Prashanth Neel: 'ಸಲಾರ್' ಹೆಸರಲ್ಲಿ ಪುರೋಹಿತರ ಅರ್ಚನೆ: ತಂದೆ ಸಮಾಧಿ ಎದುರು ನೀಲ್ ಭಾವುಕ
ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ರಿಲೀಸ್ ಪದೇ ಪದೇ ತಡವಾಗುತ್ತಿದೆ. ಸೆಪ್ಟೆಂಬರ್ 28ಕ್ಕೆ ಸಿನಿಮಾ ತೆರೆಗೆ ಬರುತ್ತೆ ಎಂದು ಕಾಯುತ್ತಿದ್ದವರಿಗೆ ನಿರಾಸೆ ಎದುರಾಗಿದೆ. ಸಿನಿಮಾ ಆ ದಿನ ರಿಲೀಸ್ ಆಗಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ. ಲೇಟ್ ಆದರೂ ಪರವಾಗಿಲ್ಲ ಒಳ್ಳೆ ಸಿನಿಮಾ ಕೊಡಿ ಎಂದು ಅಭಿಮಾನಿಗಳು ಚಿತ್ರತಂಡವನ್ನು ಕೇಳಿಕೊಳ್ಳುತ್ತಿದ್ದಾರೆ.
'ಉಗ್ರಂ' ಸಿನಿಮಾದಲ್ಲಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದ ಪ್ರಶಾಂತ್ ನೀಲ್, 'KGF' ಸಿನಿಮಾ ಕಟ್ಟಿಕೊಟ್ಟು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರ್ತಿಸಿಕೊಂಡರು. ನೀಲ್ ನಿರ್ದೇಶನದಲ್ಲಿ ಸಿನಿಮಾ ನಿರ್ಮಿಸಲು ಈಗ ಬಾಲಿವುಡ್ ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಸದ್ಯ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 2 ಭಾಗಗಳಾಗಿ ಸಿನಿಮಾ ತೆರೆಗೆ ಬರಬೇಕಿದೆ. ಆ ಬಳಿಕ ಜ್ಯೂ. ಎನ್‌ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ.

'ಸಲಾರ್' ಸಿನಿಮಾ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಚಾಲ್ತಿಯಲ್ಲಿದ್ದು ಸದ್ಯ ಹೈದರಾಬಾದ್‌ನಲ್ಲೇ ಪ್ರಶಾಂತ್ ನೀಲ್ ಬೀಡು ಬಿಟ್ಟಿದ್ದಾರೆ. ಇತ್ತೀಚೆಗೆ ಪ್ರಶಾಂತ್ ನೀಲ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು ತಮ್ಮ ತಂದೆ ಸಮಾಧಿಗೆ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ ವಿಡಿಯೋ ವೈರಲ್ ಆಗ್ತಿದೆ. ಬೆಂಗಳೂರಿನಲ್ಲೇ ಪ್ರಶಾಂತ್ ನೀಲ್ ಹುಟ್ಟಿ ಬೆಳದರೂ ಅವರದ್ದು ಆಂಧ್ರ ಮೂಲ. ಅವರ ಕುಟುಂಬದ ಮೂಲ ಆಂಧ್ರಪ್ರದೇಶದ ಮಡಕಸಿರಾ ಬಳಿಯ ನೀಲಕಂಠಪುರಂ ಗ್ರಾಮ.
ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ನೀಲ್ ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ಕೃಷ್ಣ ಜನ್ಮಾಷ್ಟಮಿ ದಿನ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬ ಸದಸ್ಯರ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದು ಈ ವೇಳೆ ಪುರೋಹಿತರು 'ಸಲಾರ್' ಸಿನಿಮಾ ಹೆಸರನ್ನು ಸೇರಿಸಿ ಅರ್ಚನೆ ಮಾಡಿರೋದು ವಿಶೇಷ. ನೀಲಕಂಠಪುರಂ ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ತಂದೆ ಹಾಗೂ ಅಜ್ಜಿ ಸಮಾಧಿಗೆ ಪ್ರಶಾಂತ್ ನೀಲ್ ನಮನ ಸಲ್ಲಿಸಿದ್ದಾರೆ.
ಅಜ್ಜಿ ರಂಗಮ್ಮ ಹಾಗೂ ತಂದೆ ಸುಭಾಷ್ ಸಮಾಧಿಗಳಿಗೆ ಪ್ರಶಾಂತ್ ನೀಲ್ ಪೂಜೆ ಸಲ್ಲಿಸಿದ್ದಾರೆ. ಬಳಿಕ ಕೆಲವೊತ್ತು ಸಮಾಧಿ ಎದುರು ಕುಳಿತುಬಿಟ್ಟಿದ್ದಾರೆ. 5 ವರ್ಷಗಳ ಹಿಂದೆ ನೀಲ್ ತಂದೆಯನ್ನು ಕಳೆದುಕೊಂಡಿದ್ದರು. ಅಜ್ಜಿ ಬಗ್ಗೆ ನಿರ್ದೇಶಕರಿಗೆ ಚಿಕ್ಕಂದಿನಿಂದಲೂ ಅಪಾರ ಪ್ರೀತಿ. KGF- 2 ಚಿತ್ರದಲ್ಲಿ ರಾಕಿಭಾಯ್ ತಮ್ಮ ತಾಯಿ ಶಾಂತಮ್ಮನ ಸಮಾಧಿಯನ್ನು ಸ್ಥಳಾಂತರ ಮಾಡಿಸುವ ಸನ್ನಿವೇಶ ಇದೆ. ಆ ದೃಶ್ಯಕ್ಕೆ ತಮ್ಮ ನಿಜ ಜೀವನದ ಹಿನ್ನೆಲೆ ಇದೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ನಿರ್ದೇಶಕರು ಹೇಳಿದ್ದರು.

