ಎಷ್ಟೇ ದೊಡ್ಡವರಾದ್ರು ಬಂದ ದಾರಿ ಮರಿಬಾರ್ದು: ತಮ್ಮ ಗುರುವಿಗೆ ದುಬಾರಿ ಉಡುಗೊರೆ ಕೊಟ್ಟ ಪ್ರಭಾಸ್
ಬಾಹುಬಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಸಿನಿಮಾ ಪ್ರಚಾರ ಕೂಡ ಜೋರಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಸದ್ಯ ಚಿತ್ರತಂಡ ಹೊಸ ಟ್ರೈಲರ್ ರಿಲೀಸ್ ಮಾಡುವ ಲೆಕ್ಕಾಚಾರದಲ್ಲಿದೆ. ಇದೆಲ್ಲದರ ನಡುವೆ ಪ್ರಭಾಸ್ ತನ್ನ ಸರಳ ಸಜ್ಜನಿಕೆಯಿಂದ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ.
ಟಾಲಿವುಡ್ ಆರಡಿ ಕಟೌಟ್ ಪ್ರಭಾಸ್ ಹೈವೋಲ್ಟೇಜ್ ಪರ್ಫಾರ್ಮನ್ಸ್‌ನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. 'ಬಾಹುಬಲಿ' ಸರಣಿ ಸಿನಿಮಾ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಎನಿಸಿಕೊಂಡಿದ್ದಾರೆ. ಯಂಗ್ ರೆಬಲ್ ಸ್ಟಾರ್ ನಂಬಿ ನೂರಾರು ಕೋಟಿ ಬಂಡವಾಳ ಹಾಕಿ ನಿರ್ಮಾಪಕರು ಸಿನಿಮಾ ಮಾಡುತ್ತಿದ್ದಾರೆ. ಚಿತ್ರವೊಂದಕ್ಕೆ ಪ್ರಭಾಸ್ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಭಾರತೀಯ ಚಿತ್ರರಂಗದ ನಂಬರ್ ವನ್ ಸ್ಟಾರ್ ಆಗಿದ್ದರೂ ಪ್ರಭಾಸ್ ಹಳೆಯದನ್ನೆಲ್ಲಾ ಮರೆತ್ತಿಲ್ಲ.

ನಾವು ಎಷ್ಟೇ ದೊಡ್ಡವರಾದ್ರು ಬಂದ ದಾರಿ ಮರೆಯಬಾರದು ಎನ್ನುವ ಹಿರಿಯ ಮಾತನ್ನು ಪ್ರಭಾಸ್ ಪಾಲಿಸುತ್ತಾರೆ. ತಮ್ಮ ಸರಳ, ಸಜ್ಜನ ವ್ಯಕ್ತಿತ್ವದಿಂದ ಅಭಿಮಾನಿಗಳ ಪಾಲಿನ ಡಾರ್ಲಿಂಗ್ ಆಗಿಬಿಟ್ಟಿದ್ದಾರೆ. ಇತ್ತೀಚೆಗೆ ಮೊಣಕಾಲು ಚಿಕಿತ್ಸೆಗಾಗಿ ಪ್ರಭಾಸ್ ವಿದೇಶಕ್ಕೆ ಹೋಗಿ ಬಂದಿದ್ದರು. ಸದ್ಯ ಹೈದರಾಬಾದ್‌ನಲ್ಲಿರುವ ಡಾರ್ಲಿಂಗ್ ತಮ್ಮ ಗುರುಗಳನ್ನು ಭೇಟಿ ಮಾಡಿ ದುಬಾರಿ ಉಡುಗೊರೆ ಕೊಟ್ಟು ಬಂದಿದ್ದಾರೆ.
ಖ್ಯಾತ ತೆಲುಗು ನಟ ಕೃಷ್ಣಂರಾಜು ಸಹೋದರನ ಮಗ ಪ್ರಭಾಸ್ 'ಈಶ್ವರ್' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆದರೆ ಅದಕ್ಕೂ ಮುನ್ನ ಪ್ರಭಾಸ್ ವಿಶಾಖಪಟ್ಟಣದ ಸತ್ಯಾನಂದ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನೆಯ ಪಾಠ ಕಲಿತ್ತಿದ್ದರು. ಪವನ್ ಕಲ್ಯಾಣ್ ಸೇರಿದಂತೆ ಸಾಕಷ್ಟು ಜನ ತೆಲುಗು ಕಲಾವಿದರು ಈ ಇನ್‌ಸ್ಟಿಟ್ಯೂಟ್‌ನಲ್ಲಿ ನಟನೆಯ ಎಬಿಸಿಡಿ ಕಲಿತಿದ್ದಾರೆ.
