ಬೂದು ಬಣ್ಣದ ಶರ್ಟ್ ಧರಿಸಿದ್ದ ಆ ಹುಡುಗನನ್ನು ಹುಡುಕುತ್ತಿದ್ದಾರೆ ಸಾಯಿ ಪಲ್ಲವಿ
ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ನಾಯಕಿಯರದ್ದು ಸೀಮಿತ ಕೆಲಸ. ನಾಯಕನನ್ನು ಹೊಗಳುವುದು, ಅವರೊಟ್ಟಿಗೆ ನಟಿಸಲು ಅವಕಾಶ ಸಿಕ್ಕಿದ್ದು ಪುಣ್ಯ ಎನ್ನುವುದು, 'ಬಬ್ಲಿ ಬಬ್ಲಿ ಕ್ಯಾರೆಕ್ಟರ್' ಎಂದು ಒಂದು ಸಾಲಿನ ವಿವರಣೆಯನ್ನು ತಮ್ಮ ಪಾತ್ರದ ಬಗ್ಗೆ ನೀಡುವುದು, ಜೊತೆಗೆ ಪ್ರಚಾರ ಕಾರ್ಯಕ್ರಮಕ್ಕೆ ತುಸು ಗ್ಲಾಮರ್ ತುಂಬುವುದು. ಆದರೆ ಎಲ್ಲಾ ನಟಿಯರು ಹೀಗಲ್ಲ, ತಮ್ಮದೇ ದಾರಿ ಕಂಡುಕೊಂಡ ನಟಿಯರ ಸಾಲಿಗೆ ಸಾಯಿ ಪಲ್ಲವಿ ಸಹ ಸೇರುತ್ತಾರೆ.
ಸಾಯಿ ಪಲ್ಲವಿ ನಟಿಸಿರುವ 'ವಿರಾಟ ಪರ್ವಂ' ಸಿನಿಮಾ ನಾಳೆ (ಜೂನ್ 17) ರಂದು ಬಿಡುಗಡೆ ಆಗಲಿದ್ದು ಸಿನಿಮಾದ ಪ್ರಚಾರ ಕಾರ್ಯ ನಿಮಿತ್ತ ಹಲವು ಸಂದರ್ಶನಗಳಲ್ಲಿ ಸಾಯಿ ಪಲ್ಲವಿ ಹಾಗೂ ನಾಯಕ ನಟ ರಾಣಾ ದಗ್ಗುಬಾಟಿ ಭಾಗವಹಿಸಿದ್ದಾರೆ.
ಇಂಥಹುದೇ ಒಂದು ಸಂದರ್ಶನದಲ್ಲಿ ಭಾಗವಹಿಸಿದ್ದ ಸಾಯಿ ಪಲ್ಲವಿ ತಮ್ಮ ಕಣ್ಣೆದುರೇ ನಡೆದ ಘಟನೆಯೊಂದನ್ನು ವಿವರಿಸಿದ್ದು, ನನಗೆ ಶಕ್ತಿ ಇದ್ದಿದ್ದರೆ ಅಂಥಹಾ ಘಟನೆಗಳು ನಡೆಯದಂತೆ ತಡೆಯುತ್ತೇನೆ ಎಂದು ಹೇಳಿದ್ದಾರೆ. ಆ ಘಟನೆಗೆ ಕಾರಣನಾದ ವ್ಯಕ್ತಿಯನ್ನು ಹುಡುಕುತ್ತಿರುವುದಾಗಿ ಸಹ ಹೇಳಿದ್ದಾರೆ. ಹಾಗಿದ್ದರೆ ಆ ಘಟನೆ ಏನು?
''ನಿಮಗೆ ಶಕ್ತಿ ಇದ್ದಿದ್ದರೆ ನೀವು ಬದಲಾಯಿಸಲು ಬಯಸುವ ಅಂಶವೇನು?'' ಎಂಬ ಸಂದರ್ಶಕನ ಪ್ರಶ್ನೆಗೆ ಉತ್ತರಿಸಿರುವ ಸಾಯಿ ಪಲ್ಲವಿ, ಕೆಲವೇ ದಿನಗಳ ಹಿಂದೆ ನನ್ನ ಕಣ್ಣ ಮುಂದೆಯೇ ಘಟನೆಯೊಂದು ನಡೆಯಿತು. ನಾನು ಕಾರಿನಲ್ಲಿ ಕೂತಿದ್ದೆ, ಕಾರು ಸಿಗ್ನಲ್‌ನಲ್ಲಿತ್ತು. ಒಬ್ಬ ಅಪ್ರಾಪ್ತ ಬಾಲಕಿ, ಬಹುಷಃ 12-13 ವರ್ಷ ವಯಸ್ಸಿನವಳಾಗಿರಬಹುದು ಆಕೆ ರಸ್ತೆ ದಾಟಲು ತನ್ನ ಕುಟುಂಬದೊಡನೆ ನಿಂತಿದ್ದಳು ಆಗ ನಡೆದ ಘಟನೆ ನನಗೆ ತೀವ್ರ ಆಕ್ರೋಶ ಮೂಡಿಸಿತು'' ಎಂದಿದ್ದಾರೆ.

