ನಾಗಚೈತನ್ಯರಿಂದ ದೂರ ಆದ್ಮೇಲೆ ಮೊದಲ ಪೋಸ್ಟ್ ಹಾಕಿದ ಸಮಂತಾ
ಎಲ್ಲವೂ ಸರಿಯಾಗಿದ್ದಿದ್ದರೆ ಅಕ್ಟೋಬರ್ 7 ರಂದು ಸಮಂತಾ ಮತ್ತು ನಾಗಚೈತನ್ಯ ಜೋಡಿಗೆ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಿಸುತ್ತಿದ್ದರು. ಆದರೆ, ಮದುವೆಯಾದ ದಿನ ಬರುವುದಕ್ಕೆ ಐದು ದಿನ ಮುಂಚಿತವಾಗಿ ಪರಸ್ಪರ ಇಬ್ಬರು ದೂರವಾದರು.
2017ರ ಅಕ್ಟೋಬರ್ 7 ರಂದು ನಟಿ ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯ ಜೀವನ ಆರಂಭಿಸಿದ್ದರು. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಇದೀಗ, ನಾಲ್ಕು ವರ್ಷ ಪೂರೈಸಲು ಐದು ದಿನ ಬಾಕಿ ಉಳಿದಿರುವಂತೆ ದೂರ ದೂರವಾದರು.
ನಾಗಚೈತನ್ಯ ಅವರಿಂದ ದೂರ ಆದ ಐದು ದಿನದ ನಂತರ ಇನ್ಸ್ಟಾಗ್ರಾಂನಲ್ಲಿ ಮೊದಲ ಸಲ ಪೋಸ್ಟ್ ಹಾಕಿದ್ದಾರೆ. 'ಸಾಂಗ್ ಆಫ್ ಓಲ್ಡ್ ಲವ್' ಎಂಬ ಕವನ ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಗೌನ್ ತೊಟ್ಟಿರುವ ಸಮಂತಾ ಲೂಸ್ ಹೇರ್ ಬಿಟ್ಟಿರುವ ಫೋಟೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.

ಅಕ್ಟೋಬರ್ 2 ರಂದು ನಟಿ ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ದೂರ ಆಗಿರುವ ಬಗ್ಗೆ ಪ್ರಕಟಿಸಿದ್ದರು. "ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿ ಅಂತ ಅಭಿಮಾನಿಗಳು, ಮಾಧ್ಯಮದವರು ಮತ್ತು ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮ್ಮ ಖಾಸಗಿತನಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇವೆ" ಎಂದು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ನಾಗಚೈತನ್ಯ ಮತ್ತು ಸಮಂತಾ ದೂರ ಆಗುವ ನಿರ್ಧಾರ ಪ್ರಕಟಿಸಿದ ನಂತರ ನಾಗಾರ್ಜುನ ಸಹ ಪ್ರತಿಕ್ರಿಯಿಸಿ, ಬೇಸರ ವ್ಯಕ್ತಪಡಿಸಿದ್ದರು. ಇನ್ನು ಮಗಳು ನಿರ್ಧಾರದ ಬಗ್ಗೆ ಸಮಂತ ತಂದೆ ಪ್ರಭು ಪ್ರತಿಕ್ರಿಯಿಸಿ ಅಚ್ಚರಿ ವ್ಯಕ್ತಪಡಿಸಿದ್ದರು. "ಅವರಿಬ್ಬರು ಬೇರೆ ಬೇರೆ ಆಗುತ್ತಿದ್ದಾರೆ ಎನ್ನುವ ವಿಚಾರ ತಿಳಿದ ಕ್ಷಣದಿಂದ ನನ್ನ ಮನಸ್ಸು ಸ್ತಬ್ದವಾಗಿದೆ. ಈ ಸಮಯದಲ್ಲಿ ನನಗೆ ಏನು ತೋಚುತ್ತಿಲ್ಲ. ನಾನು ನನ್ನ ಮಗಳ ಬಳಿ ಈ ಬಗ್ಗೆ ಮಾತನಾಡುತ್ತೇನೆ. ವಿಚ್ಛೇದನ ನಿರ್ಧಾರದ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಹೇಳುತ್ತೇನೆ. ಸದ್ಯದಲ್ಲೇ ಎಲ್ಲಾ ಸರಿಹೋಗುವ ವಿಶ್ವಾಸವಿದೆ " ಎಂದು ಸಮಂತಾ ತಂದೆ ಜೋಸೆಫ್ ಪ್ರಭು ಹೇಳಿದ್ದರು.


Click it and Unblock the Notifications











