ಭಾರತದಲ್ಲಿ 5.12ಕ್ಕೆ ರಿಲೀಸ್ ಆಗಲಿದೆ ಸಲಾರ್ ಟೀಸರ್; ಬೇರೆ ದೇಶಗಳಲ್ಲಿ ಯಾವ ಸಮಯಕ್ಕೆ ಬಿಡುಗಡೆ?
ಈ ವರ್ಷ ಬಿಡುಗಡೆಯಾಗಲಿರುವ ಚಿತ್ರಗಳ ಪೈಕಿ ಬಹು ನಿರೀಕ್ಷಿತ ಚಿತ್ರ ಎನಿಸಿಕೊಂಡಿರುವ ಚಿತ್ರಗಳಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಸಲಾರ್ ಸಹ ಒಂದು. ಹೌದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೃಹತ್ ಖ್ಯಾತಿಯನ್ನು ಗಳಿಸಿರುವ ನಾಯಕ ಹಾಗೂ ನಿರ್ದೇಶಕ ಜೋಡಿ ಒಟ್ಟಿಗೆ ಕೈ ಜೋಡಿಸಿರುವ ಕಾರಣ ಸಲಾರ್ ಇಷ್ಟು ದೊಡ್ಡ ಮಟ್ಟದ ಸದ್ದು ಮಾಡ್ತಿದೆ.
ಇನ್ನು ಈ ಚಿತ್ರಕ್ಕೆ ಕೆಜಿಎಫ್ ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದ್ದು, ಚಿತ್ರವನ್ನು ಇದೇ ಸೆಪ್ಟೆಂಬರ್ 28ರಂದು ತೆರೆಗೆ ತರುತ್ತಿದೆ. ಚಿತ್ರ ಬಿಡುಗಡೆಗೆ ಈಗಾಗಲೇ ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ದಿನಗಣನೆ ಎಣಿಸುತ್ತಿದ್ದು, ಹೀಗಿರುವಾಗಲೇ ಚಿತ್ರತಂಡ ಚಿತ್ರದ ಹೈಪ್ ಹೆಚ್ಚಿಸುವ ಕೆಲಸಕ್ಕೆ ಕೈಹಾಕಿದೆ.

ಹೌದು, ಸಲಾರ್ ಚಿತ್ರತಂಡ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಜುಲೈ 6ರಂದು ಟೀಸರ್ ಅನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿನ್ನೆ ( ಜುಲೈ 3 ) ಟ್ವೀಟ್ ಮಾಡುವ ಮೂಲಕ ತಿಳಿಸಿತ್ತು.
ಈ ಘೋಷಣೆ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದ ತುಂಬಾ ಕೇವಲ ಸಲಾರ್‌ನದ್ದೇ ಜಪ ಆರಂಭವಾಗಿಬಿಟ್ಟಿದೆ. ಎಲ್ಲಿ ನೋಡಿದರೂ ಸಲಾರ್ ಟೀಸರ್ ಹೇಗಿರಬಹುದು, ಟೀಸರ್ ಎಷ್ಟು ದಾಖಲೆಯನ್ನು ಮಾಡಬಹುದು ಎಂಬ ಚರ್ಚೆಗಳು ಶುರುವಾಗಿವೆ. ಇದರ ಜತೆಗೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಲು ಆಯ್ದುಕೊಂಡಿರುವ ಸಮಯದ ಕುರಿತಾಗಿಯೂ ಸಹ ದೊಡ್ಡ ಮಟ್ಟದ ಚರ್ಚೆಗಳು ಆರಂಭಗೊಂಡಿವೆ.
ಹೌದು, ಜುಲೈ 6ರಂದು ಬೆಳಗ್ಗೆ 5.12ಕ್ಕೆ ಸಲಾರ್ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಲಿದ್ದೇವೆ ಎಂದು ಹೊಂಬಾಳೆ ಫಿಲ್ಮ್ಸ್ ಪ್ರಕಟಿಸಿದ್ದು, ಇಷ್ಟು ಬೇಗ ಯಾಕೆ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ, ಎಲ್ಲರೂ ನಿದ್ರೆ ಮಾಡುವ ಸಮಯದಲ್ಲಿ ಟೀಸರ್ ಬಿಡುಗಡೆ ಮಾಡುವ ಅಗತ್ಯವೇನಿತ್ತು ಎಂಬ ಪ್ರಶ್ನೆಗಳು ಎದ್ದಿವೆ.
