ಖುಷಿ ಸಿನಿಮಾಗೆ ತಂಡಕ್ಕೆ ಮತ್ತಷ್ಟು ಶಕ್ತಿ: ಅಮೆರಿಕಾ ಪ್ರವಾಸದಿಂದ ವಾಪಸ್ ಬಂದ ನಟಿ ಸಮಂತಾ!
ಖುಷಿ ಸಿನಿಮಾದಲ್ಲಿ ಆರಾಧ್ಯ ಆಗಿ ಎಲ್ಲರ ಮನಗೆಲ್ಲುತ್ತಿರುವ ನಟಿ ಸಮಂತಾ ರುತ್ ಪ್ರಭು, ಸಿನಿಮಾ ಬಿಡುಗಡೆಯಾಗುವ ಮುನ್ನವೇ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಖುಷಿ ಬಿಡುಗಡೆಯಲ್ಲಿಯೂ ಇರಲಿಲ್ಲ. ಸುಮಾರು ಒಂದು ತಿಂಗಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇದ್ದ ಅವರು ಹೈದರಾಬಾದ್‌ಗೆ ಮರಳಿದ್ದಾರೆ.
ಸೆಪ್ಟಂಬರ್ ಒಂದರಂದು ಬಿಡುಗಡೆಯಾದ ಖುಷಿ ಸಿನಿಮಾ ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 70 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲಿಸಿದೆ. ಭಾನುವಾರ ಚಿತ್ರಮಂದಿರಗಳಲ್ಲಿ ಹೆಚ್ಚು ಜನ ಕಂಡುಬಂದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೆ ನಟಿ ಸಮಂತಾ ಕೂಡ ಹೈದರಾಬಾದ್‌ಗೆ ಮರಳಿರುವುದು ಚಿತ್ರತಂಡಕ್ಕೆ ಮತ್ತು ಅಭಿಮನಿಗಳಿಗೆ ಸಂತಸ ನೀಡಿದೆ.

ಹೈದರಾಬಾದ್‌ಗೆ ಬಂದ ನಟಿ ಸಮಂತಾ
ಭಾನುವಾರ ರಾತ್ರಿ ನಟಿ ಸಮಂತಾ ರುತ್ ಪ್ರಭು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ತನ್ನ ಕಾರಿನಲ್ಲಿ ಹೋಗುತ್ತಿದ್ದಂತೆ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ. ವಿದೇಶ ಪ್ರವಾಸದಲ್ಲಿದ್ದ ನಟಿ, ನ್ಯೂಯಾರ್ಕ್‌ನಲ್ಲಿ ಕುಟುಂಬದೊಂದಿಗೆ ತನ್ನ ಸಮಯವನ್ನು ಎಂಜಾಯ್ ಮಾಡಿದ್ದಾರೆ.
ಸ್ವಾತಂತ್ರ್ಯ ದಿನದ ನಿಮಿತ್ತ ನ್ಯೂಯಾರ್ಕ್ ಸಿಟಿಯಲ್ಲಿ ಇಂಡಿಯಾ ಡೇ ಪರೇಡ್‌ನಲ್ಲಿ ಭಾಗಿಯಾಗಿದ್ದರು. ಅಲ್ಲಿನ ಹಲವು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿದ್ದರು. ಇದರ ಜೊತೆಗೆ ಸೀರೆ ಧರಿಸಿ ನ್ಯೂಯಾರ್ಕ್ ಬೀದಿಗಳಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಇನ್ನು, ಸಮಂತಾ ತಮ್ಮ ಅನಾರೋಗ್ಯ ಸಮಸ್ಯೆಯಾದ ಮಯೋಸೈಟಿಸ್‌ಗೆ ಚಿಕಿತ್ಸೆಯನ್ನೂ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ಖುಷಿ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆದ ನಂತರ ಸಮಂತಾ ಭಾರತಕ್ಕೆ ಮರಳಿದ್ದಾರೆ. ಏರ್‌ಪೋರ್ಟ್‌ನಲ್ಲಿ ಕ್ರಾಪ್ ಟಾಪ್ ಮತ್ತು ಕಪ್ಪು ಜಾಕೆಟ್‌ಗೆ ಬಿಳಿ ಪ್ಯಾಂಟ್ ಮ್ಯಾಚ್ ಮಾಡಿದ್ದರು. ತುಂಬಾ ಸರಳವಾಗಿ ಸಮಂತಾ ಕಾಣಿಸುತ್ತಿದ್ದರು. ಪುಟ್ಟ ಬ್ಯಾಗ್, ಕನ್ನಡಕ ಧರಿಸಿದ್ದ ಅವರು ಬೇಗನೆ ನಿಲ್ದಾಣದಿಂದ ಕಾರಿನಲ್ಲಿ ತೆರಳಿದ್ದಾರೆ.

