"ಭೂತ ಶುದ್ಧಿ ವಿವಾಹ"ವಾದ ಸಮಂತಾ ಹಾಗೂ ರಾಜ್ ನಿಡುಮೋರು; ಏನಿದು ಪದ್ಧತಿ?
ತೆಲುಗು ನಟಿ ಸಮಂತಾ ಹಾಗೂ ನಿರ್ದೇಶಕ ರಾಜ್ ನಿಡುಮೊರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೋಯಂಬತ್ತೂರಿನ ಇಶಾ ಫೌಂಡೇಷನ್‌ನಲ್ಲಿರುವ ಲಿಂಗ ಭೈರವಿ ದೇವಿ ಆಲಯದಲ್ಲಿ ಇಬ್ಬರ ವಿವಾಹ ಸರಳವಾಗಿ ನಡೆದಿದೆ. ಈ ಬಗ್ಗೆ ಸ್ವತಃ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಸಮೇತ ಮಾಹಿತಿ ನೀಡಿದ್ದಾರೆ. ಕನ್ನಡ ನಟಿ ರಮ್ಯಾ ಸೇರಿದಂತೆ ಸೆಲೆಬ್ರೆಟಿಗಳು, ಅಭಿಮಾನಿಗಳು ನವಜೋಡಿಗೆ ಅಭಿನಂದನೆ ತಿಳಿಸಿದ್ದಾರೆ.
ಅಂದಹಾಗೆ "ಭೂತ ಶುದ್ಧಿ ವಿವಾಹ" ಪದ್ಧತಿಯಲ್ಲಿ ಇಬ್ಬರೂ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಏನಿದು ಪದ್ಧತಿ ಎಂದು ಚರ್ಚೆ ಶುರುವಾಗಿದೆ. ಈ ಬಗ್ಗೆ ಸದ್ಗುರು ಕೂಡ ಈ ಹಿಂದೆ ಮಾತನಾಡಿದ್ದಾರೆ. ಆ ವೀಡಿಯೋ ಕೂಡ ದಿಢೀರ್ ವೈರಲ್ ಆಗ್ತಿದೆ. ಈ ಹಿಂದೆ ಕೆಲವರು ಇದೇ ಪದ್ಧತಿಯಲ್ಲಿ ಮದುವೆಯಾಗಿರುವ ಉದಾಹರಣೆಗಳಿವೆ.

ಪ್ರಪಂಚದಲ್ಲಿ ನಾನಾ ರೀತಿಯ ವಿವಾಹ ಪದ್ಧತಿಗಳಿವೆ. ಆಯಾ ಧರ್ಮ, ಜಾತಿಗೆ ಸಂಬಂಧಿಸಿದಂತೆ ಮದುವೆ ಶಾಸ್ತ್ರಗಳು ಆಚರಣೆಯಲ್ಲಿದೆ. ಕಾಲದಿಂದ ಕಾಲಕ್ಕೆ ಇದರಲ್ಲಿ ಸಾಕಷ್ಟು ಮಾರ್ಪಾಡುಗಳು ಕಂಡುಬಂದಿದೆ. ಗಾಂಧರ್ವ ವಿವಾಹದಿಂದ ಹಿಡಿದು ಉಂಗುರ ಬದಲಿಸಿಕೊಳ್ಳುವುದು, ಮಾಂಗಲ್ಯಧಾರಣೆ- ಕನ್ಯಾದಾನ ಹೀಗೆ ನಾನಾ ರೀತಿಯಲ್ಲಿ ಗಂಡು-ಹೆಣ್ಣು ವಿವಾಹ ಬಂಧನಕ್ಕೆ ಒಳಗಾಗುತ್ತಾರೆ. ಮದುವೆ ಆಗದೇ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವವರು ಇದ್ದಾರೆ.
ಯೋಗ ವ್ಯವಸ್ಥೆಯಲ್ಲಿ "ಭೂತ ಶುದ್ಧಿ ವಿವಾಹ" ಪದ್ಧತಿ ನಡೆದು ಬಂದಿದೆ. ಏನಿದು ಆಚರಣೆ ಎನ್ನುವುದನ್ನು ನೋಡುವುದಾದರೆ ಇದೊಂದು ಪವಿತ್ರ ವಿವಾಹದ ಆಚರಣೆ. ದಂಪತಿಗಳು ಮದುವೆಯಾಗುವ ಮೊದಲು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುವ ಒಂದು ಯೋಗಿಕ ಆಚರಣೆಯನ್ನು ಮಾಡಬೇಕು. ಪಂಚಭೂತ ಅಂದರೆ ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶ ಶುದ್ಧೀಕರಣವನ್ನು ಒಳಗೊಂಡಿರುವಂಥದ್ದು. ಇಬ್ಬರ ಭಾವನೆಗಳು, ಆಲೋಚನೆಗಳು ಮತ್ತು ದೈಹಿಕ ಗಡಿಗಳನ್ನು ಮೀರಿ ಆಳವಾದ ಸಂಪರ್ಕವನ್ನು ಸ್ಥಾಪಿಸುವ ಗುರಿಯನ್ನು ಈ ವಿವಾಹ ಪದ್ಧತಿ ಹೊಂದಿರುತ್ತದೆ.
