Salman Khan Godfather Movie: ದಕ್ಷಿಣದ ಸಿನಿಮಾರಂಗಕ್ಕೆ ಕಾಲಿಟ್ಟ ಸಲ್ಮಾನ್: ಶೂಟಿಂಗ್ ಶುರು
ಹಲವು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಾಲಿವುಡ್‌ನ ಸ್ಟಾರ್ ನಟ ಸಲ್ಮಾನ್ ಖಾನ್, ಇದೇ ಮೊದಲ ಬಾರಿಗೆ ಬಾಲಿವುಡ್ ಬಿಟ್ಟು ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಲು ಆಗಮಿಸಿದ್ದಾರೆ.
ಮರಾಠಿಯ ಒಂದು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದು ಬಿಟ್ಟರೆ ಹಿಂದಿಯ ಹೊರತಾಗಿ ಬೇರೆ ಭಾಷೆಗಳಲ್ಲಿ ನಟಿಸಿಲ್ಲ ಸಲ್ಮಾನ್, ಆದರೆ ಈಗ ನಟ ಮೆಗಾಸ್ಟಾರ್ ಚಿರಂಜೀವಿಯ ಒತ್ತಾಯಕ್ಕೆ ಮಣಿದು ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ.
ನಟ ಚಿರಂಜೀವಿ ಜೊತೆ ಸಿನಿಮಾದಲ್ಲಿ ನಟಿಸಲೆಂದು ಇಂದಷ್ಟೆ ಹೈದರಾಬಾದ್‌ಗೆ ಸಲ್ಮಾನ್ ಖಾನ್ ಆಗಮಿಸಿದ್ದು, ತಮ್ಮ ಚಿತ್ರರಂಗಕ್ಕೆ ಮೊದಲ ಬಾರಿಗೆ ಆಗಮಿಸಿದ ಸಲ್ಮಾನ್ ಖಾನ್ ಅನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ ಚಿರಂಜೀವಿ.
ಸಲ್ಮಾನ್ ಖಾನ್‌ಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಚಿರಂಜೀವಿ, ಇಬ್ಬರು ಒಟ್ಟಿಗಿರುವ ಚಿತ್ರವನ್ನು ಟ್ವೀಟ್ ಮಾಡಿದ್ದು, ''ಗಾಡ್‌ಫಾದರ್'ಗೆ ಸ್ವಾಗತ ಭಾಯ್' ಎಂದಿದ್ದಾರೆ. ಮುಂದುವರೆದು, ''ನಿಮ್ಮ ಎಂಟ್ರಿ ಎಲ್ಲರಿಗೂ ಶಕ್ತಿ ತುಂಬಿದೆ. ನಿಮ್ಮ ಆಗಮನದಿಂದ ಉತ್ಸಾಹ ನೂರ್ಮಡಿ ಆಗಿದೆ. ನಮ್ಮ ಸಿನಿಮಾದಲ್ಲಿ ನಿಮ್ಮ ಹಾಜರಿ ಪ್ರೇಕ್ಷಕರಿಗೆ ಬೇರೆ ಲೆವೆಲ್ ಕಿಕ್ ನೀಡುವುದರಲ್ಲಿ ಅನುಮಾನವೆ ಇಲ್ಲ'' ಎಂದಿದ್ದಾರೆ.

'ಲುಸಿಫರ್' ಸಿನಿಮಾದ ರೀಮೇಕ್ 'ಗಾಡ್ ಫಾದರ್'
2019ರಲ್ಲಿ ಬಿಡುಗಡೆ ಆಗಿದ್ದ ಮಲಯಾಳಂ ಸಿನಿಮಾ 'ಲುಸಿಫರ್' ರೀಮೇಕ್‌ನಲ್ಲಿ ಚಿರಂಜೀವಿ ನಟಿಸುತ್ತಿದ್ದು, ಸಿನಿಮಾಕ್ಕೆ 'ಗಾಡ್ ಫಾದರ್' ಎಂದು ಹೆಸರಿಡಲಾಗಿದೆ. ಮೂಲ ಸಿನಿಮಾದಲ್ಲಿ ಮೋಹನ್‌ಲಾಲ್ ನಟಿಸಿದ್ದ ಪಾತ್ರದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಅದೇ ಸಿನಿಮಾದಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ. ಮೂಲ ಸಿನಿಮಾದಲ್ಲಿದ್ದ ಪೃಥ್ವಿರಾಜ್ ಪಾತ್ರವನ್ನು ಇನ್ನಷ್ಟು ಬದಲಾಯಿಸಿ ಮಾಸ್ ಎಲಿಮೆಂಟ್‌ಗಳನ್ನು ಸಲ್ಮಾನ್‌ಗಾಗಿ ಸೇರಿಸಲಾಗಿದೆ.

