Salaar: ಶೃತಿ ಹಾಸನ್ ಡಬಿಂಗ್ ಪೂರ್ಣ; ಎಲ್ಲಾ 5 ಭಾಷೆಗಳಿಗೂ ತನ್ನದೇ ಧ್ವನಿ ನೀಡಿದ ನಟಿಯದ್ದು ಯಾವ ಪಾತ್ರ?
ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಸಲಾರ್ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಸೆಪ್ಟೆಂಬರ್ 28ರಂದು ಸಲಾರ್ ಬೆಳ್ಳಿಪರದೆಗೆ ಲಗ್ಗೆ ಇಡಲು ಸಲಾರ್ ತಯಾರಾಗಿದೆ. ಇನ್ನು ಚಿತ್ರದ ಬಿಡುಗಡೆ ದಿನ ಸಮೀಪಿಸುತ್ತಿದ್ದಂತೆ ಚಿತ್ರತಂಡ ಚಿತ್ರದ ಹೈಪ್ ಹೆಚ್ಚಿಸಲು ಟೀಸರ್ ಬಿಡುಗಡೆಗೊಳಿಸಿತ್ತು.
ಕಳೆದ ಜುಲೈ 6ರ ಬೆಳಗ್ಗೆ 5.12ಕ್ಕೆ ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಸಲಾರ್ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಈ ಟೀಸರ್‌ನಲ್ಲಿ ನಾಯಕನಿಗೆ ವೃದ್ಧನಿಂದ ಬಿಲ್ಡಪ್ ಕೊಡಿಸುವುದು ಹಾಗೂ ಪ್ರಭಾಸ್ ಮುಖವನ್ನೇ ತೋರಿಸದೇ ಹೊಡೆದಾಡುವ ಒಂದಷ್ಟು ದೃಶ್ಯಗಳ ಕಟ್‌ಗಳು ಬಿಟ್ಟರೆ ಇನ್ಯಾವ ಅಂಶವನ್ನೂ ನಿರ್ದೇಶಕ ಪ್ರಶಾಂತ್ ನೀಲ್ ಬಿಟ್ಟುಕೊಟ್ಟಿರಲಿಲ್ಲ. ಹೀಗೆ ಸಿಂಪಲ್ ಟೀಸರ್ ಬಿಡುಗೆಡ ಮಾಡುವ ಮೂಲಕವೇ ಪ್ರಶಾಂತ್ ನೀಲ್ ಸಲಾರ್ ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಸಲಾರ್ ಚಿತ್ರದ ಬಿಡುಗಡೆಗೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ವಿದೇಶದಲ್ಲಿ ಈಗಲೇ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಆರಂಭಗೊಂಡಿದೆ. ಇತ್ತ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಸದ್ಯ ಡಬಿಂಗ್ ಹಾಗೂ ಸೌಂಡ್ ಮಿಕ್ಸಿಂಗ್ ಕೆಲಸಗಳು ಭರದಿಂದ ಸಾಗಿದ್ದು, ಚಿತ್ರದ ನಾಯಕಿ ಶೃತಿ ಹಾಸನ್ ತಮ್ಮ ಭಾಗದ ಸಂಪೂರ್ಣ ಡಬಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ.
ಈ ಕುರಿತು ನಟಿ ಶೃತಿ ಹಾಸನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿಯನ್ನೂ ಸಹ ಹಂಚಿಕೊಂಡಿದ್ದರು. ಅಂದಹಾಗೆ ಸಲಾರ್ ಚಿತ್ರದ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿಯೂ ಸಹ ಬಿಡುಗಡೆಯಾಗಲಿದೆ. ಶೃತಿ ಹಾಸನ್ ಈ ಎಲ್ಲಾ ಅವತರಣಿಕೆಗಳಿಗೂ ಸಹ ತಮ್ಮದೇ ದನಿಯನ್ನು ನೀಡಿದ್ದಾರೆ.
ಹೌದು, ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಈ ಐದು ಭಾಷೆಗಳಲ್ಲಿಯೂ ಸಹ ಶೃತಿ ಹಾಸನ್ ತಮ್ಮ ದನಿಯನ್ನು ನೀಡಿದ್ದಾರೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ ನಟನೆಯ ಪೃಥ್ವಿ ಚಿತ್ರದ ನೆನಪಿಡು ನೆನಪಿಡು ಹಾಡಿಗೆ ದನಿಯನ್ನು ನೀಡಿದ್ದ ಶೃತಿ ಹಾಸನ್ ಈಗ ಸಂಪೂರ್ಣವಾಗಿ ಕನ್ನಡದಲ್ಲಿಯೇ ಡಬಿಂಗ್ ಮಾಡಿದ್ದಾರೆ. ಇನ್ನು ಶೃತಿ ಹಾಸನ್ ಸಲಾರ್ ಚಿತ್ರದಲ್ಲಿ ಶಿಕ್ಷಕಿ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಸುದ್ದಿಯೂ ಸಹ ಹರಿದಾಡುತ್ತಿದೆ.


Click it and Unblock the Notifications











