'ಡಂಕಿ', 'ಸಲಾರ್'ಗಿಂತಲೂ 'ಅನಿಮಲ್' ದೊಡ್ಡದು ಯಾಕೆ?
ಡಿಸೆಂಬರ್‌ನಲ್ಲಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯಲು ದೊಡ್ಡ ದೊಡ್ಡ ಸಿನಿಮಾಗಳು ಸಜ್ಜಾಗಿವೆ. ಡಿಸೆಂಬರ್ 1ಕ್ಕೆ ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ ನಟನೆಯ 'ಅನಿಮಲ್' ಸಿನಿಮಾ ತೆರೆಗಪ್ಪಳಿಸಲಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳ ನಡುವೆ ಭಾರೀ ಕ್ಲ್ಯಾಶ್ ಏರ್ಪಡುತ್ತಿದೆ. 12 ಸಿನಿಮಾಗಳು ಡಿಸೆಂಬರ್ 4ನೇ ವಾರಾಂತ್ಯದಲ್ಲಿ ತೆರೆಗೆ ಬರ್ತಿರೋದು ವಿಶೇಷ.
ಶಾರುಖ್ ಖಾನ್ ನಟನೆಯ 'ಡಂಕಿ' ರಿಲೀಸ್ ಪೋಸ್ಟ್‌ಪೋನ್ ಆಗುತ್ತದೆ ಎನ್ನುವ ಗುಸುಗುಸು ಕೇಳಿಬರುತ್ತಲೇ ಇದೆ. 'ಸಲಾರ್' ಎದುರು ರಿಲೀಸ್ ಮಾಡೋದು ಬೇಡ ಎಂದು ಚಿತ್ರತಂಡ ಯೋಚಿಸುತ್ತಿದೆಯಂತೆ. ಇನ್ನು ಇತ್ತೀಚೆಗೆ ಕಿಂಗ್ ಖಾನ್ ಬರ್ತ್‌ಡೇ ಸಂಭ್ರಮದಲ್ಲಿ ಟೀಸರ್ ರಿಲೀಸ್ ಆಗಿದೆ. ಮತ್ತೊಂದು ಕಡೆ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡದಾಗಿ ಸಿನಿಮಾ ರಿಲೀಸ್ ಆಗಲಿದೆ.

'KGF' ಸರಣಿ ಬಳಿಕ ಪ್ರಶಾಂತ್ ನೀಲ್ ಕೊಟ್ಟಿಕೊಟ್ಟಿರುವ ಸಿನಿಮಾ 'ಸಲಾರ್'. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಬರೀ ಪೋಸ್ಟರ್, ಟೀಸರ್‌ನಿಂದಲೇ ಸಿನಿಮಾ ಕುತೂಹಲ ಕೆರಳಿಸಿದೆ. ಡಿಸೆಂಬರ್ 1ಕ್ಕೆ ಸಿನಿಮಾ ಟ್ರೈಲರ್ ರಿಲೀಸ್ ಸಿದ್ಧತೆ ನಡೀತಿದೆ. ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಿಸಿದೆ. ದೊಡ್ಡಮಟ್ಟದಲ್ಲಿ ಪ್ರಮೋಷನ್ ಹಾಗೂ ರಿಲೀಸ್ ತಯಾರಿ ನಡೀತಿದೆ.
ಇನ್ನು 'ಡಂಕಿ'ಗಿಂತ 'ಸಲಾರ್' ಸಿನಿಮಾ ದೊಡ್ಡದು. ಅದೇ ರೀತಿಯ 'ಸಲಾರ್'ಗಿಂತ 'ಅನಿಮಲ್' ದೊಡ್ಡದು ಎನ್ನು ಚರ್ಚೆ ನಡೀತಿದೆ. ಕನ್‌ಫ್ಯೂಸ್ ಆಗಬೇಡಿ. ರನ್‌ಟೈಮ್ ವಿಚಾರಕ್ಕೆ ಬಂದರೆ 'ಅನಿಮಲ್' ಈ ಎರಡೂ ಸಿನಿಮಾಗಳಿಗಿಂತ ದೀರ್ಘವಾದ ಸಿನಿಮಾ ಎನ್ನುವ ಮಾತುಗಳು ಕೇಳಿಬರ್ತಿದೆ. ಇವತ್ತಿನ ಕಾಲದಲ್ಲಿ ಸಿನಿಮಾ ರನ್‌ಟೈಮ್ ಬಹಳ ಮುಖ್ಯ. ಸಿನಿಮಾ ಎಂಗೇಜಿಂಗ್ ಆಗಿ ಇಲ್ಲ ಎಂದರೆ ಪ್ರೇಕ್ಷಕರು ತಾಳ್ಮೆ ಕಳೆದುಕೊಳ್ಳುತ್ತಾರೆ. ಸಾಧ್ಯವಾದಷ್ಟು ಸಿನಿಮಾ ಚಿಕ್ಕದಾಗಿರಬೇಕು. ಒಂದು ವೇಳೆ ಸುದೀರ್ಘವಾಗಿದ್ದರೂ ನೋಡಿಸಿಕೊಳ್ಳುವಂತಿರಬೇಕು.
ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸಿನಿಮಾ ಕಾಲಾವಧಿ 2 ಗಂಟೆ 40 ನಿಮಿಷ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಹೆಚ್ಚು ಕಡಿಮೆ ಎರಡೂ ಮುಕ್ಕಾಲು ಗಂಟೆ ಸಿನಿಮಾ. ರಾಜ್‌ಕುಮಾರ್ ಹಿರಾನಿ ಮೇಲೆ ಪ್ರೇಕ್ಷಕರು ಭರವಸೆಯಿಂದ ಇದ್ದು ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಇನ್ನು 'ಸಲಾರ್' ಸಿನಿಮಾ ಕಾಲಾವಧಿ ಬರೋಬ್ಬರಿ 2 ಗಂಟೆ 55 ನಿಮಿಷ ಎನ್ನುವ ಮಾತುಗಳು ಕೇಳಿಬರ್ತಿದೆ.