"ಹುಟ್ಟೂರಿನಲ್ಲಿ ಅಜ್ಜಿ ನಿಧನರಾದಾಗ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಆಗ ನನ್ನ ಬಳಿ ಒಂದು ಸ್ವಂತ ಮನೆ ಕೂಡ ಇರಲಿಲ್ಲ. ಈಗ ಎಲ್ಲವೂ ಇದೆ. ಅಜ್ಜಿ ಸಮಾಧಿಯನ್ನು ತಂದು ಮನೆಯೊಳಗೆ ಇಟ್ಟುಕೊಳ್ಳೋಣ ಎನಿಸುತ್ತಿರುತ್ತದೆ. ಆ ಆಲೋಚನೆಯೇ 'KGF-2' ಚಿತ್ರದ ಆ ದೃಶ್ಯಕ್ಕೆ ಪ್ರೇರಣೆ" ಎಂದಿದ್ದರು. ಅಜ್ಜಿ ಹಾಗೂ ತಂದೆ ಸಮಾಧಿ ಬಳಿ ಪ್ರಶಾಂತ್ ನೀಲ್ ಮೌನವಾಗಿ ಕುಳಿತುಬಿಟ್ಟಿರುವ ವಿಡಿಯೋ ವೈರಲ್ ಆಗ್ತಿದೆ.
ಹೈವೋಲ್ಟೇಜ್ 'ಸಲಾರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಬಹುತೇಕ 'KGF' ತಂಡವೇ ಈ ಚಿತ್ರವನ್ನು ಕಟ್ಟಿಕೊಡುತ್ತಿದೆ. ನೀಲ್ ಎಲಿವೇಷನ್ಸ್, ಪ್ರಭಾಸ್ ಪರ್ಫಾರ್ಮನ್ಸ್ ಸೇರಿದರೆ ಹೇಗಿರುತ್ತೋ ಎಂದು ಊಹಿಸಿಕೊಂಡೇ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. 1000 ಕೋಟಿ ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಆಗಸ್ಟ್ ಕೊನೆ ವಾರದಲ್ಲಿ 'ಸಲಾರ್' ಟ್ರೈಲರ್ ಬರುತ್ತೆ ಎಂದು ಕಾದವರಿಗೆ ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಆಗಲ್ಲ ಎನ್ನುವ ವಿಚಾರ ಬೇಸರ ತಂದಿದೆ. ರಿಲೀಸ್ ಕನ್ಫರ್ಮ್ ಆಗದೇ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಲು ಹೊಂಬಾಳೆ ಸಂಸ್ಥೆ ಹಿಂದು ಮುಂದು ನೋಡುತ್ತಿದೆ.


Click it and Unblock the Notifications











