಸಿದ್ದರಂತೆ ಎನ್ನುವ ವದಂತಿ ಬಗ್ಗೆ ಪ್ರತಿಕ್ರಿಯಿಸಿದ್ಧಾರೆ. "RRR ಚಿತ್ರವನ್ನು ಆಸ್ಕರ್‌ಗೆ ಯಾವ ಯಾವ ವಿಭಾಗದಲ್ಲಿ ಪ್ರಶಸ್ತಿಗಾಗಿ ಕಳುಹಿಸಬೇಕು ಎನ್ನುವ ಚರ್ಚೆ ಮಾಡ್ತಾ ಮಾಡ್ತಾ, ಬೆಸ್ಟ್ ಫಿಲ್ಮ್ ಕೆಟಗರಿಗೆ ಕಳುಹಿಸಿದರೆ ಪ್ರಶಸ್ತಿ ಬರುತ್ತೆ ಎಂದುಕೊಂಡಿದ್ದೆವು. ಆದರೆ ನಿರಾಸೆ ಆಗಲಿಲ್ಲ. ಯಾಕಂದರೆ ನಾವು 'ನಾಟು ನಾಟು' ಹಾಡಿನಿಂದಲೇ ಆಸ್ಕರ್ ಪ್ರಚಾರ ಮಾಡಿದ್ದೆವು."
"ಆಸ್ಕರ್‌ಗಾಗಿ 80 ಕೋಟಿ ರೂ. ಖರ್ಚಾಯ್ತು ಅನ್ನುವುದು ಸುಳ್ಳು. ಅಂದಾಜು 8 ರಿಂದ 9 ಕೋಟಿ ರೂ. ವ್ಯಯಿಸಿದೆವು. 80 ಕೋಟಿ ರೂ. ಅನ್ನುವ ವದಂತಿ ಹೇಗೆ ಹಬ್ಬಿತು ಅನ್ನುವುದು ಗೊತ್ತಿಲ್ಲ. 80 ಕೋಟಿ ರೂ. ಅಂದರೆ ಎಷ್ಟು ದೊಡ್ಡ ಮೊತ್ತ. ಅಷ್ಟೊಂದಲ್ಲ ನಾವು ಯಾಕೆ ಖರ್ಚು ಮಾಡಬೇಕು. ನಮಗೂ ಈ ಸುದ್ದಿ ನೋಡಿದಾಗ ವಿಚಿತ್ರ ಅನ್ನಿಸಿತು. ಆದರೆ ನಾವು ಈ ಬಗ್ಗೆ ಎಲ್ಲೂ ಮಾತನಾಡಲು ಹೋಗಲಿಲ್ಲ. ಈಗ ಸಂದರ್ಶನದಲ್ಲಿ ಕೇಳಿದ್ದಕ್ಕೆ ಹೇಳುತ್ತಿದ್ದೇನೆ ಅಷ್ಟೆ. 8ರಿಂದ 9 ಕೋಟಿ ರೂ. ಖರ್ಚಾಯ್ತು" ಎಂದು ಎಸ್. ಎಸ್ ಕಾರ್ತಿಕೇಯ ಹೇಳಿದ್ದಾರೆ.

"ನನ್ನ ಪತ್ನಿ ಪೂಜಾ ಗಾಯಕಿ, ಅವಳನ್ನು ಹಾಡಬೇಕೆಂದು ನಮಗೂ ಇದೆ. ಆದರೆ ಅವಳು ಒಪ್ಪುತ್ತಿಲ್ಲ" ಎಂದಿದ್ದಾರೆ. ಇನ್ನು ನಿಮ್ಮ ಅಮ್ಮ ಸಿಂಗಲ್ ಮದರ್.. ಆ ಸಮದಲ್ಲಿ ರಾಜಮೌಳಿ ಅವರು ಬಂದು ಅವರನ್ನು ಮದುವೆ ಆಗುತ್ತೀನಿ ಅಂದಾಗ ನಿಮಗೆ ಹೇಗನಿಸಿತು ಎನ್ನುವ ಪ್ರಶ್ನೆಗೆ "ಅಮ್ಮ, ರಾಜಮೌಳಿ ಅವರು ಮದುವೆ ಆಗುವುದಕ್ಕೆ ಒಂದು ವರ್ಷ ಮುಂಚಿನಿಂದಲೂ ನಮ್ಮ ಮನೆಗೆ ಬರುತ್ತಿದ್ದರು. ನನ್ನನ್ನು ಅಮ್ಮನನ್ನು ಡಿನ್ನರ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಅವರು ಶೂಟಿಂಗ್ ಬ್ಯುಸಿಯಲ್ಲಿ ಬರದೇ ಇದ್ದರೆ ನಾನೇ ಫೋನ್ ಮಾಡಿ ಯಾಕೆ ಬಂದಿಲ್ಲ ಎಂದು ಕೇಳುತ್ತಿದ್ದೆ"
"ಸಂಬಂಧಿಕರೇ ಆಗಿದ್ದರಿಂದ ರಾಜಮೌಳಿ ಅವರು ಮೊದಲಿನಿಂದಲೂ ಗೊತ್ತಿತ್ತು. ಆದರೆ ಮದುವೆಗೂ ಒಂದು ವರ್ಷ ಮೊದಲು ಮನೆಗೆ ಹೆಚ್ಚು ಬರುತ್ತಿದ್ದರು. ನನಗೆ ಆಗ 8ರಿಂದ 9ವರ್ಷ ವಯಸ್ಸು. ಅಮ್ಮ, ನಾನು ಅವರೊಟ್ಟಿಗೆ ಹೊರಗೆ ಹೋಗುತ್ತಿದ್ದೆವು. ಆಗಲೇ ನನಗೆ ತಂದೆಯ ವೈಬ್ ಬಂದುಬಿಟ್ಟಿತ್ತು. ಒಬ್ಬ ತಂದೆ ರೀತಿ ಫೀಲ್ ಆಗುತ್ತಿತ್ತು. ಮೈಂಡ್‌ನಲ್ಲಿ ತಂದೆ ಅಂತ ಫಿಕ್ಸ್ ಆಗಿಬಿಟ್ಟಿದ್ದೆ. ಅವರನ್ನು ಬಿಡಬೇಕು ಎಂದು ಅನ್ನಿಸಲಿಲ್ಲ. ಮದುವೆ ಆದಾಗ ಓಕೆ, ಇದೇ ಅಲ್ವೇ ಆಗಬೇಕಿದ್ದಿದ್ದು ಅನ್ನಿಸಿತ್ತು" ಎಂದು ವಿವರಿಸಿದ್ದಾರೆ.


Click it and Unblock the Notifications











