ದಾಂಪತ್ಯ ಜೀವನ ಅಂತ್ಯಗೊಳಿಸಿದ ನಾಗ ಚೈತನ್ಯ- ಸಮಂತಾ
ತೆಲುಗಿನ ಸ್ಟಾರ್ ದಂಪತಿ ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. ನಾಲ್ಕು ವರ್ಷದ ತಮ್ಮ ದಾಂಪತ್ಯಕ್ಕೆ ಸಮಂತಾ ಮತ್ತು ನಾಗ ಚೈತನ್ಯ ಅಂತ್ಯ ಹಾಡಿದ್ದಾರೆ. ಇವರಿಬ್ಬರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ, ಇಬ್ಬರು ದೂರ ದೂರ ಆಗುತ್ತಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದಲೂ ಕೇಳಿಬರುತ್ತಲೇ ಇತ್ತು. ಆದರೆ ಕುಟುಂಬದ ಯಾರೊಬ್ಬರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಇಂದು (ಅಕ್ಟೋಬರ್ 2) ನಾಗ ಚೈತನ್ಯ ಮತ್ತು ಸಮಂತಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ವಿಚ್ಛೇದನದ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ.
ಇಬ್ಬರೂ ಒಂದೇ ಪೋಸ್ಟ್ ಶೇರ್ ಮಾಡುವ ಮಾಡುವ ಮೂಲಕ ವಿಚ್ಛೇದನ ಸುದ್ದಿ ಅಧಿಕೃತ ಪಡಿಸಿದ್ದಾರೆ. "ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿ ಅಂತ ಅಭಿಮಾನಿಗಳು, ಮಾಧ್ಯಮದವರು ಮತ್ತು ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮ್ಮ ಖಾಸಗಿತನಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇವೆ" ಎಂದು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ ಸಮಂತಾ ಮತ್ತು ನಾಗ ಚೈತನ್ಯ ಇಬ್ಬರು 2017ರ ಅಕ್ಟೋಬರ್ 6ರಂದು ಹಿಂದೂ ಸಂಪ್ರದಾಯದ ಪ್ರಕಾರ ಅದ್ದೂರಿಯಾಗಿ ಮದುವೆಯಾಗಿದ್ದರು. ಅಕ್ಟೋಬರ್ 7ರಂದು ಕ್ರೈಸ್ತ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳನ್ನು ನೆರವೇರಿಸಲಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಅಷ್ಟರಲ್ಲಾಗಲೇ ಈ ನಿರ್ಧಾರ ತೆಗೆದುಕೊಂಡಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಅನೇಕ ದಿನಗಳಿಂದ ಇಬ್ಬರ ವಿಚ್ಛೇದನ ಸುದ್ದಿ ವೈರಲ್ ಆಗಿದ್ದರು ಸಹ ಅಭಿಮಾನಿಗಳು ಈ ಸುದ್ದಿ ಸುಳ್ಳಾಗಲಿ ಎಂದು ಕೇಳಿಕೊಂಡಿದ್ದರು. ಆದರೆ ವದಂತಿ ನಿಜವಾಗಿದೆ. ಇದೇ ಸಮಯದಲ್ಲಿ ಸಮಂತಾ ಜೀವನಾಂಶದ ಸುದ್ದಿಯು ವೈರಲ್ ಆಗಿದೆ. 50 ಕೋಟಿ ರೂ. ಜೀವನಾಂಶ ಕೇಳಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.


Click it and Unblock the Notifications











