ಬೈಕ್ ಅಪಘಾತದಲ್ಲಿ ಸಾಯಿಧರಂ ತೇಜ್ ಪ್ರಾಣ ಉಳಿಸಿದ್ದ ವ್ಯಕ್ತಿಗೆ ಟಾರ್ಚರ್; ಕೊನೆಗೂ ಮೌನ ಮುರಿದ ಅಬ್ದುಲ್
2 ವರ್ಷಗಳ ಹಿಂದೆ ತೆಲುಗು ನಟ ಸಾಯಿ ಧರಂ ತೇಜ್ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಸಾಯಿ ಚಲಾಯಿಸುತ್ತಿದ್ದ ಸ್ಪೋರ್ಟ್ಸ್ ಬೈಕ್ ಸ್ಕಿಡ್ ಆಗಿ ಬಿದ್ದು ಈ ಘಟನೆ ನಡೆದಿತ್ತು. ಕೆಲ ದಿನ ಕೋಮಾಗೆ ಹೋಗಿದ್ದ ನಟ ಸಾವಿನ ಕದ ತಟ್ಟಿ ಬಂದಿದ್ದರು. ಅಪಘಾತವಾದ ತಕ್ಷಣ ಸ್ಥಳದಲ್ಲೇ ಇದ್ದ ಅಬ್ದುಲ್ ಎಂಬ ವ್ಯಕ್ತಿ ಸಾಯಿನ ಆಸ್ಪತ್ರೆಗೆ ಸೇರಿಸಿದ್ದರು.
ಅಬ್ದುಲ್ ಫರ್ಹಾನ್ ಸಕಾಲಕ್ಕೆ ಸಾಯಿಧರಂ ತೇಜ್‌ನ ಆಸ್ಪತ್ರೆಗೆ ಸೇರಿಸಿದ್ದರಿಂದಲೇ ವೈದ್ಯರು ಬೇಗ ಚಿಕಿತ್ಸೆ ನೀಡಿ ಪ್ರಾಣ ಉಳಿಸಲಾಗಿತ್ತು. ಸಕಾಲಕ್ಕೆ ಸಾಯಿಗೆ ಚಿಕಿತ್ಸೆ ಸಿಗುವಂತೆ ಮಾಡಿದ ಅಬ್ದುಲ್‌ಗೆ ಮೆಗಾ ಫ್ಯಾಮಿಲಿ ಲಕ್ಷ ರೂ. ಹಣ, ಕಾರು, ಬೈಕು, ಬಂಗ್ಲೆ ಉಡುಗೊರೆಯಾಗಿ ನೀಡಿದರು ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿತ್ತು. ಆದರೆ ಈ ವೈರಲ್ ಸುದ್ದಿಗಳಿಂದ ಆತ ಟಾರ್ಚರ್ ಅನುಭವಿಸುವಂತಾಗಿದೆ. ಈ ವಿಚಾರವನ್ನು ಸ್ವತಃ ಅಬ್ದುಲ್ ಈಗ ಹೇಳಿಕೊಂಡಿದ್ದಾರೆ.

ಚಿರಂಜೀವಿ ಸೋದರಳಿಯ ಸಾಯಿ ಧರಂ ಅಪಘಾತದಿಂದ ಚೇತರಿಸಿಕೊಂಡು ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವಾರ ಬಿಡುಗಡೆಯಾದ 'ವಿರೂಪಾಕ್ಷ' ಚಿತ್ರದಲ್ಲಿ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಪ್ರಚಾರದ ವೇಳೆ ತಮಗಾದ ಅಪಘಾತದ ಬಗ್ಗೆ ಸಾಯಿ ಮಾತನಾಡಿದ್ದರು. ಇದೇ ವೇಳೆ ಅಬ್ದುಲ್ ಸಹಾಯವನ್ನು ನೆನೆದಿದ್ದರು. "ಆತನನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದೆ. ಸ್ವಲ್ಪ ಹಣ ಕೊಟ್ಟು ಸುಮ್ಮನಾಗಲಿಲ್ಲ. ನನ್ನ ಫೋನ್ ನಂಬರ್ ಕೊಟ್ಟು ಏನೇ ಸಮಸ್ಯೆ ಇದ್ದರು ಕರೆ ಮಾಡು ಎಂದು ಹೇಳಿದ್ದೇನೆ" ಎಂದು ಹೇಳಿದ್ದರು.
