Samantha: ಮಯೋಸೈಟಿಸ್ ಚಿಕಿತ್ಸೆಗಾಗಿ ಸಮಂತಾ ₹25 ಕೋಟಿ ಸಾಲ ನಿಜವೇ? ಅಸಲಿ ಕಥೆ ಇದು
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ಕೇಳಿಬರುವ ಸುದ್ದಿಗಳಿಗೆ ತಳಬುಡ ಇರಲ್ಲ. ಎಲ್ಲಿಂದ ಎಲ್ಲಿಗೋ ಲಿಂಕ್ ಮಾಡಿ ಊಹಾಪೋಹಗಳನ್ನು ಹಬ್ಬಿಸಿಬಿಡುತ್ತಾರೆ. ನಟಿ ಸಮಂತಾ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯ ಚಿಕಿತ್ಸೆಗಾಗಿ ಸ್ಯಾಮ್, ಸ್ಟಾರ್ ನಟನ ಬಳಿ 25 ಕೋಟಿ ರೂ. ಸಾಲ ಮಾಡಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗ್ತಿದೆ. ಇದೀಗ ಸಮಂತಾ ಮೌನ ಮುರಿದಿದ್ದಾರೆ.
ಮಯೋಸೈಟಿಸ್ ಚಿಕಿತ್ಸೆಗಾಗಿ 25 ಕೋಟಿ ರೂ.ನಾ? ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಈ ಚಿಕಿತ್ಸೆಗಾಗಿ ನನ್ನ ಆದಾಯದ ಕೊಂಚ ಹಣ ಮಾತ್ರ ಖರ್ಚಾಗುತ್ತದೆ. ನನ್ನ ಕರಿಯರ್‌ನಲ್ಲಿ ದುಡಿದಿದ್ದನ್ನೆಲ್ಲಾ ಇದ್ದಕ್ಕೆ ವ್ಯಯಿಸಿದೆ ಎಂದು ನಾನು ಅಂದುಕೊಳ್ಳಲ್ಲ. ನನ್ನ ಜಾಗ್ರತೆ ನಾನು ನೋಡಿಕೊಳ್ಳಬಲ್ಲೆ. ಸಾವಿರಾರು ಜನ ಈ ಸಮಸ್ಯೆಯಿಂದೆ ಬಳಲುತ್ತಿದ್ದಾರೆ. ಇಂತಹ ವಿಷಯಗಳ ಬಗ್ಗೆ ಚಿಕಿತ್ಸೆಗೆ ಸಂಬಂಧಿಸಿದಂತೆ ಪೋಸ್ಟ್ ಮಾಡುವ ಮೊದಲು ಕೊಂಚ ಆಲೋಚಿಸಿ" ಎಂದು ಸ್ಯಾಮ್ ಪೋಸ್ಟ್ ಮಾಡಿದ್ದಾರೆ.

