ಮದುವೆ, ಮಕ್ಕಳ ಬಗ್ಗೆ ನಟಿ ಸಾಯಿ ಪಲ್ಲವಿ ಮಾತು
ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಯಶಸ್ವಿ ಹಾಗೂ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟಿ. ದೊಡ್ಡ ಅಭಿಮಾನಿ ಬಳಗ ಹೊಂದಿರುವ ಸಾಯಿ ಪಲ್ಲವಿಯನ್ನು ಲೇಡಿ ಪವನ್ ಕಲ್ಯಾಣ್ ಎಂದೇ ಕರೆಯಲಾಗುತ್ತದೆ.
ಹಿಟ್‌ಗಳ ಮೇಲೆ ಹಿಟ್ ನೀಡುತ್ತಿರುವ ಸಾಯಿ ಪಲ್ಲವಿ, ತಾವು ಆಯ್ಕೆ ಮಾಡಿಕೊಳ್ಳುತ್ತಿರುವ ಪಾತ್ರಗಳ ಮೂಲಕ ಪ್ರೇಕ್ಷಕರ ಮೇಲೆ ಪ್ರಭಾವ ಬೀರುತ್ತಿದ್ದಾರೆ, ಪ್ರತಿ ಪಾತ್ರದ ಮೂಲಕವೂ ಹೃದಯ ಗೆಲ್ಲುತ್ತಿದ್ದಾರೆ.
ಇದೀಗ ಸಾಯಿ ಪಲ್ಲವಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ 'ವಿರಾಟ ಪರ್ವಂ' ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಾಯಿ ಪಲ್ಲವಿ ನಿರತರಾಗಿದ್ದಾರೆ. ಪ್ರಚಾರದ ಸಲುವಾಗಿ ಹಲವು ಸಂದರ್ಶನಗಳಲ್ಲಿ ಸಾಯಿ ಪಲ್ಲವಿ ಭಾಗವಹಿಸಿದ್ದು, ಈ ಸಂದರ್ಭ ತಮ್ಮ ಮದುವೆ, ಕುಟುಂಬದ ಬಗ್ಗೆ ಸಾಯಿ ಪಲ್ಲವಿ ಮಾತನಾಡಿದ್ದಾರೆ.

ಮದುವೆ ಆಗುವ ಕನಸು ಕಂಡಿದ್ದ ಸಾಯಿ ಪಲ್ಲವಿ
'ವಿರಾಟ ಪರ್ವಂ' ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸಾಯಿ ಪಲ್ಲವಿ, 23 ವರ್ಷಕ್ಕೆ ವಿವಾಹವಾಗಿ, 30 ವರ್ಷಕ್ಕೆ ಎರಡು ಮಕ್ಕಳನ್ನು ಮಾಡಿಕೊಳ್ಳೋಣ ಎಂದುಕೊಂಡಿದ್ದೆ, ಆದರೆ ಸಿನಿಮಾಗಳಿಂದಾಗಿ ಪ್ರೇಕ್ಷಕರು ನೀಡಿದ ಪ್ರೀತಿಯಿಂದ ಅದು ಸಾಧ್ಯ ಆಗಿಲ್ಲ ಎಂದು ತಮಾಷೆಯಾಗಿ ಹೇಳಿದ್ದಾರೆ. ಮದುವೆಯಾಗಿ ಮಕ್ಕಳು ಮಾಡಿಕೊಂಡು ತಮ್ಮ ಪಾಡಿಗಿದ್ದಿದ್ದರೆ ಅದ್ಭುತ ನಟಿಯನ್ನು ಚಿತ್ರರಂಗ ಮಿಸ್ ಮಾಡಿಕೊಳ್ಳುತಿತ್ತು ಎಂದಿದ್ದಾರೆ ಸಾಯಿ ಪಲ್ಲವಿ ಅಭಿಮಾನಿಗಳು.