ಬಾಲಕಿಯನ್ನು ಕೆಟ್ಟದಾಗಿ ಮುಟ್ಟಿದ: ಸಾಯಿ ಪಲ್ಲವಿ
''ಬೈಕ್ ನಲ್ಲಿ ಬಂದ ಇಬ್ಬರು ಹುಡುಗರಲ್ಲಿ ಹಿಂದೆ ಕೂತಿದ್ದ ಹುಡುಗ ಆ ಬಾಲಕಿಯನ್ನು ಕೆಟ್ಟದಾಗಿ ಮುಟ್ಟಿ ಬೈಕ್‌ನಲ್ಲಿ ಹೊರಟುಹೋದ. ಬಾಲಕಿಯ ಪೋಷಕರು ರಸ್ತೆ ದಾಟುವ ತುರ್ತಿನಲ್ಲಿದ್ದು, ಘಟನೆಯನ್ನು ಅವರು ನೋಡಲೂ ಇಲ್ಲ. ಇದೆಲ್ಲ ನನ್ನ ಕಣ್ಣ ಮುಂದೆಯೇ ನಡೆಯಿತು. ಆಕೆ ಇನ್ನೂ ಬಾಲಕಿ ತನ್ನೊಂದಿಗೆ ನಡೆದ ಈ ಘಟನೆಯ ಅರ್ಥ, ಉದ್ದೇಶವೇನು ಎಂಬುದು ಸಹ ಆಕೆಗೆ ಅರ್ಥವಾಗಿರಲಿಕ್ಕಿಲ್ಲ ಆದರೆ ಆಕೆಗೆ ಮುಜುಗರವಾಗಿದ್ದಂತೂ ಸತ್ಯ. ಅದನ್ನು ನಾನು ಗಮನಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಆಕೆಯ ಮೇಲೆ ಈ ರೀತಿಯ ಘಟನೆಯೊಂದು ನಡೆಯಿತು. ಅದನ್ನು ನೋಡಿದ ನನಗೆ ತೀವ್ರ ಆಘಾತವಾಯಿತು'' ಎಂದಿದ್ದಾರೆ ಸಾಯಿ ಪಲ್ಲವಿ.

''ಫೋಟೊ ತೆಗೆಯಲು ಯತ್ನಿಸಿದೆ ಆದರೆ ಸಾಧ್ಯವಾಗಲಿಲ್ಲ''
ಮುಂದುವರೆದು, ''ನಾನು ನನ್ನ ಮೊಬೈಲ್ ತೆಗೆದು ಬೈಕ್‌ನ ಫೋಟೊ ತೆಗೆದುಕೊಳ್ಳಲು ಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ಆದರೆ ಆತ ಬೂದು ಬಣ್ಣದ ಶರ್ಟ್ ಧರಿಸಿದ್ದು ನನಗೆ ನೆನಪಿದೆ, ಆ ಹುಡುಗ ಈ ಸಂದರ್ಶನ ನೋಡುತ್ತಿದ್ದರೆ ನಾನು ಆತನಿಗೆ ತಿಳಿಸಲು ಇಚ್ಛಿಸುತ್ತೇನೆ, 'ನೀನು ಮಾಡಿದ್ದು ಬಹಳ ದೊಡ್ಡ ತಪ್ಪು'. ಜನ ಅಂದುಕೊಂಡಿದ್ದಾರೆ, ನಾವು ಈ ರೀತಿಯ ಕೆಲಸ ಮಾಡಿ ತಪ್ಪಿಸಿಕೊಂಡು ಬಿಡಬಹುದು, ಏನೋ ಮಾತನಾಡಿ ತಪ್ಪಿಸಿಕೊಂಡು ಬಿಡಬಹುದು ಎಂದು. ಆದರೆ ಅದು ಸಾಧ್ಯವಿಲ್ಲ. ನಾವು ಇನ್ನಷ್ಟು ಮನುಷ್ಯರಾಗಿ ವರ್ತಿಸುವುದು ಕಲಿಯಬೇಕು'' ಎಂದಿದ್ದಾರೆ ಸಾಯಿ ಪಲ್ಲವಿ.

