ವೇದಿಕೆ ಮೇಲೆ ಭಾವುಕಳಾಗಿ ಅತ್ತ ನಟಿ ಸಾಯಿ ಪಲ್ಲವಿ
ದಕ್ಷಿಣ ಭಾರತದ ಪ್ರತಿಭಾವಂತ ನಟಿಯರಲ್ಲಿ ಸಾಯಿ ಪಲ್ಲವಿ ಒಬ್ಬರು. ಅವರ ನಟನೆ, ಡ್ಯಾನ್ಸ್, ಸರಳತೆ ಅವರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಬಹುದೊಡ್ಡ ಅಭಿಮಾನಿ ವರ್ಗವನ್ನು ಸಂಪಾದಿಸಿಕೊಟ್ಟಿದೆ.
ನಟಿ ಸಾಯಿ ಪಲ್ಲವಿ ನಟಿಸಿರುವ 'ಶ್ಯಾಮ ಸಿಂಘ ರಾಯ್' ತೆಲುಗು ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆಯಷ್ಟೆ ಅದ್ಧೂರಿಯಾಗಿ ನಡೆದಿದೆ.
ಸಾಮಾನ್ಯವಾಗಿ ನಟಿಯರು ಇಂಥ ಕಾರ್ಯಕ್ರಮಗಳಿಗೆ ಗ್ಲಾಮರ್ ತುಂಬಲು, ಹಾಗೂ ನಾಯಕನನ್ನು, ನಿರ್ದೇಶಕನನ್ನು ಹೊಗಳಲು ಅಷ್ಟೆ ತಮ್ಮನ್ನು ಸೀಮಿತವಾಗಿರಿಕೊಳ್ಳುತ್ತಾರೆ. ಆದರೆ ನಟಿ ಸಾಯಿ ಪಲ್ಲವಿ ಎಲ್ಲ ನಟಿಯರಂತಲ್ಲ. ನಿನ್ನೆ ಕಾರ್ಯಕ್ರಮದಲ್ಲಿ ನಟಿ ಸಾಯಿ ಪಲ್ಲವಿ ಅಭಿಮಾನಿಗಳ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ. ಮಾತನಾಡುತ್ತಾ ವೇದಿಕೆ ಮೇಲೆಯೇ ಕಣ್ಣೀರು ಸುರಿಸಿದ್ದಾರೆ.
''ನಾವು ಎಷ್ಟು ಪುಣ್ಯವಂತರು ಎಂದು ನನಗೆ ಆಶ್ಚರ್ಯವಾಗುತ್ತದೆ. ನಾವು ಕಲಾದೇವಿಯಿಂದ ಆರಿಸಿಕೊಳ್ಳಲ್ಪಿಟ್ಟಿದ್ದೀವಿ. ನಾವು ಜನರನ್ನು ಮನೋರಂಜಿಸುತ್ತೇವೆ. ಮತ್ತು ಜನರಿಂದ ಪ್ರೀತಿಸಲ್ಪಡುತ್ತೇವೆ. ಇದು ಸಾಮಾನ್ಯದ್ದಲ್ಲ. ಹಾಗಾಗಿಯೇ ನಾವು ಕಲಾವಿದರು ಮಾಡಿರುವ ಪುಣ್ಯ, ನಿಮ್ಮಿಂದ ಪ್ರೀತಿಸಲ್ಪಡುವುದು ನಮಗೆ ದೊರೆತ ದೇವರ ಆಶೀರ್ವಾದ ಎನಿಸಿ ಭಾವುಕಳಾದೆ'' ಎಂದರು ಸಾಯಿ ಪಲ್ಲವಿ.

