Sakshi Dhoni: ನಾನು ಈ ಸೌತ್ ನಟನ ದೊಡ್ಡ ಫ್ಯಾನ್, ಅವರ ಚಿತ್ರಗಳನ್ನು ನೋಡಿ ಬೆಳೆದೆ ಎಂದ ಸಾಕ್ಷಿ ಧೋನಿ
ಭಾರತ ಕ್ರಿಕೆಟ್ ತಂಡವನ್ನು ಎಂದೂ ತಲುಪಿರದ ಉತ್ತುಂಗಕ್ಕೆ ಕೊಂಡೊಯ್ದ ನಾಯಕನೆಂದರೆ ಅದು ಎಂಎಸ್ ಧೋನಿ. ನಾಯಕನಾಗಿ ಅನೇಕ ಬೃಹತ್ ದಾಖಲೆಗಳನ್ನು ನಿರ್ಮಿಸಿರುವ ಎಂಎಸ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಾತ್ರ ಸಕ್ರಿಯ ಆಟಗಾರನಾಗಿ ಉಳಿದುಕೊಂಡಿದ್ದು, ಇದೀಗ ಸಿನಿಮಾ ಕ್ಷೇತ್ರಕ್ಕೂ ಸಹ ಕಾಲಿಟ್ಟಿದ್ದಾರೆ. ಹೌದು, ಎಂ ಎಸ್ ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ನಿರ್ಮಾಪಕಿಯಾಗಿ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದು, ಧೋನಿ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಎಂಎಸ್ ಧೋನಿ ತಮಿಳು ಸಿನಿಮಾಗೆ ಬಂಡವಾಳ ಹೂಡುವ ಮೂಲಕ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದ್ದಾರೆ. ಹೌದು, ಎಲ್ ಜಿ ಎಮ್ ( ಲೆಟ್ಸ್ ಗೆಟ್ ಮ್ಯಾರೀಡ್ ) ಎಂಬ ಸಿನಿಮಾಗೆ ಧೋನಿ ಎಂಟರ್‌ಟೈನ್‌ಮೆಂಟ್ ಬಂಡವಾಳ ಹೂಡಿದ್ದು, ಈ ಚಿತ್ರ ಇದೇ ಶುಕ್ರವಾರ ( ಜುಲೈ 28 ) ಬಿಡುಗಡೆಯಾಗಲಿದೆ. ಹೀಗೆ ಚಿತ್ರ ಬಿಡುಗಡಗೆ ಇನ್ನು ನಾಲ್ಕೈದು ದಿನಗಳು ಮಾತ್ರ ಬಾಕಿ ಉಳಿದಿರುವುದರಿಂದ ಲೆಟ್ಸ್ ಗೆಟ್ ಮ್ಯಾರೀಡ್ ಚಿತ್ರತಂಡ ಪ್ರಚಾರ ಕಾರ್ಯವನ್ನು ಆರಂಭಿಸಿದೆ.

ಕಳೆದ ವಾರ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚೆನ್ನೈನಲ್ಲಿ ಚಿತ್ರದ ಪ್ರಮೋಷನ್ ಮಾಡಿದ್ದ ಎಲ್ ಜಿ ಎಲ್ ಚಿತ್ರತಂಡ ನಿನ್ನೆ ( ಜುಲೈ 24 ) ಹೈದರಾಬಾದ್‌ನಲ್ಲಿ ಈವೆಂಟ್ ಒಂದನ್ನು ನಡೆಸಿ, ತೆಲುಗು ಪತ್ರಕರ್ತರ ಜತೆ ಮಾತುಕತೆ ನಡೆಸಿ ಚಿತ್ರದ ಪ್ರಚಾರವನ್ನು ಮಾಡಿದರು. ಈ ಪತ್ರಿಕಾಗೋಷ್ಠಿಯಲ್ಲಿ ಎಂಎಸ್ ಧೋನಿ ಹಾಗೂ ಸಾಕ್ಷಿ ಸಿಂಗ್ ಧೋನಿ ಭಾಗವಹಿಸಿ ಚಿತ್ರದ ಕುರಿತು ಹಾಗೂ ಸಿನಿಮಾ ಕ್ಷೇತ್ರದ ಕುರಿತು ಮಾತನಾಡಿದರು.
ಇನ್ನು ಸಾಕ್ಷಿ ಧೋನಿ ತೆಲುಗು ಚಿತ್ರರಂಗದ ಬಗ್ಗೆ ಮಾತನಾಡಿ ತಮ್ಮ ನೆಚ್ಚಿನ ತೆಲುಗು ನಟ ಯಾರು ಎಂಬ ವಿಷಯವನ್ನೂ ಸಹ ಬಹಿರಂಗಪಡಿಸಿದರು. ಪತ್ರಕರ್ತರೊಬ್ಬರು ನಿಮ್ಮ ನೆಚ್ಚಿನ ತೆಲುಗು ನಟ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಸಾಕ್ಷಿ ಸಿಂಗ್ ಧೋನಿ "ನಿಮಗೆ ಗೊತ್ತಾ ನಾನು ಅಲ್ಲು ಅರ್ಜುನ್ ನಟನೆಯ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ಈಗಿನ ರೀತಿ ಆಗ ನೆಟ್‌ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್ ಓಟಿಟಿಗಳಿರಲಿಲ್ಲ. ಯುಟ್ಯೂಬ್‌ನಲ್ಲಿ ಗೋಲ್ಡ್ ಮೈನ್ ಎಂಬ ಪ್ರೊಡಕ್ಷನ್ ಹೌಸ್ ಸೌತ್ ಚಿತ್ರಗಳನ್ನು ಹಿಂದಿಗೆ ಡಬ್ ಮಾಡುತ್ತಿತ್ತು. ಹಾಗಾಗಿ ನಾನು ಎಲ್ಲಾ ಅಲ್ಲು ಅರ್ಜುನ್ ಚಿತ್ರಗಳನ್ನು ನೋಡುತ್ತಾ ನಾನು ಬೆಳೆದೆ. ಹಾಗೂ ನಾನು ಅಲ್ಲು ಅರ್ಜುನ್ ಅವರ ಅತಿ ದೊಡ್ಡ ಅಭಿಮಾನಿ" ಎಂದು ಹೇಳಿಕೊಂಡರು.
ಇನ್ನೂ ಮುಂದುವರೆದು ಸಾಕ್ಷಿ ಧೋನಿಗೆ ಆರ್ ಆರ್ ಆರ್ ಹಾಗೂ ಬಾಹುಬಲಿ ಚಿತ್ರಗಳನ್ನು ನೋಡಿದ್ದೀರ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಸಾಕ್ಷಿ ಧೋನಿ ಬಾಹುಬಲಿ ಚಿತ್ರವನ್ನು ಖಂಡಿತವಾಗಿ ನೋಡಿದ್ದೇನೆ, ಅದನ್ನೂ ಸಹ ಹಿಂದಿಯಲ್ಲಿಯೇ ನೋಡಿದ್ದೇನೆ ಎಂದರು. ಇನ್ನು ಚಾಕೋಲೇಟ್ ಹೀರೊ ಹರೀಶ್ ಕಲ್ಯಾಣ್ ಹಾಗೂ ಲವ್ ಟುಡೇ ಖ್ಯಾತಿಯ ಇವಾನಾ ನಾಯಕ ಹಾಗೂ ನಾಯಕಿಯಾಗಿ ನಟಿಸುತ್ತಿರುವ ಎಲ್ ಜಿ ಎಮ್ ಚಿತ್ರಕ್ಕೆ ರಮೇಶ್ ತಮಿಳ್‌ಮಣಿ ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











