Prabhas: ಮೊಣಕಾಲು ಸರ್ಜರಿ ಬಳಿಕ ಹೈದರಾಬಾದ್‌ಗೆ ಪ್ರಭಾಸ್ ವಾಪಸ್: ಶೀಘ್ರದಲ್ಲೇ ಐಟಂ ಸಾಂಗ್ ಶೂಟಿಂಗ್
ಬಾಹುಬಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಡಿಸೆಂಬರ್ 22ಕ್ಕೆ ಸಿನಿಮಾ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸಲಿದೆ. ಪ್ರಭಾಸ್ ಕೆಲ ದಿನಗಳಿಂದ ವಿದೇಶದಲ್ಲಿ ಬೀಡು ಬಿಟ್ಟಿದ್ದರು. ಮೊಣಕಾಲು ಶಸ್ತ್ರ ಚಿಕಿತ್ಸೆಗಾಗಿ ಇಟಲಿಗೆ ಹೋಗಿದ್ದರು ಎನ್ನಲಾಗ್ತಿದೆ. ಇದೀಗ ಪ್ರಭಾಸ್ ಹೈದರಾಬಾದ್‌ಗೆ ವಾಪಸ್ ಬಂದಿದ್ದಾರೆ.
ಪ್ರಭಾಸ್ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗುತ್ತಿದ್ದಾರೆ. ಶೀಘ್ರದಲ್ಲೇ 'ಸಲಾರ್' ಪ್ರಮೋಷನ್ ಶುರುವಾಗಲಿದೆ. ಅಂದಹಾಗೆ 'ಸಲಾರ್' ಚಿತ್ರದ ಸ್ಪೆಷಲ್ ಸಾಂಗ್ ಶೂಟಿಂಗ್ ಬಾಕಿಯಿದೆ. ಅದನ್ನು ಶೀಘ್ರದಲ್ಲೇ ಆರಂಭಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 28ಕ್ಕೆ 'ಸಲಾರ್' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಗ್ರಾಫಿಕ್ಸ್ ವರ್ಕ್ ಇಷ್ಟವಾಗದ ಕಾರಣ ಪ್ರಶಾಂತ್ ನೀಲ್ ರೀ ವರ್ಕ್ ಮಾಡಿಸಿದ್ದರು. ಅದಕ್ಕಾಗಿಯೇ ರಿಲೀಸ್ ಡೇಟ್ 3 ತಿಂಗಳು ಮುಂದೂಡಿದರು ಎನ್ನುವ ಮಾತುಗಳು ಕೇಳಿಬಂದಿತ್ತು. ಪ್ರಭಾಸ್ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ಪಡೆದ ಬಳಿಕ ಪ್ರಮೋಷನ್, ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡುತ್ತಾರೆ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು.
'ಸಲಾರ್' ರಿಲೀಸ್ ಮುಂದೂಡಲು ಪ್ರಭಾಸ್ ಮೊಣಕಾಲು ನೋವು ಕೂಡ ಒಂದು ಕಾರಣ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ನಡೆದಿತ್ತು. ಇನ್ನು ಚಿತ್ರದ ಐಟಂ ಸಾಂಗ್ ಶೂಟಿಂಗ್ ಮುಗಿದಿಲ್ಲ. ಪ್ರಭಾಸ್ ಕಾಲು ನೋವಿನಿಂದ ಅದು ಸಾಧ್ಯವಾಗುತ್ತಿಲ್ಲ. ಸರ್ಜರಿ ಬಳಿಕ ಸಾಂಗ್ ಶೂಟ್ ಮಾಡಲು ಚಿತ್ರತಂಡ ನಿರ್ಧರಿಸಿದ ಎನ್ನುವ ಊಹಾಪೋಹ ಶುರುವಾಗಿತ್ತು. ಪ್ರಭಾಸ್ ಇಟಲಿಯಿಂದ ಹೈದರಾಬಾದ್‌ಗೆ ವಾಪಸ್ ಬರ್ತಿದ್ದಂತೆ ಐಟಂ ಸಾಂಗ್ ಶೂಟಿಂಗ್ ಬಗ್ಗೆ ಚರ್ಚೆ ನಡೀತಿದೆ.