ಇನ್ನೂ ಕೆಲವರು ಇದರ ಹಿಂದಿನ ಕಾರಣಗಳನ್ನು ಹುಡುಕಲು ಯತ್ನಿಸಿದ್ದು, ನೆಟ್ಟಿಗನೋರ್ವ ಕೆಜಿಎಫ್ ಚಾಪ್ಟರ್ 2 ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಫೋಟೊವೊಂದನ್ನು ಟ್ವೀಟ್ ಮಾಡಿ ಈ ಕಾರಣಕ್ಕೆ ಸಲಾರ್ ಚಿತ್ರವನ್ನು 5.12ಕ್ಕೆ ಬಿಡುಗಡೆ ಮಾಡುತ್ತಿರಬಹುದು ಎಂದು ಊಹಿಸಿದ್ದಾನೆ.
ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರಾಕಿ ಭಾಯ್ ಸಮುದ್ರದಲ್ಲಿ ಮುಳುಗುವ ಮುನ್ನ ಹಡಗಿನಲ್ಲಿ ನಿಂತಿರುವ ದೃಶ್ಯವಿದೆ. ಈ ಸಂದರ್ಭದಲ್ಲಿ ಅಲ್ಲಿನ ಗಡಿಯಾರವೊಂದರಲ್ಲಿ ಸಮಯ 5.05 ಆಗಿದೆ. ಹೀಗೆ ರಾಕಿ ಈ ಸಮಯ ಕಳೆದ ಕೆಲ ಹೊತ್ತಿನಲ್ಲಿ ಅಂದರೆ 5.12ಕ್ಕೆ ಸಮುದ್ರಕ್ಕೆ ಬಿದ್ದಿರಬಹುದು, ಆ ಕಾರಣಕ್ಕಾಗಿಯೇ ಪ್ರಶಾಂತ್ ನೀಲ್ ಟೀಸರ್ ಅನ್ನು 5.12ಕ್ಕೆ ಬಿಡುಗಡೆ ಮಾಡಲು ಮುಂದಾಗಿದ್ದಾರೆ, ಸಲಾರ್ ಚಿತ್ರ ಕೆಜಿಎಫ್ ಫ್ರಾಂಚೈಸ್‌ನ ಭಾಗ, ಇದು ಪ್ರಶಾಂತ್ ನೀಲ್ ಸಿನಿಮ್ಯಾಟಿಕ್ ಯೂನಿವರ್ಸ್ ಎಂದು ಬರೆದುಕೊಂಡಿದ್ದಾರೆ.
ಇನ್ನು ಇಷ್ಟೆಲ್ಲಾ ಚರ್ಚೆಗಳನ್ನು ಈ ಸಮಯ ಹುಟ್ಟುಹಾಕಿದ್ದು, ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಮಂಗಳಕರ ಸಮಯ ಎಂಬ ಕಾರಣಕ್ಕೆ ಈ ಸಮಯಕ್ಕೆ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ ಎಂದಿದ್ದಾರೆ. ಭಾರತದಲ್ಲಿ 5.12ಕ್ಕೆ ಬಿಡುಗಡೆಯಾಗಲಿರುವ ಈ ಟೀಸರ್ ಬೇರೆ ದೇಶಗಳಲ್ಲಿ ಯಾವ ಸಮಯಕ್ಕೆ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಈ ಕೆಳಕಂತಿದೆ..
ಯುಎಇ - 3.42 AM (GST)
ಯುಎಸ್ ( ಜುಲೈ 5 ) - 7.42 PM ( EST ), 4.42 PM (PST) & 6.42 PM (CST)
ಯುರೋಪ್ - 1.42 AM ( CET )
ಯುನೈಟೆಡ್ ಕಿಂಗ್‌ಡಮ್ - 12.42 AM (GMT )
ರಷ್ಯಾ - 3.42 AM ( MSD )
ಆಸ್ಟ್ರೇಲಿಯಾ - 9.42 AM ( AEST )
ನ್ಯೂಜಿಲೆಂಡ್ - 11.42 AM ( NZST )
ಆಫ್ರಿಕಾ - 2.42 AM ( SAST )


Click it and Unblock the Notifications