ಸಾಯಿ ಧರಂ ಹೇಳಿಕೆ ವೈರಲ್ ಆಗುತ್ತಿದ್ದಂತೆ ಅಬ್ದುಲ್ ಪ್ರತಿಕ್ರಿಯಿಸಿದ್ದಾರೆ. ನನ್ನನ್ನು ಮೆಗಾ ಫ್ಯಾಮಿಲಿಯ ಯಾರೊಬ್ಬರು ಈವರೆಗೆ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಈ ಘಟನೆಯಿಂದ ನನಗೆ ಸಾಕಷ್ಟು ಸಮಸ್ಯೆ ಎದುರಾಯಿತು, ನನ್ನ ಕೆಲಸ ಹೋಗುವಂತಾಯಿತು ಎಂದಿದ್ದಾರೆ. ಆ ಘಟನೆ ನಂತರ ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಸುದ್ದಿಗಳು ಹರಿದಾಡಿತ್ತು. ಚಿರಂಜೀವಿ, ರಾಮ್‌ಚರಣ್, ಪವನ್ ಕಲ್ಯಾಣ್ ಅದು ಕೊಟ್ಟರು, ಇದು ಕೊಟ್ಟರು, ಕಾರು, ಬೈಕ್, ಬಂಗ್ಲೇ ಹೀಗೆ ಏನೇನೋ ಸುದ್ದಿ ಬಂತು. ಇದರ ಬೆನ್ನಲ್ಲೇ ನನಗೆ ಟಾರ್ಚರ್ ಶುರುವಾಯಿತು ಎಂದಿದ್ದಾರೆ.

ಸ್ನೇಹಿತರು, ನೆಂಟರು ಕರೆ ಮಾಡಿ ಏನಪ್ಪಾ ಹೀರೋ ಆಗಬಿಟ್ಟಿದ್ದೀಯಾ? ಮೆಗಾ ಫ್ಯಾಮಿಲಿಯಿಂದ ಅದು ಕೊಟ್ರಂತೆ, ಇದು ಸಿಕ್ತಂತೆ ಅಂತೆಲ್ಲಾ ಕೇಳೋಕೆ ಶುರು ಮಾಡಿದರು. ಕೆಲಸ ಮಾಡುವ ಜಾಗದಲ್ಲೂ ಇದೇ ಚರ್ಚೆ ಆರಂಭವಾಯಿತು. ಎಲ್ಲರೂ ಇದರ ಬಗ್ಗೆಯೇ ಮಾತನಾಡಲು ಶುರು ಮಾಡಿದರು. ಯಾರು ಸಹಾಯ ಮಾಡಿಲ್ಲ ಎಂದರೂ ಕೇಳುತ್ತಿರಲಿಲ್ಲ. ರಿವಾರ್ಡ್ ಸಿಗದಿದ್ದರೂ, ಸಿಕ್ತಾ? ಜಾಕ್‌ಪಾಟ್ ಹಡ್ದೆ ಬಿಡು? ಅಂತೆಲ್ಲಾ ಮಾತನಾಡುತ್ತಿದ್ದದ್ದು ಹಿಂಸೆ ಎನಿಸುತ್ತಿತ್ತು.
ಇನ್ನು ಸಾಯಿಧರಂ ತೇಜ್ ನನ್ನನ್ನು ಭೇಟಿ ಮಾಡಿ ಫೋನ್ ನಂಬರ್ ಕೊಟ್ಟಿದ್ದಾರೆ ಎನ್ನುವುದೆಲ್ಲಾ ಸುಳ್ಳು ಎಂದು ಅಬ್ದುಲ್ ಹೇಳಿದ್ದಾರೆ. ಸದ್ಯ ಬೇರೆ ಕಡೆ ಕೆಲಸಕ್ಕೆ ಸೇರಿದ್ದೀನಿ. ಆದರೆ ಈಗಲೂ ನನಗೆ ಸಹಾಯ ಸಿಕ್ಕಿದೆ ಎನ್ನುವ ಬಗ್ಗೆ ಏನೇನೋ ಸುದ್ದಿ ಹರಿದಾಡುತ್ತಲೇ ಇದೆ. ಈಗಲೂ ಇಂತಹ ಸುದ್ದಿಗಳಿಂದ ಸಮಸ್ಯೆ ಎದುರಿಸುತ್ತಲೇ ಇದ್ದೀನಿ, ದಯವಿಟ್ಟು ಇಂತಹ ಸುಳ್ಳು ಪ್ರಚಾರ ನಿಲ್ಲಿಸಿ ಎಂದು ಅಬ್ದುಲ್ ಕೇಳಿಕೊಂಡಿದ್ದಾರೆ.
'ವಿರೂಪಾಕ್ಷ' ನಂತರ ಸಾಯಿ ಧರಂ ತೇಜ್ ತಮಿಳಿನ 'ವಿನೋದಯ ಸಿತಂ' ಚಿತ್ರದಲ್ಲಿ ನಟಿಸಿದ್ದಾರೆ. ಪವನ್ ಕಲ್ಯಾಣ್ ಕೂಡ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತಮಿಳು ನಟ, ನಿರ್ದೇಶಕ ಸಮುದ್ರ ಖನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











