ತೆಲುಗು ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟನೆ: ಗುಟ್ಟು ರಟ್ಟು ಮಾಡಿದ ತಮನ್
ಬಾಲಿವುಡ್‌ನ ಹಲವು ಮಂದಿ ಸ್ಟಾರ್ ನಟರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಸಲ್ಮಾನ್ ಹಾಗೂ ಅಮೀರ್ ಖಾನ್ ಅವರುಗಳು ದಕ್ಷಿಣ ಭಾರತದ ಸಿನಿಮಾದಲ್ಲಿ ಈವರೆಗೆ ನಟಿಸಿಲ್ಲ. ಆದರೆ ಇದೀಗ ಸಲ್ಮಾನ್ ಖಾನ್ ದಕ್ಷಿಣ ಭಾರತದ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ.
ನಟ ಚಿರಂಜೀವಿ ಇದೀಗ 'ಆಚಾರ್ಯ' ಸಿನಿಮಾದ ಚಿತ್ರೀಕರಣ ಮುಗಿಸಿದ್ದು ತಮ್ಮ ಮುಂದಿನ ಸಿನಿಮಾ 'ಗಾಡ್ ಫಾದರ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರವೊಂದಿದ್ದು ಆ ಪಾತ್ರದಲ್ಲಿ ನಟಿಸಲು ಸಲ್ಮಾನ್ ಖಾನ್ ಅನ್ನು ಸಂಪರ್ಕಿಸಲಾಗಿದೆ. ಸಲ್ಮಾನ್ ಖಾನ್ ಸಹ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ.
'ಗಾಡ್ ಫಾದರ್' ಸಿನಿಮಾವು ಮಲಯಾಳಂನ 'ಲೂಸಿಫರ್' ಸಿನಿಮಾದ ರಿಮೇಕ್ ಆಗಿದ್ದು, ಮಲಯಾಳಂನಲ್ಲಿ ಮೋಹನ್‌ಲಾಲ್ ನಟಿಸಿದ್ದ ಪಾತ್ರದಲ್ಲಿ ತೆಲುಗಿನಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸುವುದು ಪಕ್ಕಾ ಆಗಿದೆ.

ಸುದ್ದಿ ಹೊರಹಾಕಿದ ಎಸ್‌ಎಸ್ ತಮನ್
'ಗಾಡ್ ಫಾದರ್' ಸಿನಿಮಾಕ್ಕೆ ಸಂಗೀತ ನೀಡುತ್ತಿರುವ ಎಸ್‌ಎಸ್ ತಮನ್ ಸಂದರ್ಶನವೊಂದರಲ್ಲಿ ಸಿನಿಮಾದ ಸಂಗೀತದ ಬಗ್ಗೆ ಮಾತನಾಡುತ್ತಾ, ''ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ನಟಿಸುತ್ತಿರುವ ಒಟ್ಟಿಗೆ ಡ್ಯಾನ್ಸ್ ಮಾಡುತ್ತಿರುವ ಹಾಡಿಗೆ ಹೆಚ್ಚಿನ ಕ್ರೇಜ್ ಇರುತ್ತದೆ ಹಾಗಾಗಿ ವಿಶೇಷ ಮುತುವರ್ಜಿ ವಹಿಸಿ ಸಂಗೀತ ನೀಡುತ್ತಿದ್ದೇನೆ'' ಎಂದಿದ್ದಾರೆ. ಸಲ್ಮಾನ್ 'ಗಾಡ್ ಫಾದರ್' ಸಿನಿಮಾದಲ್ಲಿ ನಟಿಸುತ್ತಿರುವ ವಿಷಯವನ್ನು ಚಿತ್ರತಂಡವು ಅಧಿಕೃತವಾಗಿ ಘೋಷಿಸುವ ಮುನ್ನವೇ ತಮನ್ ಸುದ್ದಿ ಲೀಕ್ ಮಾಡಿದ್ದಾರೆ.

ಪವರ್ ಫುಲ್ ಆಗಿರಲಿದೆ ಸಲ್ಮಾನ್ ಖಾನ್ ಪಾತ್ರ
'ಗಾಡ್ ಫಾದರ್' ಸಿನಿಮಾದಲ್ಲಿ ಸಲ್ಮಾನ್ ಖಾನ್‌ರದ್ದು ಬಹಳ ಪವರ್‌ಫುಲ್ ಪಾತ್ರವಾಗಿರಲಿದೆ. ಸಿನಿಮಾದಲ್ಲಿ ಕೆಲ ಕಾಲ ಮಾತ್ರವೇ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ ಆದರೆ ಅವರ ಪಾತ್ರದ ಉಲ್ಲೇಖ ಸಿನಿಮಾದ ಆರಂಭದಿಂದಲೂ ಇರುತ್ತದೆ ಮತ್ತು ಚಿರಂಜೀವಿ ಅವರ ಪಾತ್ರಕ್ಕಿಂತಲೂ ಅದ್ಧೂರಿ ಎಂಟ್ರಿ ಮತ್ತು ಫೈಟ್ ದೃಶ್ಯಗಳು ಸಲ್ಮಾನ್ ಖಾನ್ ಪಾತ್ರಕ್ಕೆ ಇರಲಿವೆ. ಮಲಯಾಳಂನಲ್ಲಿ ಮೋಹನ್‌ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಪಾತ್ರಕ್ಕೆ ಯಾವುದೇ ಪ್ರತ್ಯೇಕ ಹಾಡು ಇರಲಿಲ್ಲ ಆದರೆ ತೆಲುಗಿನಲ್ಲಿ ಚಿರಂಜೀವಿ ಹಾಗೂ ಸಲ್ಮಾನ್ ಖಾನ್‌ಗೆ ಹಾಡು ಇರಲಿದೆ. ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಮಾಡಲಿದ್ದಾರೆ.

