"ಹೀರೊ ಜೊತೆ ಮೊದ್ಲು ಡೇಟಿಂಗ್, ಆಮೇಲೆ ಮದ್ವೆ, ನಾನು, ಪ್ರಭಾಸ್ ಕೂತು ಎಣ್ಣೆ ಹಾಕಿದ್ದೀವಿ": ಪ್ರಶಾಂತ್ ನೀಲ್
'ಸಲಾರ್' ಸಿನಿಮಾ ಇದೇ ಶುಕ್ರವಾರ ತೆರೆಗಪ್ಪಳಿಸಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ. ಕರ್ನಾಟಕದಲ್ಲೂ ಸಿನಿಮಾ ಭಾರೀ ಕ್ರೇಜ್ ಹುಟ್ಟಾಕ್ಕಿದೆ. ಚಿತ್ರದ ಪ್ರಮೋಷನ್ ಭಾಗವಾಗಿ ಪ್ರಭಾಸ್, ಪ್ರಶಾಂತ್ ನೀಲ್ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಯಂಗ್ ರೆಬಲ್ ಸ್ಟಾರ್ ಬಗ್ಗೆ ನೀಲ್ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ 'ಸಲಾರ್' ಸಿನಿಮಾ ನಿರ್ಮಾಣವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರದ ಸ್ಯಾಂಪಲ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಇದೀಗ 'ಸಲಾರ್' ಹೊಸ ಟ್ರೈಲರ್ ರಿಲೀಸ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಚಿತ್ರದಲ್ಲಿ ಇಬ್ಬರು ಸ್ನೇಹಿತರ ಕಥೆಯನ್ನು ಹೇಳಲಾಗುತ್ತಿದೆ. ಪ್ರಭಾಸ್ ಜೊತೆ ಪೃಥ್ವಿರಾಜ್ ಸುಕುಮಾರನ್ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'A' ಸರ್ಟಿಫಿಕೇಟ್ ಸಿಕ್ಕಿದೆ.

'ಸಲಾರ್' ಚಿತ್ರದಲ್ಲಿ ವೈಲೆನ್ಸ್ ಜಾಸ್ತಿ ಇದ್ದು ಅದೇ ಕಾರಣಕ್ಕೆ 'A' ಸರ್ಟಿಫಿಕೇಟ್ ಕೊಡಲಾಗಿದೆ. ಇದನ್ನು ಚಿತ್ರತಂಡ ಕೂಡ ಒಪ್ಪಿಕೊಂಡಿದೆ. ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಆಕ್ಷನ್, ವೈಲೆನ್ಸ್ ಜಾಸ್ತಿನೇ ಇರುತ್ತದೆ. ಸ್ನೇಹಿತರ ಕಥೆಯಲ್ಲಿ ಅಷ್ಟೊಂದು ವೈಲೆನ್ಸ್ ಯಾಕೆ? ಎನ್ನುವ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕರು ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ವೈಲೆನ್ಸ್ ಯಾಕೆ ಹೆಚ್ಚು ಎನ್ನುವ ಪ್ರಶ್ನೆಗೆ ಪ್ರಶಾಂತ್ ನೀಲ್ ಮಾತನಾಡುತ್ತಾ "ಎಮೋಷನ್‌ನಿಂದಲೇ ವೈಲೆನ್ಸ್ ಬರುತ್ತದೆ. ಸುಖಾಸುಮ್ಮನೆ ವೈಲೆನ್ಸ್ ಬೇಕು ಎನ್ನುವ ಕಾರಣಕ್ಕೆ ವೈಲೆನ್ಸ್ ಅವಶ್ಯಕತೆ ಇಲ್ಲ. ನನಗೆ ಗೊತ್ತು ಮಾಸ್ ಸಿನಿಮಾಗಳು ಗೆಲ್ಲುತ್ತದೆ. ಇನ್ನು ಮಾಸ್ ಸಿನಿಮಾಗಳು ವೈಲೆನ್ಸ್ ಟ್ಯಾಗ್ ಜೊತೆಗೆ ಬರ್ತಾವೆ. 'ಸಲಾರ್' ಮಾಸ್ ಸಿನಿಮಾ ಆಗಿದ್ದರೆ ಅದು ಎಮೋಷನ್ ಕಾರಣಕ್ಕೆ ಮಾತ್ರ. ಹಾಗಾಗಿ ನಾವು ಎಮೋಷನ್‌ಗೆ ಕಟ್ಟುಬಿದ್ದೆವು. ಆ ಎಮೋಷನ್‌ಗಾಗಿ ವೈಲೆನ್ಸ್ ತೋರಿಸಿದ್ದೇವೆ".