ಒಟ್ಟಿಗೆ ಕುಣಿಯಲಿದ್ದಾರೆ ಸಲ್ಮಾನ್-ಚಿರು
ಮಲಯಾಳಂನ 'ಲುಸಿಫರ್' ಸಿನಿಮಾದಲ್ಲಿ ಮೋಹನ್‌ಲಾಲ್ ಹಾಗೂ ಪೃಥ್ವಿರಾಜ್ ನಡುವೆ ಹಾಡು-ಕುಣಿತ ಇರಲಿಲ್ಲ. ಆದರೆ ತೆಲುಗಿನ 'ಗಾಡ್ ಫಾದರ್' ಸಿನಿಮಾದಲ್ಲಿ ಸಲ್ಮಾನ್ ಖಾನ್ ಹಾಗೂ ಚಿರಂಜೀವಿ ಜೊತೆ ಹಾಡೊಂದು ಸಹ ಇರಲಿದೆ. ಜೊತೆಗೆ ಇಬ್ಬರು ಒಟ್ಟಿಗೆ ವಿಲನ್‌ಗಳನ್ನು ಚಚ್ಚಿ ಚಿಂದಿ ಉಡಾಯಿಸುವ ದೃಶ್ಯಗಳು ಸಹ ಇರಲಿದೆ. ಈ ದೃಶ್ಯಗಳು ಅಭಿಮಾನಿಗಳಿಗೆ ಸಖತ್ 'ಕಿಕ್' ನೀಡಲಿವೆ ಎನ್ನಲಾಗುತ್ತಿದೆ.

ಹಲವು ಬದಲಾವಣೆಗಳೊಂದಿಗೆ ರೀಮೇಕ್
'ಗಾಡ್ ಫಾದರ್' ಸಿನಿಮಾವು ಕುಟುಂಬ ಹಾಗೂ ರಾಜಕಾರಣದ ಕತೆಯನ್ನು ಹೊಂದಿದೆ. ಮಲಯಾಳಂನಲ್ಲಿ ಬಿಡುಗಡೆ ಆಗಿದ್ದ 'ಲುಸಿಫರ್' ಸಿನಿಮಾ ದೊಡ್ಡ ಹಿಟ್ ಆಗಿತ್ತು. ಮೂಲ ಸಿನಿಮಾದಲ್ಲಿ ನಾಯಕಿಯೇ ಇರಲಿಲ್ಲ. ಆದರೆ ತೆಲುಗು ಸಿನಿಮಾದಲ್ಲಿ ನಾಯಕಿ ಇರಲಿದ್ದಾಳೆ. ತೆಲುಗು ಪ್ರೇಕ್ಷಕರು ಹಾಗೂ ಚಿರಂಜೀವಿಯ ಇಮೇಜು ಗಮನದಲ್ಲಿಟ್ಟುಕೊಂಡು ಮೂಲ ಕತೆಗೆ ಸಾಕಷ್ಟು ಬದಲಾವಣೆಗಳನ್ನು ತಂದು ತೆಲುಗಿಗೆ ತರಲಾಗುತ್ತಿದೆ.

ನಯನತಾರಾ ನಾಯಕಿ
'ಗಾಡ್ ಫಾದರ್' ಸಿನಿಮಾದಲ್ಲಿ ಚಿರಂಜೀವಿ, ಸಲ್ಮಾನ್ ಖಾನ್ ಜೊತೆಗೆ ನಾಯಕಿಯಾಗಿ ನಯನತಾರಾ ನಟಿಸುತ್ತಿದ್ದಾರೆ. ಸತ್ಯದೇವ ಕಂಚರಾನಾ, ಬಿಗ್‌ಬಾಸ್ ಖ್ಯಾತಿಯ ಗಂಗವ್ವ, ಚಿರಂಜೀವಿ ಸಹೋದರಿ ಪಾತ್ರದಲ್ಲಿ ಅನುಸೂಯ ಭಾರಧ್ವಜ ಇನ್ನೂ ಕೆಲವರು ನಟಿಸುತ್ತಿದ್ದಾರೆ. ತೆಲುಗು ಚಿತ್ರರಂಗವು ಹಲವು ಮಲಯಾಳಂ ಸಿನಿಮಾಗಳನ್ನು ಇತ್ತೀಚೆಗೆ ರೀಮೇಕ್ ಮಾಡುತ್ತಿದೆ. ಪೃಥ್ವಿರಾಜ್ ಸುಕುಮಾರ್-ಬಿಜು ಮೆನನ್ ನಟಿಸಿದ್ದ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾವನ್ನು ಪವನ್ ಕಲ್ಯಾಣ್ 'ಭೀಮ್ಲಾ ನಾಯಕ್' ಹೆಸರಲ್ಲಿ ರೀಮೇಕ್ ಮಾಡಿದ್ದರು. ಇನ್ನೂ ಹಲವು ಮಲಯಾಳಂ ಸಿನಿಮಾಗಳು ತೆಲುಗಿಗೆ ರೀಮೇಕ್ ಆಗುತ್ತಿವೆ.


Click it and Unblock the Notifications