ಹೆಚ್ಚು ಕಡಿಮೆ 'ಸಲಾರ್' 3 ಗಂಟೆಗಳ ಸಿನಿಮಾ. ಇದನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇಷ್ಟು ದೊಡ್ಡ ಸಿನಿಮಾನಾ? ಕೊಂಚ ಯಾಮಾರಿದ್ರೂ ಕಷ್ಟ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ರಣ್‌ಬೀರ್ ಕಪೂರ್ ನಟನೆಯ 'ಅನಿಮಲ್' ಸಿನಿಮಾ ಕಾಲಾವಧಿ ಮೂರು ಗಂಟೆಗೂ ಹೆಚ್ಚು ಎಂದು ವರದಿಯಾಗಿದೆ. 3 ಗಂಟೆ 2 ನಿಮಿಷಗಳ ಸುದೀರ್ಘ ಸಿನಿಮಾ ಇದು ಎಂದು ಕೇಳಿ ಬಾಲಿವುಡ್ ಪ್ರೇಕ್ಷಕರು ದಂಗಾಗಿದ್ದಾರೆ. ಚಿತ್ರದಕ್ಕೆ ಎರಡು ಇಂಟರ್‌ವಲ್ ಕೊಟ್ಟುಬಿಡಿ ಎಂದು ವ್ಯಂಗ್ಯವಾಡುತ್ತಿದ್ದಾರೆ.
3 ಗಂಟೆ ಕಾಲಾವಧಿಯ ಸಿನಿಮಾಗಳು ಈ ಹಿಂದೆ ಬಂದಿಲ್ಲ ಅಂತಲ್ಲ. ನಾಲ್ಕು ಗಂಟೆಯ ಸಿನಿಮಾಗಳು ಬಂದಿರುವ ಉದಾಹರಣೆಯಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರೇಕ್ಷಕರನ್ನು ಅಷ್ಟು ಹೊತ್ತು ಥಿಯೇಟರ್‌ನಲ್ಲಿ ಕೂರಿಸಿಕೊಳ್ಳುವುದು ಕಷ್ಟ. 2 ಗಂಟೆ, 2 ಗಂಟೆ 15 ನಿಮಿಷ, ಮಹಾ ಎಂದರೆ ಎರಡೂವರೆ ಗಂಟೆಯಲ್ಲಿ ಸಿನಿಮಾ ಮುಗಿಯಬೇಕು. 3 ಗಂಟೆ ಅನ್ನೋದೆಲ್ಲಾ ಬಹಳ ರಿಸ್ಕ್ ಎನ್ನುವ ಚರ್ಚೆ ನಡೀತಿದೆ. ಯಾರು ಈ ಸಾಹಸದಲ್ಲಿ ಗೆಲ್ಲುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.


Click it and Unblock the Notifications