ಈ ಹಿಂದೆ 'KGF' ಚಾಪ್ಟರ್-1 ಚಿತ್ರದ 'ಜೋಕೆ' ಹಾಡನ್ನು ರಿಲೀಸ್ ಹೊಸ್ತಿಲಲ್ಲಿ ಚಿತ್ರೀಕರಿಸಲಾಗಿತ್ತು. ಅದೇ ರೀತಿ 'ಸಲಾರ್' ಸ್ಪೆಷಲ್ ಸಾಂಗ್ ಪ್ಲ್ಯಾನ್ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇತ್ತೀಚೆಗೆ 'ಸಲಾರ್' ಕೇರಳ ವಿತರಣೆ ಹಕ್ಕು ಪೃಥ್ವಿರಾಜ್ ಸುಕುಮಾರ್‌ಗೆ ಕೊಟ್ಟಿರುವುದನ್ನು ಹೊಂಬಾಳೆ ಸಂಸ್ಥೆ ಘೋಷಿಸಿತ್ತು. ಇನ್ನುಳಿದ ಏರಿಯಾಗಳ ವಿತರಣೆ ಹಕ್ಕು ಮಾರಾಟ ಮಾಡುವ ಕೆಲಸಗಳು ನಡೀತಿದೆ. ಟ್ರೈಲರ್ ಲಾಂಚ್ ಈವೆಂಟ್, ಪ್ರೀ ರಿಲೀಸ್ ಈವೆಂಟ್ ತಯಾರಿಗಳು ಜೋರಾಗಿದೆ.

'KGF' ಚಿತ್ರವನ್ನು ವಿತರಣೆ ಮಾಡಿದ್ದವರೇ 'ಸಲಾರ್' ಸಿನಿಮಾವನ್ನು ಪ್ರೇಕ್ಷಕರು ಮುಂದೆ ಕೊಂಡೊಯ್ಯುವ ಸಾಧ್ಯತೆಯಿದೆ. ಹಿಂದಿ ವರ್ಷನ್ ಎಎ ಫಿಲ್ಮ್ಸ್ ಪಾಲಾಗಿದೆ. ಸದ್ಯ 'ಸಲಾರ್' ಐಟಂ ಸಾಂಗ್ ಶೂಟಿಂಗ್ ನಿಜಾನಾ? ಹಾಗಾದರೆ ಯಾರು ಹಾಡಿಗೆ ಹೆಜ್ಜೆ ಹಾಕುತ್ತಾರೆ? ಎನ್ನುವ ಚರ್ಚೆ ಕೂಡ ಜೋರಾಗಿದೆ. ರವಿ ಬಸ್ರೂರು ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ 'ಸಲಾರ್' ಸಿನಿಮಾ ನಿರ್ಮಾಣ ಮಾಡುತ್ತಿದೆ. ಎರಡು ಭಾಗಗಳಾ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ನವೆಂಬರ್ ಕೊನೆ ವಾರ ಟ್ರೈಲರ್ ರಿಲೀಸ್ ಆಗಲಿದೆ. ಆ ಬಳಿಕ ಬೆಂಗಳೂರು, ಮುಂಬೈ, ಚೆನ್ನೈ, ಕೊಚ್ಚಿನ್‌ಗೆ ಚಿತ್ರತಂಡ ಭೇಟಿ ಕೊಟ್ಟು ಸಿನಿಮಾ ಪ್ರಚಾರ ನಡೆಸಲಿದೆ. ವಿಶ್ವದಾದ್ಯಂತ 5 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಸಲಾರ್' ಸಿನಿಮಾ ರಿಲೀಸ್ ಆಗಲಿದೆ.
ಪ್ರಭಾಸ್ 'ಸಲಾರ್' ಚಿತ್ರಕ್ಕೆ ಶಾರುಖ್ ಖಾನ್ 'ಡಂಕಿ' ಪೈಪೋಟಿ ಕೊಡಲಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 21ಕ್ಕೆ ತೆರೆಗೆ ಬರಲಿದೆ. ಇನ್ನು ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ದೊಡ್ಡ ತಾರಾಗಣವಿದೆ.


Click it and Unblock the Notifications











