30 ರು. ನಿಂದ ವೃತ್ತಿ ಆರಂಭಿಸಿದ ಸಂಗೀತ ನಿರ್ದೇಶಕ ತಮನ್ ಸಂಭಾವನೆ ಈಗೆಷ್ಟು ಗೊತ್ತೆ?
ಪ್ರತಿಭೆ ಹಾಗೂ ಪರಿಶ್ರಮವಿದ್ದರೆ ಹಣ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಇದಕ್ಕೆ ಸಿನಿಮಾರಂಗದಲ್ಲಿಯಂತೂ ಸಾವಿರಾರು ಜನರು ಉದಾಹರಣೆಯಾಗಿ ಸಿಗುತ್ತಾರೆ. ಅದರಲ್ಲೊಬ್ಬರು ಸಂಗೀತ ನಿರ್ದೇಶಕ ಎಸ್ ತಮನ್.
ಸಂಗೀತ ನಿರ್ದೇಶಕ ಎಸ್ ತಮನ್, ಬಹಳ ಕಡಿಮೆ ಸಂಬಳಕ್ಕೆ ವೃತ್ತಿ ಆರಂಭಿಸಿದವರು. ಅವರ ಮೊದಲ ಸಂಬಳ ಕೇವಲ 30 ರೂಪಾಯಿ. ಆದರೆ ಇಂದು ದಕ್ಷಿಣ ಭಾರತದ ಸೆಲೆಬ್ರಿಟಿ ಸಂಗೀತ ನಿರ್ದೇಶಕ.
ಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ಘಂಟಸಾಲ ಬಾಲರಾಮಯ್ಯ ಅವರ ಮೊಮ್ಮಗ ಎಸ್.ತಮನ್. ತನ್ನ 13 ನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಎಸ್.ತಮನ್ ಶಿಕ್ಷಣಕ್ಕೆ ತಿಲಾಂಜಲಿ ಇಟ್ಟು, ಸಂಗೀತದಲ್ಲೇ ಜೀವನ ಕಟ್ಟಿಕೊಳ್ಳಲು ಆರಂಭಿಸಿದರು. ಸಾಕಷ್ಟು ಕಷ್ಟದ ದಿನಗಳನ್ನು ಕಂಡಿರುವ ಸ್.ತಮನ್ ಈಗ ದಕ್ಷಿಣ ಭಾರತದ ಸ್ಟಾರ್ ಸಂಗೀತ ನಿರ್ದೇಶಕ.

11 ನೇ ವಯಸ್ಸಿನಲ್ಲಿಯೇ ಸಿನಿಮಾಕ್ಕಾಗಿ ಕೆಲಸ
ತನ್ನ 11 ನೇ ವಯಸ್ಸಿನಲ್ಲಿಯೇ ಬಾಲಕೃಷ್ಣ ನಟನೆಯ ಭೈರವ ದ್ವೀಪಂ ಸಿನಿಮಾಕ್ಕೆ ಸಹಾಯಕ ಸಂಗೀತಗಾರನಾಗಿ ದುಡಿದ್ದರು ಎಸ್.ತಮನ್. ಆಗ ಅವರಿಗೆ ಸಿಕ್ಕದ್ದ ಸಂಭಾವನೆ ಕೇವಲ 30 ರುಪಾಯಿ. ಆಗಿನ್ನೂ ಸಂಗೀತ ಎನ್ನುವುದು ತಮನ್‌ಗೆ ಕೇವಲ ಹವ್ಯಾಸವಾಗಿ ಮಾತ್ರವೇ ಇತ್ತು.

13ನೇ ವಯಸ್ಸಿನಲ್ಲಿ ಶಿಕ್ಷಣಕ್ಕೆ ವಿದಾಯ ಹೇಳಿದ್ದ ತಮನ್
ನಂತರ ಎಸ್.ತಮನ್ 13ನೇ ವಯಸ್ಸಿನವರಾಗಿದ್ದಾಗ ತಂದೆ ತೀರಿಕೊಂಡರು. ಆಗ ಅನಿವಾರ್ಯವಾಗಿ ಶಿಕ್ಷಣಕ್ಕೆ ಫುಲ್‌ಸ್ಟಾಪ್ ಇಟ್ಟು ಸಂಗೀತವನ್ನು ವೃತ್ತಿಯಾಗಿ ಆಯ್ದುಕೊಂಡರು ತಮನ್. ಆ ವಯಸ್ಸಿನಲ್ಲಿಯೇ ಸಂಗೀತ ನಿರ್ದೇಶಕ ಜೋಡಿ ರಾಜ್-ಕೋಟಿಯನ್ನು ಸೇರಿಕೊಂಡು ಮೂರು ವರ್ಷ ಕೆಲಸ ಮಾಡಿದರು.

