ಮತ ಚಲಾಯಿಸಲಿಲ್ಲ ನಟ ಪ್ರಭಾಸ್: 'ಸಲಾರ್' ಈವೆಂಟ್ ಕೂಡ ಕ್ಯಾನ್ಸಲ್!
ಪಂಚ ರಾಜ್ಯಗಳ ಚುನಾವಣೆ ಮತದಾನ ಶಾಂತಯುತವಾಗಿ ಮುಕ್ತಾಯವಾಗಿದೆ. ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನೆರವೇರಿದೆ. ಚಿರಂಜೀವಿ, ನಾಗಾರ್ಜುನ, ವಿಜಯ್ ದೇವರಕೊಂಡ, ಜ್ಯೂ. ಎನ್‌ಟಿಆರ್ ಸೇರಿದಂತೆ ಟಾಲಿವುಡ್‌ನ ಬಹುತೇಕ ತಾರೆಯರು ಮತ ಚಲಾಯಿದ್ದಾರೆ. ಆದರೆ ಪ್ರಭಾಸ್ ಮಾತ್ರ ಮತ ಚಲಾಯಿಸಲು ಬರಲೇಯಿಲ್ಲ ಎಂದು ವರದಿಯಾಗಿದೆ.
ದಿನದಿಂದ ದಿನಕ್ಕೆ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಸಾಕಷ್ಟು ಜನ ತಮ್ಮ ಹಕ್ಕು ಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. ಸಿನಿಮಾ ತಾರೆಯರು ಬಂದು ಮತ ಚಲಾಯಿಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಬಹುದು. ಅದೇ ಕಾರಣಕ್ಕೆ ಸಿನಿಮಾ ತಾರೆಯರು ತಪ್ಪದೇ ಮತ ಚಲಾಯಿಸಬೇಕು ಎನ್ನುವ ವಾದವೂ ಇದೆ. ಸಿನಿಮಾ ಕಲಾವಿದರನ್ನು ಮತದಾನದ ಅಭಿಯಾನಕ್ಕೂ ಬಳಸಿಕೊಳ್ಳಲಾಗುತ್ತದೆ.

ಪ್ರಭಾಸ್ ಟಾಲಿವುಡ್ ಸೂಪರ್ ಸ್ಟಾರ್. ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ. ಆದರೆ ಈ ಬಾರಿ ಚುನಾವಣೆಗೆ ಪ್ರಭಾಸ್ ಮತ ಚಲಾಯಿಸಿಲ್ಲ ಎಂದು ವರದಿಯಾಗಿದೆ. ಹೈದರಾಬಾದ್‌ನ ಮಣಿಕೊಂಡ ಹೈಸ್ಕೂಲ್‌ನಲ್ಲಿ ಯಂಗ್ ರೆಬಲ್ ಸ್ಟಾರ್ ಮತದಾನ ಮಾಡಬೇಕಿತ್ತು. ಆದರೆ ಸಂಜೆಯವರೆಗೂ ಪ್ರಭಾಸ್ ಮತಗಟ್ಟೆಗೆ ಬರಲೇಯಿಲ್ಲ ಎಂದು ವರದಿಯಾಗುತ್ತಿದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ.
ನಟ ಪ್ರಭಾಸ್ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ವಿದೇಶಕ್ಕೆ ಹೋಗಿ ಕಾಲಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಸದ್ಯ ಹೈದರಾಬಾದ್‌ನಲ್ಲೇ ಇರುವ ಅವರು ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಅದೇ ಕಾರಣಕ್ಕೆ ಮತ ಚಲಾಯಿಸಲು ಕೂಡ ಬರಲಿಲ್ಲ ಎಂದು ಹೇಳಲಾಗುತ್ತಿದೆ. 'ಸಲಾರ್' ಟ್ರೈಲರ್ ಲಾಂಗ್‌ಗೆ ಕ್ಷಣಗಣನೆ ಶುರುವಾಗಿದೆ. ಆದರೆ ಪ್ರಭಾಸ್ ವಿಶ್ರಾಂತಿ ಪಡೆಯುತ್ತಿರುವುದರಿಂದ ಟ್ರೈಲರ್ ಲಾಂಚ್ ಈವೆಂಟ್ ಮಾಡದೇ ಬರೀ ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಲಾಗುತ್ತಿದೆ.
