'ಕಲ್ಕಿ'-2 ಚಿತ್ರದಲ್ಲಿ ದೀಪಿಕಾ ಪಡುಕೋಣೆ ಬದಲು ಸಾಯಿ ಪಲ್ಲವಿ; ನಿರ್ದೇಶಕ ಪ್ರತಿಕ್ರಿಯೆ
ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಹಿಟ್ ಆಗಿತ್ತು. ಸದ್ಯ ಸೀಕ್ವೆಲ್ ಚಿತ್ರೀಕರಣ ನಡೀತಿದೆ. ಚಿತ್ರದಿಂದ ದೀಪಿಕಾ ಪಡುಕೋಣೆ ಹೊರಬಂದಿರುವುದು ಗೊತ್ತೇಯಿದೆ. ಹಾಗಾಗಿ ಸುಮತಿ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ನಾಗ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಪೌರಾಣಿಕ ಸೈಫೈ ಸಿನಿಮಾ 'ಕಲ್ಕಿ 2898 AD' ತೆರೆಗೆ ಬಂದಿತ್ತು. ಕಲ್ಕಿ ತಾಯಿ ಸುಮತಿ ಪಾತ್ರದಲ್ಲಿ ದೀಪಿಕಾ ಮಿಂಚಿದ್ದರು. ಬಹಳ ಪ್ರಮುಖವಾದ ಪಾತ್ರ ಅದಾಗಿತ್ತು. ಆದರೆ ಸೀಕ್ವೆಲ್ ಚಿತ್ರಕ್ಕೆ ಆಕೆ ಮುಂದಿಟ್ಟ ಷರತ್ತುಗಳಿಂದ ಚಿತ್ರತಂಡ ಬೇಸತ್ತಿತ್ತು. ಹಾಗಾಗಿ ಆಕೆಯನ್ನು ಕೈಬಿಡಲು ನಿರ್ಧರಿಸಿದೆ ಎನ್ನಲಾಗಿತ್ತು. ಅಧಿಕೃತವಾಗಿ ಈ ಬಗ್ಗೆ ವೈಜಯಂತಿ ಮೂವೀಸ್ ಸಂಸ್ಥೆ ಮಾಹಿತಿ ನೀಡಿತ್ತು. ಆದರೆ ಕಾರಣ ಮಾತ್ರ ಏನು ಎನ್ನುವುದನ್ನು ಹೇಳಲಿಲ್ಲ.

ಸೀಕ್ವೆಲ್‌ನಲ್ಲಿ ಸುಮತಿ ಪಾತ್ರ ಇರುತ್ತಾ? ತೆಗೆದು ಬಿಡ್ತಾರಾ? ದೀಪಿಕಾ ಪಡುಕೋಣೆ ಬದಲು ಸಾಯಿ ಪಲ್ಲವಿ ನಟಿಸ್ತಾರಾ? ಎನ್ನುವ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್ ಉತ್ತರಿಸಿದ್ದಾರೆ. "ಈಗಾಗಲೇ 2 ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ಶೀಘ್ರದಲ್ಲೇ ಮತ್ತೆ ಚಿತ್ರೀಕರಣ ಶುರುವಾಗಿ ನಿರಂತರವಾಗಿ ಮುಂದುವರೆಯಲಿದೆ. ದೀಪಿಕಾ ಬದಲು ಸಾಯಿ ಪಲ್ಲವಿ ನಟಿಸುತ್ತಾರೆ ಎನ್ನುವ ಬಗ್ಗೆ ಖಚಿತತೆ ಇಲ್ಲ, ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಮಾಡುತ್ತೇವೆ. ಕಲ್ಕಿ ತಾಯಿ ಪಾತ್ರ ಸುಮತಿ. ಹಾಗಾಗಿ ಆ ಪಾತ್ರ ತೆಗೆದು ಹಾಕಲು ಸಾಧ್ಯವಿಲ್ಲ, ಬೇಕಿದ್ದರೆ ನಟಿಯನ್ನು ಬದಲಿಸಬಹುದು ಅಷ್ಟೆ" ಎಂದು ನಕ್ಕಿದ್ದಾರೆ.
ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಘಟಾನುಘಟಿ ಕಲಾವಿದರು 'ಕಲ್ಕಿ 2898 AD' ಚಿತ್ರದಲ್ಲಿ ನಟಿಸಿದ್ದರು. ಸೀಕ್ವೆಲ್‌ನಲ್ಲಿ ಕೂಡ ಆ ಪಾತ್ರಗಳು ಮುಂದುವರೆಯಲಿದೆ. ಈಗಾಗಲೇ ಅಮಿತಾಬ್ ಹಾಗೂ ಕಮಲ್ ನಟನೆಯ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಚಿತ್ರದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಮಲ್ ಹಾಸನ್ ನಟಿಸಿರುವುದು ವಿಶೇಷ. 600 ಕೋಟಿ ರೂ. ಬಜೆಟ್ ಸಿನಿಮಾ 1040 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು. ಸೀಕ್ವೆಲ್ ಹಲವು ಪಟ್ಟು ದೊಡ್ಡದಾಗಿ ತೆರೆಗೆ ಬರಲಿದೆ.
ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಹಾಗಾಗಿ 'ಕಲ್ಕಿ 2898 AD' ಸೀಕ್ವೆಲ್ ಚಿತ್ರೀಕರಣದಲ್ಲಿ ಇನ್ನು ಭಾಗಿ ಆಗಿಲ್ಲ. ಮುಂದಿನ ಶೆಡ್ಯೂಲ್‌ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಬೌಂಟಿ ಹಂಟರ್ ಭೈರವನ ಪಾತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ನಟಿಸಿದ್ದರು. ಮಹಾಭಾರತದ ಕರ್ಣನಾಗಿಯೂ ಸಣ್ಣ ಝಲಕ್‌ನಲ್ಲಿ ದರ್ಶನ ಕೊಟ್ಟಿದ್ದರು.
ಕರ್ಣನ ಪುನರ್ಜನ್ಮ ಭೈರವ ಎನ್ನುವಂತೆ ನಾಗ್ ಅಶ್ವಿನ್ ಚಿತ್ರದಲ್ಲಿ ಪಾತ್ರವನ್ನು ಚಿತ್ರಿಸಿದ್ದಾರೆ. ಅವರ ಪ್ರಯತ್ನಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಕ್ಲೈಮ್ಯಾಕ್ಸ್‌ನಲ್ಲಿ ಕರ್ಣ ಹಾಗೂ ಅರ್ಜುನನ ನಡುವಿನ ಕುರುಕ್ಷೇತ್ರ ಯುದ್ಧದ ಸನ್ನಿವೇಶವನ್ನು ತೋರಿಸಿ ಅಚ್ಚರಿ ಮೂಡಿಸಿದ್ದರು. 'ಕಲ್ಕಿ 2898 AD' ಚಿತ್ರದಿಂದ ಹೊರ ನಡೆದ ಬಗ್ಗೆ ದೀಪಿಕಾ ಅಧಿಕೃತವಾಗಿ ಮಾತನಾಡಲಿಲ್ಲ. ದೀಪಿಕಾ ಬದಲು ಸಾಯಿ ಪಲ್ಲವಿ ಸೂಕ್ತ ಆಯ್ಕೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಬಹುತೇಕ ಆಕೆ ನಟಿಸುವುದು ಖಚಿತ ಎನ್ನುವಂತಾಗಿದೆ.
'ಕಲ್ಕಿ 2898 AD' ಸೀಕ್ವೆಲ್ ಯಾವಾಗ ತೆರೆಗೆ ಬರುತ್ತದೆ ಎನ್ನುವುದು ಕೂಡ ಗೊತ್ತಿಲ್ಲ. ಮುಂದಿನ ವರ್ಷದ ಕೊನೆಗೆ ಬಿಡುಗಡೆ ಆಗಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ನಾಗ್ ಅಶ್ವಿನ್ ಮಾತನಾಡಿ "ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಈಗ ಏನು ಹೇಳಲು ಸಾಧ್ಯವಿಲ್ಲ. ಈ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಮತ್ತೆ ಚಿತ್ರೀಕರಣ ಶುರುವಾಗುತ್ತದೆ. ರಿಲೀಸ್ ಯಾವಾಗ ಎನ್ನುವುದು ಗೊತ್ತಿಲ್ಲ" ಎಂದಿದ್ದಾರೆ.


Click it and Unblock the Notifications