ಮಣಿಶರ್ಮಾ ಎಸ್ ತಮನ್ ಅವರ ಗುರುಗಳಂತೆ
ನಂತರ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಬಳಿ ಮೂರು ವರ್ಷ. ವಿ.ಶ್ರೀನಿವಾಸ್, ಆರ್‌ಪಿ ಪಟ್ನಾಯಕ್, ಚಕ್ರಿ, ದೇವಿಶ್ರೀಪ್ರಸಾದ್ ಅವರುಗಳ ಬಳಿಯೆಲ್ಲಾ ಸಹಾಯಕನಾಗಿ ದುಡಿದ ಎಸ್.ತಮನ್ ಸಂಗೀತವನ್ನು ಕಲಿಯುತ್ತಾ ಸಾಗಿದರು. 'ನನ್ನ ಗುರು ಮಣಿಶರ್ಮಾ' ಎಂದು ಹೇಳಿಕೊಳ್ಳುವ ತಮನ್ ಮಣಿಶರ್ಮಾ ಬಳಿ ಬರೋಬ್ಬರಿ ಎಂಟು ವರ್ಷಗಳ ಕಾಲ ಸಂಗೀತ ಸಹಾಯಕನಾಗಿ ದುಡಿದರು.

25ನೇ ವಯಸ್ಸಿನಲ್ಲಿ ಸಂಗೀತ ನಿರ್ದೇಶನ ಆರಂಭ
ತಮ್ಮ 25 ನೇ ವಯಸ್ಸಿನಲ್ಲಿ ಮೊದಲ ಸಿನಿಮಾಕ್ಕೆ ಸ್ವತಂತ್ರ್ಯವಾಗಿ ಸಂಗೀತ ನಿರ್ದೇಶನ ಮಾಡಿದರು ಎಸ್.ತಮನ್. 2009 ರ 'ಕಿಕ್' ಸಿನಿಮಾ ಅವರಿಗೆ ಭಾರಿ ಯಶಸ್ಸು ತಂದುಕೊಟ್ಟಿತು. ಆ ನಂತರ ತಿರುಗಿ ನೋಡಿದ್ದೇ ಇಲ್ಲ. ತೆಲುಗು, ತಮಿಳಿನ ಬೇಡಿಕೆಯ ಸಂಗೀತ ನಿರ್ದೇಶಕ ಎಸ್.ತಮನ್, ಕನ್ನಡದಲ್ಲಿಯೂ ಐದು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
Recommended Video

ತಮನ್ ಈಗಿನ ಸಂಭಾವನೆ ಎಷ್ಟು?
ಸಾಕಷ್ಟು ಹಿಟ್ ಹಾಡುಗಳನ್ನು ನೀಡಿರುವ ತಮನ್ 'ಅಲಾ ವೈಕುಂಟಪುರಂಲೊ' ಸಿನಿಮಾದ ನಂತರ ತಮ್ಮ ಸಂಭಾವನೆ ಏರಿಸಿಕೊಂಡಿದ್ದಾರೆ. ಈ ಮೊದಲು ಸಿನಿಮಾಕ್ಕೆ 50 ಲಕ್ಷ ತೆಗೆದುಕೊಳ್ಳುತ್ತಿದ್ದ ಎಸ್.ತಮನ್. ಮುಂದೆ ತಾನು ಕೆಲಸ ಮಾಡಲಿರುವ ಜೂ.ಎನ್‌ಟಿಆರ್-ಪೂಜಾ ಹೆಗ್ಡೆ ಸಿನಿಮಾಕ್ಕೆ ಒಂದು ಕೋಟಿ ಬೇಡಿಕೆ ಇಟ್ಟಿದ್ದಾರಂತೆ. 30 ರೂಪಾಯಿಯಿಂದ ವೃತ್ತಿ ಆರಂಭಿಸಿದ್ದ ತಮನ್ ಈಗ ಕೋಟಿ ಗಳಿಸುತ್ತಿದ್ದಾರೆ.


Click it and Unblock the Notifications