ಅಂದಹಾಗೆ ಚಿರಂಜೀವಿ, ಮಹೇಶ್ ಬಾಬು, ಜ್ಯೂ. ಎನ್‌ಟಿಆರ್, ರಾಮ್‌ಚರಣ್, ವೆಂಕಟೇಶ್, ನಾಗಾರ್ಜುನ, ಅಲ್ಲು ಅರ್ಜುನ್ ಸೇರಿದಂತೆ ಸಾಕಷ್ಟು ಜನ ತಾರೆಯರು ಕುಟುಂಬ ಸದಸ್ಯರ ಜೊತೆ ಬಂದು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಆದರೆ ಅಖಿಲ್ ಅಕ್ಕಿನೇನಿ, ವರುಣ್ ತೇಜ್, ಅಲ್ಲರಿ ನರೇಶ್, ಶರ್ವಾನಂದ್, ವಿಶ್ವಕ್ ಸೇನ್ ಸೇರಿದಂತೆ ಕೆಲ ಯುವ ನಟರು ಮತಗಟ್ಟಗಳ ಬಳಿ ಸುಳಿಯಲಿಲ್ಲ. ಇನ್ನು 'ಕಣ್ಣಪ್ಪ' ಸಿನಿಮಾ ಚಿತ್ರೀಕರಣಕ್ಕಾಗಿ ನ್ಯೂಜಿಲೆಂಡ್‌ನಲ್ಲಿರುವ ಮೋಹನ್ ಬಾಬು, ಮಂಚು ವಿಷ್ಣು ಕೂಡ ಮತ ಚಲಾಯಿಸಲಿಲ್ಲ.
ತೆಲುಗು ನಿರ್ದೇಶಕ ತೇಜ ತಮ್ಮ ನೇರ ನಡೆ ನುಡಿಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಮತ ಚಲಾಯಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ತೇಜ, ಎಲ್ಲರೂ ಬಂದು ಮತ ಚಲಾಯಿಸಿ ಎಂದು ಮನವಿ ಮಾಡಿದರು. "ಸಾಮಾನ್ಯವಾಗಿ ಎಲ್ಲರೂ ರಸ್ತೆಗಳು ಚೆನ್ನಾಗಿಲ್ಲ ಮತ್ತು ಶಾಲೆಗಳು ಚೆನ್ನಾಗಿಲ್ಲ ಎಂದು ದೂರುತ್ತಾರೆ. ನೀರು ಸರಿಯಾಗಿ ಬರುತ್ತಿಲ್ಲ ಎಂದು ದೂರುತ್ತಾರೆ. ಆ ರೀತಿ ದೂರುವ ಎಲ್ಲರೂ ಮನೆಯಿಂದ ಹೊರಗೆ ಬಂದು ಮತದಾನ ಮಾಡಬೇಕು. ಇಲ್ಲದಿದ್ದರೆ ಆ ರೀತಿ ದೂರಲು ನೀವು ಅರ್ಹರಲ್ಲ"
"ಮತ ಚಲಾಯಿಸದವರೆಲ್ಲ ದೇಶದ್ರೋಹಿಗಳು. ನೀವು ಆರೋಗ್ಯವಾಗಿದ್ದಾಗ ಹೊರಗೆ ಬಂದು ಮತ ಚಲಾಯಿಸಿ. ವಯೋವೃದ್ಧರೂ ಗಾಲಿಕುರ್ಚಿಯಲ್ಲಿ ಬಂದು ಮತದಾನ ಮಾಡುತ್ತಿದ್ದಾರೆ. ಇವರು ಮಾತ್ರ ಹಾಕುವುದಿಲ್ಲ. ಜುಬ್ಲಿ ಹಿಲ್ಸ್‌ನಲ್ಲಿ ಮತದಾನ ಕಡಿಮೆಯಾಗಿದೆ. ದೇಶದ್ರೋಹಿಗಳೇ ಇಲ್ಲಿ ಹೆಚ್ಚಾಗಿದ್ದಾರೆ ಎಂದರ್ಥ. ಮನೆಯಲ್ಲಿ ಕುಳಿತು ಟಿವಿ ನೋಡಿ ಮತ ಹಾಕದವರೆಲ್ಲ ದೇಶದ್ರೋಹಿಗಳು" ಎಂದು ತೇಜ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ನಿರ್ದೇಶಕ ತೇಜ ಹೇಳಿಕೆ ವೈರಲ್ ಆಗುತ್ತಿದೆ.


Click it and Unblock the Notifications