ಆರು ತಿಂಗಳು ನಟನೆಯಿಂದ ವಿರಾಮ
ಆಗಸ್ಟ್‌ನಲ್ಲಿ, ಸಮಂತಾ 41 ನೇ ಇಂಡಿಯಾ ಡೇ ಪರೇಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ನ್ಯೂಯಾರ್ಕ್‌ಗೆ ತೆರಳಿದ್ದರು. ನಂತರ, ಅವರು ತಮ್ಮ ಕುಟುಂಬದೊಂದಿಗೆ ಅಲ್ಲಿಯೇ ಕಾಲ ಕಳೆದಿದ್ದರು. ಪ್ರತಿದಿನ ತಮ್ಮ ಪ್ರವಾಸದ ಫೋಟೋ, ಅಲ್ಲಿನ ಸ್ಥಳಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳಿಗೆ ತಿಳಿಸುತ್ತಿದ್ದರು.
ನ್ಯೂಯಾರ್ಕ್ ನಂತರ ಸಮಂತಾ ಕ್ಯಾಲಿಫೋರ್ನಿಯಾಗೆ ರೋಡ್ ಟ್ರಿಪ್ ಮಾಡಿದ್ದಾರೆ. ಇದನ್ನು ಕೂಡ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಸಮಂತಾ ಮಯೋಸೈಟಿಸ್ ಕಾಯಿಲೆಗೆ ಯುಎಸ್‌ನಲ್ಲಿ ಚಿಕಿತ್ಸೆ ತೆಗೆದುಕೊಂಡಿದ್ದಾರೆ.
ಅರೋಗ್ಯದ ಕಾರಣದಿಂದ ಸಮಂತಾ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದಾರೆ. ತನ್ನ ಆರೋಗ್ಯದ ಕಡೆ ಗಮನಹರಿಸಲು ಸುಮಾರು ಆರು ತಿಂಗಳ ಕಾಲ ನಟನೆಯಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಇಶಾ ಯೋಗ ಕೇಂದ್ರದಲ್ಲಿ ಯೋಗ ಸೆಷನ್‌ಗಳು, ರಜೆಗಳು ಮತ್ತು ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಜೊತೆಗೆ ಪ್ರೀತಿಪಾತ್ರರ ಜೊತೆ ಸಮಯ ಕಳೆಯುತ್ತಿದ್ದಾರೆ.
ಖುಷಿ ಚಿತ್ರದ ಯಶಸ್ಸಿನಲ್ಲಿ ಸಮಂತಾ
ಯಶೋಧಾ, ಶಾಕುಂತಲಂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡದ ಕಾರಣ ಈ ಖುಷಿ ಸಿನಿಮಾದ ಯಶಸ್ಸು ಸಮಂತಾ ಅವರಿಗೆ ಹೆಚ್ಚು ಮುಖ್ಯವಾಗಿತ್ತು. ಸೆಪ್ಟೆಂಬರ್ 1 ರಂದು ಬಿಡುಗಡೆಯಾದ ಖುಷಿ, ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದ್ದಾರೆ.
ಶಿವ ನಿರ್ವಾಣ ನಿರ್ದೇಶನದ ಈ ಚಿತ್ರದಲ್ಲಿ ಸಮಂತಾ ಜೊತೆಗೆ ವಿಜಯ್ ದೇವರಕೊಂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರ ವಿಮರ್ಶೆಗಳ ಪ್ರಕಾರ ಆರಾಧ್ಯ ಮತ್ತು ವಿಪ್ಲವ್ ಅವರ ಕೆಮಿಸ್ಟ್ರಿ, ಸಿನಿಮಾದ ಸಂಗೀತ ಹೆಚ್ಚು ಮೆಚ್ಚುಗೆ ಗಳಿಸಿದೆ.
ಸಿನಿಮಾ ಬಿಡುಗಡೆಯಾದ ದಿನ ಸಮಂತಾ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಖುಷಿ ಯಶಸ್ಸಿಗೆ ಕಾರಣರಾದ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದರು. ಜೊತೆಗೆ ಸಿನಿಮಾ ಬಿಡುಗಡೆಯ ಒತ್ತಡ, ಖುಷಿಯ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದರು. ಖುಷಿ ಸಿನಿಮಾ ಪ್ರಚಾರವನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ನಟ ವಿಜಯ್ ದೇವರಕೊಂಡ ಅವರ ಜೊತೆಗೆ ಸಮಂತಾ ಕೂಡ ಸೇರಿಕೊಂಡರೇ ಚಿತ್ರಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ. ಇದರಿಂದ ಖುಷಿ ಕಲೆಕ್ಷನ್ ಕೂಡ ಹೆಚ್ಚಾಗಲಿದೆ.


Click it and Unblock the Notifications