13 ವರ್ಷಗಳಿಂದ ಸಮಂತಾ ಚಿತ್ರರಂಗದಲ್ಲಿದ್ದಾರೆ. ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ಜಾಹೀರಾತು ರಾಯಭಾರಿಯಾಗಿದ್ದಾರೆ. ಈ ಮೂಲಕ ಕೋಟಿ ಕೋಟಿ ಸಂಪಾದಿಸಿದ್ದಾರೆ. ಅಂತಹ ಸಮಂತಾಗೆ ಕೇವಲ ಮಯೋಸೈಟಿಸ್ ಚಿಕಿತ್ಸೆಗಾಗಿ ಸಾಲ ಮಾಡುವ ಪ್ರಮೇಯ ಬಂದಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸಮಂತಾ ವಿಚಾರದಲ್ಲಿ ಇಂತಹ ಸಾಕಷ್ಟು ವದಂತಿಗಳು ಕೇಳಿಬರುತ್ತಲೇ ಇದೆ.
ಸ್ಯಾಮ್‌ಗೆ ಮಯೋಸೈಟಿಸ್ ಸಮಸ್ಯೆ
ನಾಗಚೈತನ್ಯಗೆ ವಿಚ್ಛೇದನ ನೀಡಿ ನೋವಿನಲ್ಲಿದ್ದ ಸಮಂತಾ ಮಯೋಸೈಟಿಸ್ ಸಮಸ್ಯೆಯಿಂದೆ ಬಳಲುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು. 'ಯಶೋದ' ಸಿನಿಮಾ ರಿಲೀಸ್‌ಗೂ ಮುನ್ನ ತಮ್ಮ ಆರೋಗ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವದಂತಿ ಬಗ್ಗೆ ಪ್ರತಿಕ್ರಿಯಿಸಿದ್ದರು. ಮಯೋಸೈಟಿಸ್ ಎನ್ನುವ ಅಪರೂಪದ ಸಮಸ್ಯೆ ಕಾಡುತ್ತಿರುವ ಬಗ್ಗೆ ಟ್ವೀಟ್ ಮಾಡಿದ್ದರು. ಚಿಕಿತ್ಸೆ ಪಡೆಯುತ್ತಿರುವಾಗ ಆಸ್ಪತ್ರೆ ಬೆಡ್ ಮೇಲೆ ಕುಳಿತೇ ಆ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದರು.
ನಿಲ್ಲದ ಹೋರಾಟ
ಮಯೋಸೈಟಿಸ್ ವಿರುದ್ಧ ಸಮಂತಾ ಹೋರಾಟ ನಡೆಸುತ್ತಲೇ ಇದ್ದಾರೆ. ಬರೀ ವೈದ್ಯರ ಚಿಕಿತ್ಸೆ ಮಾತ್ರವಲ್ಲ ದೈಹಿಕವಾಗಿಯೂ ಹೋರಾಟ ನಡೆಸಲು ಪ್ರತಿದಿನ ಜಿಮ್‌ನಲ್ಲಿ ಕಸರತ್ತು ಮಾಡುತ್ತಾರೆ. ಡಯೆಟ್ ಮಾಡುತ್ತ ದೇಹ ದಂಡಿಸುತ್ತಿದ್ದಾರೆ. ಈ ಸಂಬಂಧ ಸಾಕಷ್ಟು ಬಾರಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಮಯೋಸೈಟಿಸ್ ಕಾರಣಕ್ಕೆ ಕೆಲ ದಿನಗಳ ಸಿನಿಮಾ ಚಿತ್ರೀಕರಣದಿಂದ ಬ್ರೇಕ್ ಪಡೆದಿದ್ದರು. 'ರೈನ್‌ಬೋ' ಸಿನಿಮಾ ಕೈಬಿಟ್ಟಿದ್ದರು.

'ಖುಷಿ' ಚಿತ್ರ ಬಿಡುಗಡೆಗೆ ಸಿದ್ಧ
ವಿಜಯ್ ದೇವರಕೊಂಡ ಜೋಡಿಯಾಗಿ ಸಮಂತಾ ನಟನೆಯ 'ಖುಷಿ' ಸಿನಿಮಾ ಸದ್ಯ ತೆರೆಗಪ್ಪಳಿಸಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಇಬ್ಬರು ಸತಿ-ಪತಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಬಹಳ ಹಿಂದೆಯೇ ಸೆಟ್ಟೇರಿದ್ದ ಈ ಸಿನಿಮಾ ಸಮಂತಾ ಅನಾರೋಗ್ಯದ ಕಾರಣ ತಡವಾಯಿತು. ಕೊಂಚ ಚೇತರಿಸಿಕೊಂಡ ಬಳಿಕ ಸ್ಯಾಮ್ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು.
ಸಮಂತಾ ಬಾಲಿ ಪ್ರವಾಸ
'ಖುಷಿ' ಸಿನಿಮಾ ಪ್ರಚಾರ ಕಾರ್ಯ ಆರಂಭಿಸುವ ಮುನ್ನ ಸಮಂತಾ ಬಾಲಿ ಪ್ರವಾಸ ಕೈಗೊಂಡಿದ್ದಾರೆ. ಸ್ನೇಹಿತ ಅನುಷಾ ಸ್ವಾಮಿ ಜೊತೆ ಸೇರಿ ಬಾಲಿಯಲ್ಲಿ ಸುತ್ತಾಡುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋಗಳನ್ನು ಆಗಿಂದಾಗ್ಗೆ ಶೇರ್ ಮಾಡುತ್ತಾ ಬರುತ್ತಿದ್ದಾರೆ.


Click it and Unblock the Notifications











