ಭಾರತ- ಪಾಕ್ ಕದನ ವಿರಾಮದ ನಡುವೆ 'ಸಲಾರ್' ಬಿಟ್ಟಿ ಬಿಲ್ಡಪ್; ನೆಟ್ಟಿಗರ ತರಾಟೆ
ಭಾರತ ಮತ್ತು ಪಾಕಿಸ್ತಾನದ ನಡುವೆ ಮೂರ್ನಾಲ್ಕು ದಿನ ನಡೆದ ಅಘೋಷಿತ ಯುದ್ಧಕ್ಕೆ ಕದನ ವಿರಾಮ ಘೋಷಣೆ ಆಗಿತ್ತು. ಆ ಬಳಿಕ ಕೂಡ ಪಾಕ್ ತನ್ನ ನರಿಬುದ್ಧಿ ತೋರಿಸಿದ್ದು ಅದಕ್ಕೆ ಭಾರತ ಸೇನೆ ತಕ್ಕ ಉತ್ತರ ಕೊಟ್ಟಿತ್ತು. ಸದ್ಯ ಗಡಿಯಲ್ಲಿ ಯುದ್ಧ ಉದ್ವಿಗ್ನತೆ ಉಂಟಾಗಿದೆ. ಇದೆಲ್ಲದರ ನಡುವೆ 'ಸಲಾರ್' ಚಿತ್ರತಂಡದ ಪೋಸ್ಟ್‌ವೊಂದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಅಟ್ಟಹಾಸ ಮೆರೆದಿದ್ದರು. ದಾಳಿಯಲ್ಲಿ 28 ಮಂದಿ ಅಮಾಯಕ ಪ್ರವಾಸಿಗರು ಸಾವನ್ನಪ್ಪಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಕೆಲವರು ಸಾವನ್ನಪ್ಪಿದ್ದರು. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರದ ದಿಟ್ಟನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಉಗ್ರರ ಅಡುಗುತಾಣಗಳನ್ನೇ ಗುರಿಯಾಗಿ ಭಾರತ ಸೇನೆ ಕ್ಷಿಪಣಿ ದಾಳಿ ನಡೆಸಿ ಪಾಕಿಸ್ತಾನಕ್ಕೆ ತಕ್ಕ ಬುದ್ಧಿ ಕಲಿಸಿತ್ತು.

ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬೆನ್ನಲ್ಲೇ ಪಾಕ್ ಭಾರತದ ಮೇಲೆ ದಾಳಿಗೆ ಮುಂದಾಯಿತು. ಅದನ್ನು ಭಾರತ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಕದನ ವಿರಾಮ ಘೋಷಣೆ ಆಗಿದ್ದರೂ ಕೂಡ ಪಾಕಿಸ್ತಾನದ ಪದೇ ಪದೇ ಗಡಿಯಾಗಿ ಹುಚ್ಚಾಟ ಮೆರೆಯುತ್ತಿದೆ. ಭಾರತ ಸೇನೆ ಸುಮ್ಮನಿದ್ದರೂ ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ. ಭಾರೀ ಟೀಕೆ ಹಾಗೂ ಒತ್ತಡ ಎದುರಾದ ಬಳಿಕ ಪಾಕ್ ಸೇನೆ ಕೊಂಚ ಸೈಲೆಂಟ್ ಆಗಿದೆ. ಮೇ 18ರವರೆಗೆ ಕದನ ವಿರಾಮ ವಿಸ್ತರಿಸಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.
ಮೇ 10ರಂದು ಕದನ ವಿರಾಮಕ್ಕೆ ಭಾರತ ಹಾಗೂ ಪಾಕ್ ಒಪ್ಪಿಕೊಂಡಿತ್ತು. "ಕೂಡಲೇ ಜಾರಿಯಾಗುವಂತೆ ಭಾರತ ಹಾಗೂ ಪಾಕಿಸ್ತಾನ ಕದನ ವಿರಾಮ(Ceasefire) ಘೋಷಣೆಗೆ ಒಪ್ಪಿಕೊಂಡಿವೆ. ಅಮೆರಿಕಾ ಉಭಯ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸಿ, ಸತತ ಮಾತುಕತೆ ಬಳಿಕ ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಸಮ್ಮತಿಸಿವೆ" ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು.
