ಇಂಡಸ್ಟ್ರಿಗೆ ಕಾಲಿಟ್ಟು 13 ವರ್ಷ ಪೂರೈಸಿದ ಸಮಂತಾ; ಆಸ್ತಿ, ತಿಂಗಳ ಆದಾಯ, ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು?

2010ರಲ್ಲಿ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ 'ಏ ಮಾಯಾ ಚೇಸಾವೆ' ಚಿತ್ರ ಬಿಡುಗಡೆಗೊಂಡಿತು. ಇದರ ಹಿಂದಿನ ವರ್ಷದಲ್ಲಿ ಜೋಶ್ ಸಿನಿಮಾ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದ ನಟ ನಾಗ ಚೈತನ್ಯ ನಟನೆಯ ಎರಡನೇ ಸಿನಿಮಾವಿದು. ಜೋಶ್ ಚಿತ್ರದಲ್ಲಿ ಸಿಗದಿದ್ದಂತಹ ದೊಡ್ಡ ಬ್ರೇಕ್ ಅನ್ನು ನಾಗಚೈತನ್ಯಗೆ ಈ ಚಿತ್ರ ತಂದುಕೊಟ್ಟಿತ್ತು. ಅಂದಿನ ದಿನಕ್ಕೆ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಚಿತ್ರ ಹಾಗೂ ನಾಗಾರ್ಜುನ ಹಿರಿಯ ಪುತ್ರನ ಎರಡನೇ ಸಿನಿಮಾ ಎಂದು ಗುರುತಿಸಿಕೊಂಡಿದ್ದ ಈ ಚಿತ್ರದಲ್ಲಿ ಬಣ್ಣ ಹಚ್ಚಿರುವ ನಟಿ ಸಮಂತಾ ರುತ್ ಪ್ರಭು ಮುಂದೊಂದು ದಿನ ಸೂಪರ್‌ಸ್ಟಾರ್ ಆಗಿ ಮಿಂಚಲಿದ್ದಾರೆ ಎಂದು ಯಾರೂ ಸಹ ಊಹಿಸಿರಲಿಲ್ಲ.
ಹೌದು, ಇದೇ ಚಿತ್ರದ ಮೂಲಕ ಮೂಲತಃ ತಮಿಳುನಾಡಿನ ನಟಿ ಸಮಂತಾ ರುತ್ ಪ್ರಭು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಮೊದಲ ಚಿತ್ರದಲ್ಲಿಯೇ ತನ್ನ ಉತ್ತಮ ಅಭಿನಯದಿಂದ ಸಿನಿ ರಸಿಕರ ಗಮನ ಸೆಳೆದ ಸಮಂತಾ ಫಸ್ಟ್ ಬಾಲ್ ಸಿಕ್ಸರ್ ಬಾರಿಸಿದ್ದರು. ಈ ಚಿತ್ರದಲ್ಲಿ ಜೆಸ್ಸಿ ಎಂಬ ಪಾತ್ರ್ ನಿರ್ವಹಿಸಿದ್ದ ಸಮಂತಾ ತನ್ನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಸೌತ್ ಅತ್ಯುತ್ತಮ ಉದಯೋನ್ಮುಖ ನಾಯಕಿ ಪ್ರಶಸ್ತಿಯನ್ನೂ ಸಹ ಪಡೆದುಕೊಂಡರು. ಇದಾದ ಬಳಿಕ ನಾಲ್ಕೈದು ತಮಿಳು ಸಿನಿಮಾಗಳಲ್ಲಿ ನಟಿಸಿದ ಸಮಂತಾ ತೆಲುಗಿನ ಸ್ಟಾರ್ ನಟರಾದ ಎನ್‌ಟಿಆರ್ ನಟನೆಯ ಬೃಂದಾವನಂ ಹಾಗೂ ಮಹೇಶ್ ಬಾಬು ನಟನೆಯ ದೂಕುಡು ಚಿತ್ರಗಳಲ್ಲಿ ನಟಿಸಿ, ಮಿಂಚಿ ಸ್ಟಾರ್ ನಟಿಯಾದರು.
ಹೀಗೆ ತೆಲುಗಿನ ಇಬ್ಬರು ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿದ ಸಮಂತಾ ಈ ಚಿತ್ರಗಳ ಬೆನ್ನಲ್ಲೇ ಬಾಲಿವುಡ್‌ಗೂ ಸಹ ಕಾಲಿಟ್ಟರು ಹಾಗೂ ರಾಜಮೌಳಿ ನಿರ್ದೇಶನದ ಈಗ ಚಿತ್ರದಲ್ಲೂ ಸಹ ನಟಿಸಿದರು. ಇದೇ ರೀತಿ ಸಾಲು ಸಾಲು ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸುತ್ತಾ ಯಶಸ್ಸಿನ ಶಿಖರ ಏರಿದ ನಟಿ ಸಮಂತಾ ಬಳಿಕ ವಿವಾಹ ವಿಚ್ಛೇದನ ಸೇರಿದಂತೆ ಹಲವು ವಿಚಾರಗಳಿಂದಾಗಿ ವಿವಾದಕ್ಕೂ ಸಹ ಒಳಗಾದರು. ತನ್ನ ಚೊಚ್ಚಲ ಚಿತ್ರದ ನಾಯಕ ನಾಗಚೈತನ್ಯರನ್ನು ಪ್ರೀತಿಸಿ ಮದುವೆಯಾಗಿದ್ದ ಸಮಂತಾ ವಿಚ್ಛೇದನ ಪಡೆದುಕೊಂಡರು.