ಪ್ರಭಾಸ್ ಇತ್ತೀಚಿನ ಸಿನಿಮಾಗಳು ಗೆಲ್ಲಲಿಲ್ಲ. ಹಾಗಾಗಿ ಕಥೆಯಲ್ಲಿ ಏನಾದರೂ ಬದಲಾವಣೆ ಮಾಡಿದ್ರಾ? ಎನ್ನುವ ಪ್ರಶ್ನೆಗೆ "ನಾನು ಪ್ರಭಾಸ್ ಸರ್‌ಗೆ ಕಥೆ ಹೇಳಿದಾಗ ಇದು ಮಾಸ್ ಸಬ್ಜೆಕ್ಟ್, ಜೊತೆ ಸ್ಟ್ರಾಂಗ್ ಎಮೋಷನ್ ಇತ್ತು. ಪ್ರಭಾಸ್ ಅವರಿಗೆ ನನ್ನನ್ನು ಸೇರಿದಂತೆ ಸಾಕಷ್ಟು ಜನ ಅಭಿಮಾನಿಗಳಿರುವುದು ಬಾಹುಬಲಿಗೂ ಮುಂಚೆ ಅವರು ಮಾಡಿದ ಮಾಸ್ ಪಾತ್ರಗಳಿಂದ. ಎಲ್ಲರೂ ಆ ಸಿನಿಮಾಗಳನ್ನೆಲ್ಲಾ ನೋಡಿಲ್ಲ. ಹಾಗಾಗಿ ನಾನು 'ವರ್ಷಂ' ಹಾಗೂ 'ಛತ್ರಪತಿ ಸಿನಿಮಾಗಳಲ್ಲಿ ಅವರನ್ನು ಹೇಗೆ ನೋಡಿದೇನೊ ಆ ರೀತಿ ತೋರಿಸಲು ಇಷ್ಟಪಟ್ಟೆ. ಹಾಗಾಗಿ ಕಥೆಯನ್ನು ಸುಖಾ ಸುಮ್ಮನೆ ಬದಲಿಸಿದರೆ, 'KGF' ಗೆಲ್ತು ಎನ್ನುವ ಕಾರಣಕ್ಕೆ ಬದಲಿಸಿದರೆ, ಬೇರೆ ಸಿನಿಮಾ ಸೋಲುಂಡವು ಎಂದು ಬದಲಿಸಿದರೆ ಕೊನೆಗೆ ಸಿನಿಮಾ ಗೆಲ್ಲಲ್ಲ"
'KGF'-2 ಬಳಿಕ ಅಲ್ಲು ಅರ್ಜುನ್, ರಾಮ್‌ಚರಣ್, ತಾರಕ್ ನಿಮ್ಮೊಟ್ಟಿಗೆ ಸಿನಿಮಾ ಮಾಡಲು ಬಯಸಿದ್ದರು. ಸಿನಿಮಾ ಮುಂದಿನ ಸಿನಿಮಾ ಆಯ್ಕೆ ಮಾಡಿಕೊಳ್ಳಲು ಕಷ್ಟವಾಗಲಿಲ್ಲವೇ ಎನ್ನುವ ಪ್ರಶ್ನೆಗೆ ನೀಲ್ ಈತರ ಹೇಳಿದ್ದಾರೆ. "ಸಿನಿಮಾಗಳ ಆಯ್ಕೆ ಅನ್ನೋದು ವಿಭಿನ್ನವಾಗಿರುತ್ತದೆ. ಮೊದಲಿಗೆ ನಟರು ನಿಮ್ಮ ಕೆಲಸ ಮೆಚ್ಚಬೇಕು. ವೈಯಕ್ತಿಕವಾಗಿಯೂ ಒಪ್ಪಿಕೊಳ್ಳಬೇಕು. ನಾನು ಸಹ ವೈಯಕ್ತಿಕವಾಗಿ ಒಪ್ಪಿಕೊಳ್ಳಬೇಕು. ಇದಕ್ಕೆ ಏಳರಿಂದ ಎಂಟು ತಿಂಗಳು ಸಮಯ ಬೇಕಾಗುತ್ತದೆ."
"ನಿರ್ದೇಶಕ, ನಟ ಒಟ್ಟಿಗೆ ಸೇರಿ ಸಿನಿಮಾ ಮಾಡುವುದು ಅಂದ್ರೆ ಮೊದಲು ಡೇಟಿಂಗ್ ಹೋಗಿ ಬಳಿಕ ಮದುವೆ ಆಗುವಂತೆ. ಸಿನಿಮಾ ವಿಚಾರದಲ್ಲಿ ಅರೇಂಜ್ಡ್ ಮ್ಯಾರೇಜ್ ಸಾಧ್ಯವಿಲ್ಲ. ಒಳ್ಳೆ ಸಿನಿಮಾ ಮಾಡಬೇಕು ಅಂದ್ರೆ ಒಳ್ಳೆ ನಟ ಬೇಕು. ನಗೆ ಆ ನಟರ ವಿಚಾರದಲ್ಲಿ ಬಹಳ ಖುಷಿಯಿದೆ. ಅವರ ಆಕ್ಟಿಂಗ್ ಪವರ್, ಒಂದೊಳ್ಳೆ ಕತೆಯನ್ನು ಒಳ್ಳೆ ಸಿನಿಮಾ ಆಗಿ ಮಾಡುವ ಬಗೆ ಇಷ್ಟವಾಗುತ್ತದೆ" ಎಂದಿದ್ದಾರೆ.
'ಸಲಾರ್' ಚಿತ್ರಕ್ಕಾಗಿ ಪ್ರಭಾಸ್ ಜೊತೆ 4 ತಿಂಗಳ ಕಾಲ ಪ್ರಯಾಣಿಸಿದೆ. ಕೆಲವೊಮ್ಮೆ ಇಬ್ಬರೂ ಕೂಡ ಎಣ್ಣೆ ಹಾಕಿದ್ದೇವೆ" ಎಂದು ಪ್ರಶಾಂತ್ ನೀಲ್ ವಿವರಿಸಿದ್ದಾರೆ.


Click it and Unblock the Notifications