ಮದುವೆಯಾಗುವ ಗಂಡು ಹಾಗೂ ಹೆಣ್ಣು ತಮ್ಮನ್ನು ಆಧ್ಯಾತ್ಮಿಕ ಮತ್ತು ಭೌತಿಕ ಮಟ್ಟದಲ್ಲಿ ಸಿದ್ಧಪಡಿಸಿಕೊಳ್ಳಬೇಕು. ಧ್ಯಾನ, ಮಂತ್ರ ಪಠಣ, ಹೋಮದ ತಂತ್ರಗಳನ್ನು ಬಳಸಲಾಗುತ್ತದೆ. ಈ ವಿವಾಹ ಪದ್ಧತಿ ದಂಪತಿ ನಡುವೆ ಭಾವನಾತ್ಮಕ ಮತ್ತು ಸಾಮಾಜಿಕ ಸಂಪರ್ಕ ಮಾತ್ರವಲ್ಲದೇ, ಧಾತುರೂಪದ ಮಟ್ಟದಲ್ಲಿಯೂ ಆಳವಾದ ಬಂಧವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎನ್ನುವ ನಂಬಿಕೆಯಿದೆ. ಸಾಮಾನ್ಯವಾಗಿ ಲಿಂಗ ಭೈರವಿ ಆಲಯಗಳಲ್ಲಿ ಈ ವಿವಾಹ ಪದ್ಧತಿ ನಡೆಸಲಾಗುತ್ತದೆ. ಇದು ದೈವಿಕ ಸ್ತ್ರೀಲಿಂಗದ ರೂಪವೆಂದು ಭಾವಿಸಲಾಗುತ್ತದೆ.
ಸಾಮಾನ್ಯವಾಗಿ ತಾರೆಯರು ಅದ್ಧೂರಿಯಾಗಿ ಮದುವೆ ಆಗುತ್ತಾರೆ. ಇತ್ತೀಚೆಗೆ ಡೆಸ್ಟಿನೇಷನ್ ವೆಡ್ಡಿಂಗ್ ಭರಾಟೆ ನಡೆಯುತ್ತಿದೆ. ಸಮಂತಾ ಈ ಹಿಂದೆ ಗೋವಾದಲ್ಲಿ ಚೈತು ಜೊತೆ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ದರು. 4 ವರ್ಷಗಳ ಬಳಿಕ ಇಬ್ಬರೂ ದೂರಾಗಿದ್ದರು. ಈಗಾಗಲೇ ನಟಿ ಶೋಭಿತಾ ದುಲಿಪಾಲ ಜೊತೆ ಚೈತು 2ನೇ ಮದುವೆ ಆಗಿದ್ದಾರೆ. ನಾಗಾರ್ಜುನಾ ತಮ್ಮದೇ ಅನ್ನಪೂರ್ಣ ಸ್ಟುಡಿಯೋದಲ್ಲಿ ಮಗನ 2ನೇ ಮದುವೆ ನೆರವೇರಿಸಿದ್ದರು. ಆದರೆ ಸಮಂತಾ 2ನೇ ಮದುವೆಗೆ ಇಶಾ ಫೌಂಡೇಷನ್ ಆಯ್ಕೆ ಮಾಡಿಕೊಂಡಿದ್ದಾರೆ.
'ಫ್ಯಾಮಿಲಿಮ್ಯಾನ್' ವೆಬ್ ಸೀರಿಸ್ ನಿರ್ದೇಶಕರಲ್ಲಿ ಒಬ್ಬರು ರಾಜ್ ನಿಡುಮೊರು. ಆ ಸರಣಿಯಲ್ಲಿ ಸಮಂತಾ ಸಹ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಪರಿಚಯವಾಗಿತ್ತು. ಸಮಂತಾ ಡಿವೋರ್ಸ್ ಪಡೆದ ಬಳಿಕ ರಾಜ್ ಆಕೆಗೆ ಹತ್ತಿರವಾಗಿದ್ದರು. ಈಗಾಗಲೇ ರಾಜ್ ಕೂಡ ಮದುವೆಯಾಗಿ ಡಿವೋರ್ಸ್ ಪಡೆದಿದ್ದಾರೆ. ಹಾಗಾಗಿ ಇಬ್ಬರಿಗೂ ಇದು 2ನೇ ಮದುವೆ. ಇನ್ನು ಇಬ್ಬರ ನಡುವೆ 8 ವರ್ಷಗಳ ವಯಸ್ಸಿನ ಅಂತರವಿದೆ.


Click it and Unblock the Notifications