ಇನ್ನು ಇಂದಿಗೆ ( ಫೆಬ್ರವರಿ 26 ) ಸಮಂತಾ ನಟನೆಯ ಪ್ರಥಮ ಚಿತ್ರ 'ಏ ಮಾಯಾ ಚೇಸಾವೆ' ಬಿಡುಗಡೆಯಾಗಿ 13 ವರ್ಷಗಳು ಕಳೆದಿದ್ದು, ಇಷ್ಟು ವರ್ಷಗಳಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ಸದ್ಯ ಪುನಃ ಚಿತ್ರಗಳಲ್ಲಿ ನಟಿಸುವಲ್ಲಿ ನಿರತರಾಗಿರುವ ಸಮಂತಾ ಸದ್ಯ ತನ್ನ ಬಳಿ ಎಷ್ಟು ಮೊತ್ತದ ಆಸ್ತಿಯನ್ನು ಹೊಂದಿದ್ದಾರೆ, ತಿಂಗಳಿಗೆ ಎಷ್ಟು ಹಣ ದುಡಿಯುತ್ತಾರೆ ಹಾಗೂ ಚಿತ್ರವೊಂದಕ್ಕೆ ಎಷ್ಟು ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಜಿಕ್ಯೂ ಇಂಡಿಯಾ ಸೇರಿದಂತೆ ಹಲವು ವೆಬ್ ತಾಣಗಳು ತಿಳಿಸಿರುವ ಪ್ರಕಾರ ಸಮಂತಾ ರುತ್ ಪ್ರಭು ಸುಮಾರು 80 ಕೋಟಿ ಮೊತ್ತದ ಆಸ್ತಿಯನ್ನು ತಮ್ಮ ಬಳಿ ಹೊಂದಿದ್ದಾರೆ ಎನ್ನಲಾಗಿದೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೊಸ್‌ನಲ್ಲಿ ಒಂದು ಬಂಗಲೆ ಹೊಂದಿರುವ ಸಮಂತಾ ರುತ್ ಪ್ರಭು ನಗರದ ಹಲವೆಡೆ ನಿವೇಶನಗಳನ್ನು ಹೊಂದಿದ್ದು, ರಿಯಲ್ ಎಸ್ಟೇಟ್‌ನಲ್ಲಿಯೂ ಸಕ್ರಿಯರಾಗಿದ್ದಾರೆ ಎಂಬ ಮಾಹಿತಿಯನ್ನು ಈ ವೆಬ್ ತಾಣಗಳು ತಿಳಿಸಿವೆ. ಇನ್ನು ಸಮಂತಾ ಬಳಿ ದುಬಾರಿ ಕಾರುಗಳು, ದುಬಾರಿ ಬಟ್ಟೆ, ಶೂ ಕಲೆಕ್ಷನ್ ಇದ್ದು ನಟಿ ಫ್ಯಾನ್ಸಿ ಲೈಫ್ ಲೀಡ್ ಮಾಡುತ್ತಿದ್ದಾರೆ.
ಇನ್ನು ಸಮಂತಾ ರುತ್ ಪ್ರಭು ತಿಂಗಳಿಗೆ 25 ಲಕ್ಷ ರೂಪಾಯಿಗಳ ಆದಾಯವನ್ನು ಹೊಂದಿದ್ದಾರೆ. ಈ ಆದಾಯದಲ್ಲಿ ಆಕೆ ರಾಯಭಾರಿಯಾಗಿರುವ ಜಾಹೀರಾತುಗಳ ಸಂಭಾವನೆಯೂ ಸೇರಿದ್ದು, ಇಂದಿಗೂ ಸಹ ಸಮಂತಾಗೆ ಜಾಹೀರಾತುಗಳಲ್ಲಿ ದೊಡ್ಡ ಬೇಡಿಕೆ ಇದೆ. ತಿಂಗಳಿಗೆ 25 ಲಕ್ಷ ರೂಪಾಯಿಗಳ ಆದಾಯವನ್ನು ಹೊಂದಿರುವ ಸಮಂತಾ ರುತ್ ಪ್ರಭು ಚಿತ್ರವೊಂದಕ್ಕೆ ಬರೋಬ್ಬರಿ 3 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.


Click it and Unblock the Notifications











