ಚರ್ಮ ಸಮಸ್ಯೆಯ ಚಿಕಿತ್ಸೆಗಾಗಿ ಅಮೆರಿಕಾಗೆ ಸಮಂತಾ? ಮ್ಯಾನೇಜರ್ ಹೇಳಿದ್ದೇನು?
ಕಳೆದ ಕೆಲ ದಿನಗಳಿಂದ ಸಮಂತಾ ಆರೋಗ್ಯದ ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ಹಾಟ್ ಟಾಪಿಕ್ ಆಗಿತ್ತು. ಸಮಂತಾ ಆರೋಗ್ಯದಲ್ಲಿ ಏರುಪೇರಾಗಿದೆ, ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಅಮೆರಿಕಾದಲ್ಲಿ ಚಿಕಿತ್ಸೆ ಪಡೀತಿದ್ದಾರೆ ಹೀಗೆ ಹತ್ತು ಹಲವು ಸುದ್ದಿ ಹರಿದಾಡಿತ್ತು. ಇದನ್ನೆಲ್ಲಾ ಕೇಳಿ ಆಕೆಯ ಅಭಿಮಾನಿಗಳು ಯಾವುದನ್ನು ನಂಬಬೇಕು ಯಾವುದನ್ನು ನಂಬಬಾರದು ಎಂದು ಗೊಂದಲಕ್ಕೀಡಾಗಿದ್ದರು.
ಇತ್ತೀಚಿನ ದಿನಗಳಲ್ಲಿ ಎಲ್ಲೂ ಕಾಣಿಸಿಕೊಳ್ಳದ ಸಮಂತಾ ಇನ್‌ಸ್ಟಾಗ್ರಾಂನಲ್ಲೂ ಅಟೆಂಡೆನ್ಸ್ ಹಾಕಿರಲಿಲ್ಲ. ವಿಜಯ್ ದೇವರಕೊಂಡ ಜೊತೆ ಸಮಂತಾ ನಟಿಸುತ್ತಿರುವ 'ಖುಷಿ' ಸಿನಿಮಾ ಬಗ್ಗೆ ಕೂಡ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ. ಇತ್ತೀಚೆಗಷ್ಟೆ ಆಕೆ ನಟಿಸಿರುವ 'ಯಶೋಧ' ಸಿನಿಮಾ ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು. ಸದ್ಯ ಈ ಗಾಸಿಪ್‌ಗಳ ಬಗ್ಗೆ ಸಮಂತಾ ಮ್ಯಾನೇಜರ್ ಪ್ರತಿಕ್ರಿಯೆ ನೀಡಿದ್ದಾರೆ. ಆದರೂ ಗೊಂದಲ ಮಾತ್ರ ಕಮ್ಮಿ ಆಗಿಲ್ಲ.
ಸಮಂತಾ ಆರೋಗ್ಯದ ಬಗ್ಗೆ ಕೇಳಿ ಬರುತ್ತಿರುವ ರೂಮರ್ಸ್ ಎಲ್ಲಾ ಸುಳ್ಳು ಎಂದು ಆಕೆಯ ಮ್ಯಾನೇಜರ್ ಮಹೇಂದ್ರ ಹೇಳಿದ್ದಾರೆ. ಸ್ಯಾಮ್ ಆರೋಗ್ಯವಾಗಿ ಇದ್ದಾರೆ. ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಸುಳ್ಳು ಸುದ್ದಿಗಳನ್ನು ಯಾರು ನಂಬಬೇಡಿ ಎಂದಿದ್ದಾರೆ. ಆದರೆ ಸಮಂತಾ ಅಮೆರಿಕಾ ಟ್ರಿಪ್ ಹಿಂದಿನ ಕಾರಣವನ್ನು ಮಾತ್ರ ತಿಳಿಸಿಲ್ಲ. ಅಂದ ಹಾಗೆ ಸ್ಯಾಮ್ ಚರ್ಮಕ್ಕೆ ಸಂಬಂಧಿಸಿದ 'ಪಾಲಿಮರ್ ಫೋರ್ಸ್ ಲೈಟ್ ಎರೆಪ್ಷನ್' ಎನ್ನುವ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಅದೇ ಕಾರಣಕ್ಕೆ ಆಕೆ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತೆಲ್ಲಾ ಸುದ್ದಿ ಹರಿದಾಡ್ತಿದೆ.

ಸಮಂತಾ ಮೌನ ಮುರಿದು ಈ ಅಂತೆಕಂತೆ ಸುದ್ದಿಗಳಿಗೆ ಕಡಿವಾಣ ಹಾಕಬೇಕಿದೆ. ಸಮಂತಾ ಸದ್ಯ 'ಶಾಕುಂತಲಂ' ಎನ್ನುವ ಮತ್ತೊಂದು ಚಿತ್ರದಲ್ಲಿ ನಟಿಸ್ತಿದ್ದಾರೆ. ಒಂದು ಹಾಲಿವುಡ್ ಪ್ರಾಜೆಕ್ಟ್‌ಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಶೀಘ್ರದಲ್ಲೇ ಬಾಲಿವುಡ್‌ಗೂ ಎಂಟ್ರಿ ಕೊಡುವ ಸಾಧ್ಯತೆಯಿದೆ. ಸದ್ಗುರು ಸೂಚನೆಯಂತೆ ಸಮಂತಾ 2ನೇ ಮದುವೆ ಆಗುತ್ತಾರೆ ಅನ್ನುವ ಮತ್ತೊಂದು ಗಾಳಿಸುದ್ದಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೀತಿದೆ. ಇದನ್ನು ಕೇಳಿ ಅಭಿಮಾನಿಗಳು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಡೈವೋರ್ಸ್ ನಂತರ ಸಮಂತಾ ಕ್ರೇಜ್ ಕಮ್ಮಿ ಆಗುತ್ತೆ ಅಂತಲೇ ಕೆಲವರು ಭಾವಿಸಿದ್ದರು. ಆದರೆ 'ಪುಷ್ಪ' ಸಿನಿಮಾ ಐಟಂ ಸಾಂಗ್‌ನಿಂದ ಎಲ್ಲರ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿತ್ತು. ಫೋಟೊಶೂಟ್, ಇಂಟರ್‌ವ್ಯೂ ಅಂತ ಸಮಂತಾ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದರು. ಇನ್ನು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಂದ ಸದ್ದು ಮಾಡುತ್ತಿದ್ದರು. ಆದರೆ ದಿಢೀರ್ ಅಂತ ಸೈಲೆಂಟ್ ಆಗಿದ್ದು ಯಾಕೆ ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ.


Click it and Unblock the Notifications