ಇಂಗ್ಲೀಷ್ ಭಾಷೆಯ ಸೀಸ್‌ಫೈರ್ ಪದದ ಅರ್ಥ ಕದನ ವಿರಾಮ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟಿಸಿದ್ದ 'ಸಲಾರ್: ಪಾರ್ಟ್-1- ಸೀಸ್‌ಫೈರ್' ಹೆಸರಿಟ್ಟಿದ್ದರು. ಅಲ್ಲಿಯವರೆಗೂ ಕೆಲವರು ಈ ಪದವನ್ನು ಕೇಳಿರಲಿಲ್ಲ, ಬಳಸಿರಲಿಲ್ಲ. ಈ ಪದದ ಅರ್ಥ ಏನು ಎಂದು ತಡಕಾಡಿದ್ದರು. ಅಷ್ಟಕ್ಕೂ ಯಾಕೆ ಚಿತ್ರದ ಟೈಟಲ್‌ನಲ್ಲಿ ಕದನ ವಿರಾಮ, ಎನ್ನುವುದು ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಗಿತ್ತು. ಚಿತ್ರದ ಕಥೆ ಮುಂದುವರೆಯಲಿದ್ದು 'ಸಲಾರ್' ಪಾರ್ಟ್- 2 ಶೌರ್ಯಾಂಗ ಪರ್ವಂ' ಸಿನಿಮಾ ಕೂಡ ಬರ್ತಿದೆ.
ಭಾರತ- ಪಾಕ್ ಕದನ ವಿರಾಮದ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಸೀಸ್‌ಫೈರ್' ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಅದರ ಬೆನ್ನಲ್ಲೇ 'ಸಲಾರ್' ಟ್ವಿಟ್ಟರ್ ಖಾತೆಯಲ್ಲಿ ಚಿತ್ರದ ಟೈಟಲ್ ಕಾರ್ಡ್ ಸಣ್ಣ ಝಲಕ್ ಅನ್ನು ಹಂಚಿಕೊಳ್ಳಲಾಗಿತ್ತು. ಈ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಗಡಿಯಲ್ಲಿ ಯುದ್ಧದ ಉದ್ವಿಗ್ನೆ ತಲೆದೋರಿದೆ. ಇಂತಹ ಸಮಯದಲ್ಲಿ ಸಿನಿಮಾ ಪ್ರಚಾರ ಬೇಕಿತ್ತಾ? ಎಂದು ಟೀಕಿಸುತ್ತಿದ್ದಾರೆ. 'ಸಲಾರ್' ಸಿನಿಮಾ ಬಂದು ಹೋಗಿದ್ದರೂ ಆ ಚಿತ್ರದ ಹೆಸರಿನಲ್ಲಿ ಕ್ರಿಯೇಟ್ ಆಗಿರುವ ಸೋಶಿಯಲ್ ಮೀಡಿಯಾ ಅಕೌಂಟ್‌ಗಳು ಆಕ್ಟೀವ್ ಆಗಿದೆ. ಆಗಾಗ್ಗೆ ಏನಾದರೂ ಪೋಸ್ಟ್ ಮಾಡುತ್ತಾರೆ. ಅದೇ ರೀತಿ ಈಗ 'ಸಲಾರ್' ಟ್ವಿಟ್ಟರ್ ಖಾತೆಯಲ್ಲಿ ಈ ಪೋಸ್ಟ್ ಮಾಡಲಾಗಿದೆ. ಇನ್ನು 'ಸೀಸ್‌ಫೈರ್' ಎಂದಾಕ್ಷಣ ಕೆಲವರು 'ಸಲಾರ್' ಸಿನಿಮಾವನ್ನು ನೆನಪಿಸಿಕೊಂಡಿದ್ದು ಸುಳ್ಳಲ್ಲ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ 'ಸಲಾರ್' ಸಿನಿಮಾ ನಿರ್ಮಾಣ ಮಾಡಿತ್ತು. ಸಿನಿಮಾ 600 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಗಮನ ಸೆಳೆದಿತ್ತು. ಕನ್ನಡದ 'ಉಗ್ರಂ' ಚಿತ್ರದ ಕಥೆಯನ್ನೇ 2 ಭಾಗಗಳಾಗಿ ಬಹಳ ದೊಡ್ಡ ಮಟ್ಟದಲ್ಲಿ ನೀಲ್ ಕಟ್ಟಿಕೊಡುತ್ತದ್ದಾರೆ. 2ನೇ ಭಾಗ ನೋಡಲು ಅಭಿಮಾನಿಗಳು ಕಾಯುವಂತಾಗಿದೆ.


Click it and Unblock the Notifications