ಅಂದಹಾಗೆ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಭಾಸ್‌ಗೆ ಸತ್ಯಾನಂದ್ ನಟನೆಯ ಪಟ್ಟುಗಳನ್ನು ಕಲಿಸಿದ್ದರು. ಇಂದಿಗೂ ಸತ್ಯಾನಂದ್ ಅವರನ್ನು ಪ್ರಭಾಸ್ ತಮ್ಮ ಹೃದಯಲ್ಲಿಟ್ಟುಕೊಂಡು ಪೂಜಿಸುತ್ತಾರೆ. ಈ ವರ್ಷ ಗುರುಗಳ ಹುಟ್ಟುಹಬ್ಬದ ದಿನ ಅವರನ್ನು ಭೇಟಿ ಮಾಡಿ ಪ್ರಭಾಸ್ ಭರ್ಜರಿ ಉಡುಗೊರೆ ನೀಡಿದ್ದಾರೆ. ಆ ವಿಡಿಯೋ, ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದುಬಾರಿ ಕೈಗಡಿಯಾರವನ್ನು ಪ್ರಭಾಸ್ ತಮ್ಮ ಗುರುಗಳಿಗೆ ಉಡುಗೊರೆ ಆಗಿ ನೀಡಿದ್ದಾರೆ. ತಾವೇ ಖುದ್ದಾಗಿ ತಮ್ಮ ಗುರುಗಳ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ಉಡುಗೊರೆ ನೀಡಿ ಬಂದಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿದ್ದರು ಪ್ರಭಾಸ್ ಹಳೆಯದನ್ನೆಲ್ಲಾ ಮರೆತ್ತಿಲ್ಲ ಎಂದು ಕೊಂಡಾಡುತ್ತಿದ್ದಾರೆ.
'ಈಶ್ವರ್' ಆಗಿ ಚಿತ್ರರಂಗಕ್ಕೆ ಬಂದ ಪ್ರಭಾಸ್‌ಗೆ 'ವರ್ಷಂ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ರಾಜಮೌಳಿ ನಿರ್ದೇಶನದ 'ಛತ್ರಪತಿ' ಸಿನಿಮಾದಿಂದ ಪ್ರಭಾಸ್ ಸ್ಟಾರ್ ಪಟ್ಟಕ್ಕೇರಿದರು. 'ಬಿಲ್ಲಾ', 'ಡಾರ್ಲಿಂಗ್', 'ಮಿಸ್ಟರ್ ಫರ್ಪೆಕ್ಟ್', 'ಮಿರ್ಚಿ' ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. 'ಬಾಹುಬಲಿ' ಸರಣಿ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ದಾಖಲೆ ಬರೆದಿತ್ತು.
'ಬಾಹುಬಲಿ- 2' ಬಳಿಕ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಸಾಹೋ, ರಾಧೆಶ್ಯಾಮ್, ಆದಿಪುರುಷ್ ಸಿನಿಮಾಗಳು ನಿರಾಸೆ ಮೂಡಿಸಿದ್ದವು. ಇದೀಗ 'ಸಲಾರ್' ಆಗಿ ಬಾಕ್ಸಾಫೀಸ್ ಶೇಕ್ ಮಾಡೋಕೆ ಪ್ರಭಾಸ್ ಬರ್ತಿದ್ದಾರೆ. ಡಿಸೆಂಬರ್ 22ಕ್ಕೆ ಸಿನಿಮಾ ತೆರೆಗೆ ಬರಲಿದೆ. ಅಂದಹಾಗೆ ಈ ಸಿನಿಮಾ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರಲಿದೆ.
'ರಾಜಾ ಡೀಲಕ್ಸ್' ಎನ್ನುವ ಮತ್ತೊಂದು ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ 'ಕಲ್ಕಿ' ಸಿನಿಮಾ ನಿರ್ಮಾಣವಾಗುತ್ತಿದೆ. ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾದಲ್ಲಿ ಯಂಗ್ ರೆಬಲ್ ಸ್ಟಾರ್ ನಟಿಸಲಿದ್ದಾರೆ.


Click it and Unblock the Notifications











