"ಪ್ರಭಾಸ್ ನಟನೆಯ 'ಸಲಾರ್' ಡಬ್ಬಾ ಸಿನಿಮಾ" ಎಂದ 'ವರ್ಷಧಾರೆ' ನಟಿ
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಫಸ್ಟ್ ವೀಕೆಂಡ್‌ನಲ್ಲೇ 400 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಯಂಗ್ ರೆಬಲ್ ಸ್ಟಾರ್ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನಕ್ಕೂ ಒಳ್ಳೆ ಅಂಕ ಸಿಕ್ಕಿದೆ. 'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ಖಾತೆಗೆ ಮತ್ತೊಂದು ಹಿಟ್ ಬಿದ್ದಂತಾಗಿದೆ.
ಹೊಂಬಾಳೆ ಸಂಸ್ಥೆ ನಿರ್ಮಾಣದ 'ಸಲಾರ್' ಸಿನಿಮಾ ಕ್ರಿಸ್‌ಮಸ್ ಸಂಭ್ರಮದಲ್ಲಿ ರಿಲೀಸ್ ಆಗಿದೆ. ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಟಫ್ ಕಾಂಪಿಟೇಷನ್ ಕೊಡುತ್ತಿದೆ. ಕರ್ನಾಟಕದಲ್ಲಿ ಕನ್ನಡ ವರ್ಷನ್‌ಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ದೊಡ್ಡಮಟ್ಟದಲ್ಲೇ ಸಿನಿಮಾ ಬಿಡುಗಡೆಯಾಗಿದ್ದು ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಚಿತ್ರತಂಡ ಕೂಡ ಖುಷಿಯಾಗಿದೆ. ಕ್ರಿಸ್‌ಮಸ್ ರಜೆ ದಿನವೂ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುವ ಸಾಧ್ಯತೆಯಿದೆ.

ಕನ್ನಡದ 'ಉಗ್ರಂ' ಕಥೆಯನ್ನೇ ಕೊಂಚ ಬದಲಿಸಿ 'ಸಲಾರ್' ಸಿನಿಮಾ ಕಟ್ಟಿಕೊಡಲಾಗಿದೆ. ಎರಡು ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯ ಮೊದಲ ಭಾಗಕ್ಕೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಆದರೆ 'ಸಲಾರ್' ಡಬ್ಬಾ ಸಿನಿಮಾ ಎಂದು ನಟಿ ಪಾಯಲ್ ಘೋಷ್ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ವೈರಲ್ ಆಗುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ.
ಕೊಲ್ಕತ್ತಾ ಮೂಲದ ನಟಿ ಪಾಯಲ್ ಘೋಷ್ ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಆಕೆಗೆ ದೊಡ್ಡ ಅವಕಾಶಗಳು ಸಿಗುತ್ತಿಲ್ಲ. ಇನ್‌ಸ್ಟಾಗ್ರಾಮ್, ಟ್ವಿಟರ್‌ನಲ್ಲಿ ಆಕ್ಟೀವ್ ಆಗಿರುವ ಚೆಲುವೆ ತಮ್ಮ ಪೋಸ್ಟ್‌ಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಸದ್ಯ 'ಸಲಾರ್' ಹಾಗೂ 'ಡಂಕಿ' ಎರಡೂ ಕೂಡ ವೇಸ್ಟ್ ಸಿನಿಮಾಗಳು ಎಂದು ಟ್ವೀಟ್ ಮಾಡಿದ್ದಾರೆ.