ತೆಲುಗು ಹುಡುಗನನ್ನು ಮದುವೆ ಆಗ್ತಾಳೆ ಎಂದಿರುವ ಸಾಯಿ ಪಲ್ಲವಿ ತಂದೆ!
ತೆಲುಗಿನ ಇನ್ನೊಂದು ಸಂದರ್ಶನದಲ್ಲಿ ಸಹ ಮದುವೆಯ ಬಗ್ಗೆ ಮಾತನಾಡಿರುವ ಸಾಯಿ ಪಲ್ಲವಿ, ನಾನು ಅದೆಷ್ಟು 'ತೆಲುಗು ಹುಡುಗಿ' ಆಗಿಬಿಟ್ಟಿದ್ದೇನೆಂದರೆ, ನಾನು ಮನೆಯಲ್ಲಿ ನಮ್ಮ ಬಡಗ ಭಾಷೆ ಮಾತನಾಡುತ್ತಾ ನಡು-ನಡುವೆ ತೆಲುಗು ಪದಗಳನ್ನು ಸೇರಿಸಿಬಿಡುತ್ತೇನೆ. ನಮ್ಮ ಪೋಷಕರಂತೂ ಈಕೆ ತೆಲುಗು ಹುಡುಗನನ್ನೇ ಮದುವೆ ಆಗುತ್ತಾರೆ ಎಂದು ತಮಾಷೆ ಮಾಡುತ್ತಾರೆ'' ಎಂದಿದ್ದಾರೆ.

ತೆಲುಗು ಹುಡುಗನನ್ನು ಮದುವೆ ಆಗ್ತಾರಾ ಸಾಯಿ ಪಲ್ಲವಿ?
ಹಾಗಿದ್ದರೆ ತೆಲುಗು ಹುಡುಗನನ್ನು ಮದುವೆ ಆಗುತ್ತೀರಾ? ಎಂದು ಸಂದರ್ಶಕ ಹಾಕಿದ ಮರುಪ್ರಶ್ನೆಗೆ ಉತ್ತರಿಸಿರುವ ಸಾಯಿ ಪಲ್ಲವಿ, ''ಆ ಬಗ್ಗೆ ಆಲೋಚನೆ ಈಗಿಲ್ಲ. ಸದ್ಯಕ್ಕೆ ನನ್ನ ಜೀವನವನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ. ಏಕಾಂಗಿಯಾಗಿದ್ದರೂ ನಾನು ಸಂತೋಶವಾಗಿದ್ದೇನೆ. ನನ್ನನ್ನು ನಾನು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇನೆ. ಹಾಗಾಗಿ ಸದ್ಯಕ್ಕೆ ಮದುವೆಯ ಆಲೋಚನೆ ಇಲ್ಲ. ಆದರೆ ನನ್ನ ಪೋಷಕರಿಗೆ ಆ ಅನುಮಾನ ಇದೆ'' ಎಂದಿದ್ದಾರೆ ಸಾಯಿ ಪಲ್ಲವಿ.

ಜೂನ್ 17 ಕ್ಕೆ 'ವಿರಾಟ ಪರ್ವಂ' ಬಿಡುಗಡೆ
ಸಾಯಿ ಪಲ್ಲವಿ ದಕ್ಷಿಣ ಭಾರತದ ಅತ್ಯಂತ ಬ್ಯುಸಿ ನಟಿ ಆಗಿದ್ದಾರೆ. ತಮ್ಮ ಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅವರು ನಟಿಸಿರುವ 'ವಿರಾಟ ಪರ್ವಂ' ಸಿನಿಮಾ ಜೂನ್ 17 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಾಣಾ ದಗ್ಗುಬಾಟಿ, ಪ್ರಿಯಾಮಣಿ ಸಹ ನಟಿಸಿದ್ದಾರೆ. ಸಿನಿಮಾವು ನಕ್ಸಲ್ ಕತೆಯನ್ನು ಹೊಂದಿದೆ. ನಕ್ಸಲ್ ನಾಯಕನನ್ನು ಪ್ರೀತಿಸುವ ಯುವತಿ ವೆನ್ನೆಲ ಪಾತ್ರದಲ್ಲಿ ನಟಿಸಿದ್ದಾರೆ. ಇದರ ಹೊರತಾಗಿ ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಸಾಯಿ ಪಲ್ಲವಿ, ಜೊತೆಗೆ 'ಗಾರ್ಗಿ' ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