ಚಿರಂಜೀವಿ-ಸಲ್ಮಾನ್ ಖಾನ್ ಒಳ್ಳೆಯ ಸ್ನೇಹಿತರು
ಸಲ್ಮಾನ್ ಖಾನ್ ದಶಕಗಳಿಂದಲೂ ಚಿರಂಜೀವಿ ಅವರ ಒಳ್ಳೆಯ ಸ್ನೇಹಿತ. ಚಿರಂಜೀವಿ ಅವರ ಕುಟುಂಬದ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಚಿರಂಜೀವಿ ಭಾಗವಹಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಚಿರಂಜೀವಿ ಮಾತ್ರವೇ ಅಲ್ಲದೆ ಜೂ ಎನ್‌ಟಿಆರ್ ಜೊತೆಗೂ ಸಲ್ಮಾನ್ ಖಾನ್‌ಗೆ ಒಳ್ಳೆಯ ಗೆಳೆತನವಿದೆ. ತೆಲುಗು ಚಿತ್ರರಂಗದಿಂದ ಬಂದ ಹಲವು ಸಿನಿಮಾಗಳನ್ನು ಸಲ್ಮಾನ್ ಖಾನ್ ಹಿಂದಿಗೆ ರೀಮೇಕ್ ಮಾಡಿ ನಟಿಸಿ ಗೆದ್ದಿದ್ದಾರೆ. ಹಾಗಾಗಿ ತೆಲುಗು ಚಿತ್ರರಂಗದ ಮೇಲೆ ಸಲ್ಮಾನ್‌ಗೆ ಪ್ರತ್ಯೇಕ ಒಲವಿದೆ. ಚಿರಂಜೀವಿ ನಟಿಸಿರುವ 'ಸ್ಟಾಲಿನ್' ಸಿನಿಮಾದ ಹಿಂದಿ ರೀಮೇಕ್ 'ಜೈ ಹೋ'ನಲ್ಲಿ ಸಲ್ಮಾನ್ ಖಾನ್ ನಟಿಸಿದ್ದರು.

ತಮಿಳು ಸಿನಿಮಾದಲ್ಲೂ ಸಲ್ಮಾನ್ ನಟನೆ
ಸಲ್ಮಾನ್ ಖಾನ್ ತೆಲುಗು ಮಾತ್ರವೇ ಅಲ್ಲದೆ ತಮಿಳಿನ ಸಿನಿಮಾದಲ್ಲಿಯೂ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್ ನಟಿಸುತ್ತಿರುವ 'ಬೀಸ್ಟ್' ಸಿನಿಮಾದಲ್ಲಿ ಸಲ್ಮಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ಈಗಾಗಲೇ ಅಕ್ಷಯ್ ಕುಮಾರ್ ಜೊತೆ ಸಿನಿಮಾವೊಂದರಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದರು. ಹಾಡೊಂದರಲ್ಲಿ ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕಿದ್ದರು.

'ಆಚಾರ್ಯ' ಸಿನಿಮಾ ಬಿಡುಗಡೆಗೆ ಸಿದ್ಧ
ಇನ್ನು ಚಿರಂಜೀವಿ ನಟಿಸಿರುವ 'ಆಚಾರ್ಯ' ಸಿನಿಮಾ ಜನವರಿ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ಚಿರು ಪುತ್ರ ರಾಮ್ ಚರಣ್ ತೇಜ ಸಹ ನಟಿಸಿದ್ದಾರೆ. ಚಿರಂಜೀವಿ ಈಗ ನಟಿಸುತ್ತಿರುವ 'ಗಾಡ್ ಫಾದರ್' ಸಿನಿಮಾವನ್ನು ತಮಿಳಿನ ಮೋಹನ್ ರಾಜ್ ನಿರ್ದೇಶನ ಮಾಡಲಿದ್ದಾರೆ. ಚಿರಂಜೀವಿ ಜೊತೆಗೆ ಸತ್ಯದೇವ್ ಕಾಂಚರಾಣ ನಟಿಸಲಿದ್ದಾರೆ. ಚಿರಂಜೀವಿ ಸಹೋದರಿ ಪಾತ್ರಕ್ಕೆ ನಟಿ ಜೆನಿಲಿಯಾರನ್ನು ಕೇಳಲಾಗಿದೆ ಆದರೆ ಅವರು ಒಲ್ಲೆ ಎಂದಿದ್ದಾರೆ. ಹಾಗಾಗಿ ಮತ್ತೊಬ್ಬ ಜನಪ್ರಿಯ ನಟಿಗಾಗಿ ಚಿತ್ರತಂಡ ಹುಡುಕಾಟ ನಡೆಸಿದೆ.


Click it and Unblock the Notifications