''ಹಲವಾರು ಮಂದಿ ನಟರಾಗುವ ಕನಸು ಕಾಣುತ್ತಿದ್ದಾರೆ''
''ಹೊರಗೆ ಬಹಳಷ್ಟು ಜನ ಇದ್ದಾರೆ. ಕನಸು ಕಾಣುತ್ತಿರುತ್ತಾರೆ. ನಾವು ಜೀವನದಲ್ಲಿ ಏನಾದರೂ ಸಾಧಿಸಬೇಕು, ನಟರಾಗಬೇಕು, ಡ್ಯಾನ್ಸರ್ ಆಗಬೇಕು ಎಂದುಕೊಳ್ಳುತ್ತಿರುತ್ತಾರೆ. ಆದರೆ ಆ ಅವಕಾಶ ಕೆಲವರಿಗೆ ಮಾತ್ರವೇ ಬರುತ್ತದೆ. ಅಂಥ ಅದೃಷ್ಟ ನನ್ನದಾಗಿದೆ. ನನ್ನನ್ನು ನಂಬಿ ಈ ಸಿನಿಮಾ ಮಾತ್ರವಲ್ಲ ಇದರ ಮುಂಚೆ ಬಂದ ಸಿನಿಮಾ, ಇದರ ನಂತರ ಬಂದ ಸಿನಿಮಾಗಳು ಎಲ್ಲ ನಿರ್ದೇಶಕರಿಗೆ ನಾನು ಆಭಾರಿಯಾಗಿದ್ದೇನೆ'' ಎಂದರು ಸಾಯಿ ಪಲ್ಲವಿ.

ಇದಕ್ಕೆಲ್ಲ ಕಾರಣ ನೀವು: ಸಾಯಿ ಪಲ್ಲವಿ
''ನನಗೆ ಆಗಾಗ್ಗೆ ಅನ್ನಿಸುತ್ತಿರುತ್ತದೆ. ನನ್ನನ್ನು ಅದ್ಯಾವ ನಂಬಿಕೆ ಮೇಲೆ ಸಿನಿಮಾಗಳಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು. ಈಗ ಒಬ್ಬರು ಹೇಳಿದರು ಸಾಯಿ ಪಲ್ಲವಿ ಬಹಳ ಶ್ರಮಪಟ್ಟು ಕೆಲಸ ಮಾಡುತ್ತಾರೆ ಎಂದು. ಆದರೆ ನನಗೆ ಅದ್ಯಾವುದು ನೆನಪಿಲ್ಲ. ನಾನು ನಟಿಸುವಾಗ ಅದೆಷ್ಟು ಶ್ರಮ ಹಾಕುತ್ತೇನೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಬಹಳ ಇಷ್ಟಪಟ್ಟು ಕೆಲಸ ಮಾಡುತ್ತೇನೆ. ಸಿನಿಮಾಗಳಲ್ಲಿ ಕೆಲಸ ಮಾಡುವುದು ನನಗೆ ಇಷ್ಟ. ಆದರೆ ಇಷ್ಟು ಸಿನಿಮಾಗಳಲ್ಲಿ ನಾನು ನಟಿಸಲು ಸಾಧ್ಯವಾಗಿದ್ದು, ನೀವುಗಳು ತೋರಿದ ಪ್ರೀತಿಯಿಂದ, ನಾನು ಮೊದಲ ಸಿನಿಮಾದಲ್ಲಿ ನಟಿಸಿದಾಗ ಈ ಯುವತಿ ಬೇಡ ಎಂದು ನಿರಾಕರಿಸಿಬಿಟ್ಟಿದ್ದರೆ ನಾನು ಇಷ್ಟು ಸಿನಿಮಾದಲ್ಲಿ ನಟಿಸಲು ಸಾಧ್ಯವೇ ಆಗುತ್ತಿರಲಿಲ್ಲ'' ಎಂದು ಭಾವುಕರಾದರು ಸಾಯಿ ಪಲ್ಲವಿ.