ಬೂದು ಬಣ್ಣದ ಶರ್ಟ್‌ನವನಿಗಾಗಿ ಹುಡುಕುತ್ತಲಿದ್ದೆ: ಸಾಯಿ ಪಲ್ಲವಿ
''ಆ ಸನ್ನಿವೇಶ ಎದುರಿಸಿದ ಆ ಬಾಲಕಿ ಖಂಡಿತ ಹೆದರಿಕೊಂಡಿರುತ್ತಾಳೆ. ಮುಂದಿನ ಹಲವು ವರ್ಷ ಆಕೆಯನ್ನು ಆ ಘಟನೆ ಕಾಡುತ್ತಿರುತ್ತದೆ. ಮುಂದೆ ಯಾರು ನನ್ನನ್ನು ಹೇಗೆ ಹಿಡಿದುಕೊಳ್ಳುತ್ತಾರೆ, ಎಳೆದು ಕೆಟ್ಟದಾಗಿ ವರ್ತಿಸುತ್ತಾರೆ ಎಂಬುದು ಆಕೆಯ ಮನದ ಮೂಲೆಯಲ್ಲಿ ಓಡುತ್ತಲೇ ಇರುತ್ತದೆ. ಆ ಘಟನೆ ನನ್ನ ಕಣ್ಣೆದುರೇ ನಡೆಯಿತು. ಆದರೆ ಯಾರೂ ಏನೂ ಮಾಡಲಾಗಲಿಲ್ಲ. ಆ ಹುಡುಗ ಇನ್ನೆಲ್ಲೋ ಹೋಗಿ ಇನ್ನೊಬ್ಬ ಹುಡುಗಿಗೆ ಹಾಗೆಯೇ ಮಾಡಿರಬಹುದೇನೋ. ಆ ಘಟನೆಯಿಂದ ನನಗೆ ತೀವ್ರ ಆಘಾತವಾಯಿತು. ಆ ದಿನ ಪೂರ್ತಿ ನನಗೆ ಆ ಘಟನೆಯೇ ಕಣ್ಣ ಮುಂದೆ ಬರುತ್ತಿತ್ತು. ನಾನು ಎಲ್ಲಿ ಹೋದರು ಆ ಬೂದು ಬಣ್ಣದ ಶರ್ಟ್ ಧರಿಸಿರುವ ಹುಡುಗನಿಗಾಗಿಯೇ ಹುಡುಕಾಡುತ್ತಿದ್ದೆ'' ಎಂದಿದ್ದಾರೆ ಸಾಯಿ ಪಲ್ಲವಿ.

ನಾನು ಸಹ ಅಂಥಹಾ ಸನ್ನಿವೇಶಗಳನ್ನು ಎದುರಿಸಿದ್ದೇನೆ: ಸಾಯಿ ಪಲ್ಲವಿ
''ನನಗನ್ನಿಸುತ್ತೆ ಜನ ಇನ್ನಷ್ಟು ಜಾಗೃತರಾಗಬೇಕು. ತಮ್ಮ ವರ್ತನೆಯಿಂದ, ಮಾತುಗಳಿಂದ ಬೇರೆಯವರ ಜೀವನವನ್ನು ಕಷ್ಟಕ್ಕೆ, ತೊಂದರೆಗೆ ಸಿಲುಕಿಸಬಾರದು ಎಂಬುದನ್ನು ಅರಿತುಕೊಳ್ಳಬೇಕು. ನನಗೆ ಶಕ್ತಿ ಇದ್ದಿದ್ದರೆ ಜನರಲ್ಲಿ ಆ ಜಾಗೃತಿ ಮೂಡಿಸಲು ಯತ್ನಿಸುತ್ತೇನೆ'' ಎಂದಿದ್ದಾರೆ ಸಾಯಿ ಪಲ್ಲವಿ, ಅಲ್ಲದೆ ಮುಂದುವರೆದು ''ನನ್ನ ಇಷ್ಟು ವರ್ಷಗಳ ಪಯಣದಲ್ಲಿ ಈ ರೀತಿಯ ಕೆಟ್ಟ ಸಂದರ್ಭಗಳನ್ನು ಸಾಕಷ್ಟು ಬಾರಿ ನಾನು ಸಹ ಅನುಭವಿಸಿದ್ದೇನೆ'' ಎಂದು ನಗುತ್ತಲೇ ಹೇಳಿದ್ದಾರೆ.


Click it and Unblock the Notifications