ಪಾಯಲ್ ಟ್ವೀಟ್‌ಗೆ ಪ್ರಭಾಸ್ ಹಾಗೂ ಶಾರುಖ್ ಖಾನ್ ಅಭಿಮಾನಿಗಳು ಗರಂ ಆಗುತ್ತಿದ್ದಾರೆ. ಅವಕಾಶಗಳಿಲ್ಲದೇ ಖಾಲಿ ಕೂತಿರುವ ನಟಿ ಗಮನ ಸೆಳೆಯಲು ಇಂತಹ ಟ್ವೀಟ್ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಸಿನಿಮಾ ಹೇಗಿದೆ ಅನ್ನೋದು ನಮಗೆ ಗೊತ್ತು, ಆಕೆಯ ಸರ್ಟಿಫಿಕೇಟ್ ಬೇಕಿಲ್ಲ ಎನ್ನುತ್ತಿದ್ದಾರೆ.
'ಸಲಾರ್' ಹಾಗೂ 'ಡಂಕಿ' ಸಿನಿಮಾಗಳ ಬಗ್ಗೆ ಪಾಯಲ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. "2023ರಲ್ಲಿ ಬಿಡುಗಡೆಯಾದ ಯಾವ ಸಿನಿಮಾವನ್ನು ನೋಡುವಂತಿಲ್ಲ. ಎಲ್ಲಾ ಡಬ್ಬಾ ಸಿನಿಮಾಗಳೇ. ಡಂಕಿ, ಸಲಾರ್ ಕೂಡ ಕೆಟ್ಟ ಸಿನಿಮಾಗಳೇ. ರಾಜ್‌ಕುಮಾರ್ ಹಿರಾನಿ ತಮ್ಮ ಕರಿಯರ್‌ನಲ್ಲಿ ಒಂದು ಫ್ಲಾಪ್ ಸಿನಿಮಾ ಮಾಡಿದ್ದಾರೆ. ಎರಡೂ ಡಬ್ಬಾ ಸಿನಿಮಾಗಳೇ. ಆದರೆ 'ಸಲಾರ್' ಚಿತ್ರ ಕಲೆಕ್ಷನ್ ಚೆನ್ನಾಗಿರುತ್ತದೆ. ಯಾಕಂದರೆ ಪ್ರಭಾಸ್ ಯಂಗ್ ಹಾಗೂ ಪವರ್‌ಫುಲ್ ಪರ್ಸನ್, ಆತನಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ" ಎಂದು ಬರೆದಿದ್ದಾರೆ.
ಈ ವರ್ಷ ಬಂದ 'ಪಠಾನ್', 'ಜವಾನ್', 'ಅನಿಮಲ್' ಕೂಡ ವೇಸ್ಟ್ ಎಂದು ಪಾಯಲ್ ಘೋಷ್ ಟ್ವೀಟ್ ಮಾಡಿದ್ದಾರೆ. ಸದ್ಯ ಎಲ್ಲಾ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದು ಹೊಸದಾಗಿ ಒಂದು ಟ್ವೀಟ್ ಮಾಡಿದ್ದಾರೆ. "ನಾನು ಸಲಾರ್ ಸಿನಿಮಾ ಇಷ್ಟಪಡದೇ ಇರಬಹುದು. ಹಾಗಂತ ನನಗೆ ಪ್ರಭಾಸ್ ಅಂದ್ರೆ ಇಷ್ಟ ಇಲ್ಲ ಅಂತ ಅಲ್ಲ. ಪ್ರಭಾಸ್ ಅದ್ಭುತ" ಎಂದು ಬರೆದುಕೊಂಡಿದ್ದಾರೆ.
ತೆಲುಗಿನಲ್ಲಿ ಜ್ಯೂ. ಎನ್‌ಟಿಆರ್ ನಟನೆಯ 'ಊಸರವಳ್ಳಿ' ಚಿತ್ರದಲ್ಲಿ ಪಾಯಲ್ ನಟಿಸಿದ್ದರು. ಹಾಗಾಗಿ ಸದಾ ತಾರಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಆ ಮೂಲಕ ಯಂಗ್ ಟೈಗರ್ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇನ್ನು ಕೆಲ ದಿನಗಳ ಹಿಂದೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಪಾಯಲ್ ಘೋಷ್ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದರು.


Click it and Unblock the Notifications