ಸಿನಿಮಾ ಎಂಬುದು ಸರಳವಲ್ಲ: ಸಾಯಿ ಪಲ್ಲವಿ
''ಸಿನಿಮಾ ಎಂಬುದು ಸರಳವಲ್ಲ. ಅದಕ್ಕೆ ಬಹಳ ದೊಡ್ಡ ನಂಬಿಕೆ ಬೇಕು. ಕಲಾವಿದರು, ತಂತ್ರಜ್ಞರನ್ನು ನಂಬಿ ಬಹಳ ದೊಡ್ಡ ಮಟ್ಟದ ಹಣವನ್ನು ನಿರ್ಮಾಪಕರು ಹೂಡಿರುತ್ತಾರೆ. ಆ ನಂಬಿಕೆಯನ್ನು ನಿರ್ಮಾಪಕರು,ನಿರ್ದೇಶಕರು ನನ್ನ ಮೇಳೆ ಇಡುವಂತೆ ಮಾಡಿದಿರಿ'' ಎಂದರು ಸಾಯಿ ಪಲ್ಲವಿ. 'ಶ್ಯಾಮ್ ಸಿಂಘ ರಾಯ್' ಸಿನಿಮಾದ ಬಗ್ಗೆ ಮಾತನಾಡಿದ ಸಾಯಿ ಪಲ್ಲವಿ, ''ಇಂಥ ಒಂದು ಸಿನಿಮಾದ ಭಾಗವಾಗಿರುವುದಕ್ಕೆ ನನಗೆ ಬಹಳ ಖುಷಿಯಿದೆ. ಈ ಸಿನಿಮಾದ ಎಲ್ಲರೂ ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಸಿನಿಮಾದ ಸಹಾಯಕ ನಿರ್ದೇಶಕ ವರ್ಗ ಇನ್ನಿತರೆ ವರ್ಗಗಳು ತೆರೆಯ ಮೇಲೆ ಬರುವುದಿಲ್ಲ, ಈ ರೀತಿಯ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಸಹ ಬರುವುದಿಲ್ಲ ಆದರೆ ಅವರ ಶ್ರಮ ಬಹಳ ದೊಡ್ಡದು'' ಎಂದರು ಸಾಯಿ ಪಲ್ಲವಿ.

ಆಸ್ಕರ್ ಬಂದಾಗಷ್ಟೆ ಭಾವುಕವಾಗುತ್ತೇನೆ ಎಂದುಕೊಂಡಿದ್ದೆ: ಸಾಯಿ ಪಲ್ಲವಿ
''ನನಗೆ ರಾಷ್ಟ್ರಪ್ರಶಸ್ತಿ ಬಂದಾಗ ಅಥವಾ ಆಸ್ಕರ್ ಪ್ರಶಸ್ತಿ ಬಂದಾಗ ಅಷ್ಟೆ ನಾನು ಭಾವುಕಗೊಂಡು, ಅಳುತ್ತಾ ಮಾತನಾಡುತ್ತೇನೆ ಎಂದುಕೊಂಡಿದ್ದೆ. ಆದರೆ ಇಂದೇ ನಾನು ಅತ್ತುಬಿಟ್ಟೆ. ಒಬ್ಬ ನಟಿಯಾಗಿ ಸಿನಿಮಾ ಎಂಬ ಕಲಾಮಾಧ್ಯಮದಲ್ಲಿರುವುದು ಇರುವುದೇ ಬಹಳ ದೊಡ್ಡ ಪ್ರಶಸ್ತಿ ನನಗೆ. ನನ್ನನ್ನು ಮಾತ್ರವಲ್ಲ, ಎಲ್ಲ ನಟ-ನಟಿಯರನ್ನು ಆದರಿಸುತ್ತಿರುವ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ನನ್ನು ಮನದಲ್ಲಿ ಏನು ಓಡುತ್ತಿದೆ ಎಂಬುದು ನಿಮಗೆ ಅರ್ಥವಾಗುತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನಿಮ್ಮೆಲ್ಲರ ಈ ಪ್ರೀತಿ, ಆದರ ನನ್ನನ್ನು ಬಹಳ ಭಾವುಕಗೊಳಿಸಿದೆ'' ಎಂದರು ನಟಿ ಸಾಯಿ ಪಲ್ಲವಿ. ನಟಿ ಭಾಷಣ ಮಾಡುತ್ತಿರುವಾಗಲೇ ಅವರ ಸಿಬ್ಬಂದಿಯೊಬ್ಬರು ಬಂದು ಕರ್ಚೀಫ್ ನೀಡಿದರೆ, ಕಣ್ಣೊರೆಸಿಕೊಳ್ಳುತ್ತಾ ಭಾಷಣ ಮುಗಿಸಿದರು ಸಾಯಿ ಪಲ್ಲವಿ.


Click it and Unblock the Notifications











