65 ಕೋಟಿ ವೆಚ್ಚದಲ್ಲಿ ತಯಾರಾದ ಶಾಕುಂತಲಂ 2 ದಿನದಲ್ಲಿ ಗಳಿಸಿದ್ದಿಷ್ಟು; ನಿರ್ಮಾಪಕರಿಗೆ ಉಂಡೆನಾಮ ಫಿಕ್ಸ್!
ನಟಿ ಸಮಂತಾ ರುತ್ ಪ್ರಭು ವಿವಾಹ ವಿಚ್ಛೇದನವಾದ ಬಳಿಕ ತೆಲುಗಿನಲ್ಲಿ ಮಹಿಳಾ ಪ್ರಧಾನ ಚಿತ್ರಗಳನ್ನೇ ಹೆಚ್ಚಾಗಿ ಆರಿಸಿಕೊಳ್ಳುತ್ತಿದ್ದಾರೆ. ಸಮಂತಾ ಸ್ಟಾರ್‌ಗಿರಿ ಮೇಲೆ ನಂಬಿಕೆ ಇರುವ ಕೆಲ ನಿರ್ಮಾಪಕರು ಈ ಚಿತ್ರಗಳ ಮೇಲೆ ಹಣ ಹೂಡಲು ಮುಂದೆ ಬರುತ್ತಿದ್ದಾರೆ. ಆದರೆ ಚಿತ್ರಗಳು ಮಾತ್ರ ಅಂದುಕೊಂಡ ರೀತಿ ಸಕ್ಸಸ್ ಕಾಣುವಲ್ಲಿ ಯಶಸ್ವಿಯಾಗಿಲ್ಲ.
ಕಳೆದ ವರ್ಷ ಯಶೋಧ ಎಂಬ ಅದೇ ಹಳೇ ಮಾದರಿಯ ಅಂಡರ್‌ಕವರ್ ಪೊಲೀಸ್ ಆಫೀಸರ್ ಕಥೆಯಲ್ಲಿ ನಟಿಸಿದ್ದ ಸಮಂತಾ ನಿರೀಕ್ಷಿಸಿದ ಗೆಲುವು ಕಾಣಲಿಲ್ಲ. ವಿಚ್ಛೇದನದ ನಂತರ ಲೀಡ್ ರೋಲ್‌ನಲ್ಲಿ ನಟಿಸಿದ್ದ ಮೊದಲ ಚಿತ್ರ ಎಂಬ ಕಾರಣಕ್ಕೆ ಚಿತ್ರಮಂದಿರಕ್ಕೆ ಸಿನಿ ರಸಿಕರು ನುಗ್ಗಿದ್ದ ಕಾರಣ ಮೊದಲ ದಿನ ಒಳ್ಳೆಯ ಗಳಿಕೆಯನ್ನೇ ಮಾಡಿದ್ದ ಯಶೋಧ ನಂತರದ ದಿನಗಳಲ್ಲಿ ಟುಸ್ ಪಟಾಕಿಯಾಗಿತ್ತು.

ಇದೀಗ ಅದೇ ಸಾಲಿಗೆ ಮೊನ್ನೆ ( ಏಪ್ರಿಲ್ 14 ) ಬಿಡುಗಡೆಗೊಂಡ ಸಮಂತಾ ರುತ್ ಪ್ರಭು ನಟನೆಯ ಶಾಕುಂತಲಂ ಚಿತ್ರ ಸಹ ಸೇರ್ಪಡೆಗೊಂಡಿದೆ. ಹೌದು, ಈ ಬಾರಿ ಸಮಂತಾ ರುತ್ ಪ್ರಭು ಪೌರಾಣಿಕ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಆದರೆ ಚಿತ್ರ ಯಾವ ವಿಭಾಗದಲ್ಲಿಯೂ ಪರ್ಫೆಕ್ಟ್ ಎಂಬ ಪ್ರತಿಕ್ರಿಯೆಯನ್ನು ಪಡೆದುಕೊಂಡೇ ಇಲ್ಲ. ಹೌದು, ಚಿತ್ರ ಬಿಡುಗಡೆಯಾದ ದಿನವೇ ಸಿನಿ ರಸಿಕರಿಂದ ಅತಿ ಕೆಟ್ಟ ಚಿತ್ರ ಎಂಬ ವಿಮರ್ಶೆಯನ್ನು ಪಡೆದುಕೊಂಡಿದೆ.
ಕವಿರತ್ನನ ಶಾಕುಂತಲ ಕೃತಿಯ ಮೇಲೆ ಆಧಾರಿತವಾಗಿರುವ ಈ ಚಿತ್ರದಲ್ಲೂ ಸಹ ಈ ಹಿಂದೆ ಬಂದು ಹೋಗಿರುವ ಎಲ್ಲಾ ಶಾಕುಂತಲ ಚಿತ್ರಗಳಲ್ಲಿನ ಕಥೆಯನ್ನೇ ಹೇಳಲಾಗಿದೆ. ಆದರೆ ಈಗಿನ ಕಾಲಕ್ಕೆ ತಕ್ಕಂತ ವಿಎಫ್‌ಎಕ್ಸ್, ಮೇಕಿಂಗ್ ಮೂಲಕ ಚಿತ್ರವನ್ನು ಇನ್ನೂ ಚೆನ್ನಾಗಿ ಮಾಡಬಹುದಾಗಿದ್ದರೂ ಸಹ ಅದರಲ್ಲಿ ಚಿತ್ರತಂಡ ಸಂಪೂರ್ಣವಾಗಿ ಎಡವಿದೆ. ಪರಿಣಾಮವಾಗಿ ಚಿತ್ರ ಕಳಪೆ ಓಪನಿಂಗ್ ಪಡೆದುಕೊಂಡಿದ್ದು, ಎರಡನೇ ದಿನ ಸಂಪೂರ್ಣವಾಗಿ ಮುಗ್ಗರಿಸಿದೆ.
ಇನ್ನು 65 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಶಾಕುಂತಲಂ ಥಿಯೇಟರ್ ಹೊರತುಪಡಿಸಿ ಉಳಿದ ಹಕ್ಕುಗಳ ಮೂಲಕ 40 ಕೋಟಿ ಬ್ಯುಸಿನೆಸ್ ಮಾಡಿತ್ತು. ಚಿತ್ರ ಚಿತ್ರಮಂದಿರಗಳಲ್ಲಿ 19 ಕೋಟಿ ಗಳಿಸಿದರೆ ಲಾಭ ಬರಲಿದ್ದು, ನಿರ್ಮಾಪಕರೇ ಚಿತ್ರವನ್ನು ತೆಲುಗು ರಾಜ್ಯಗಳಲ್ಲಿ ವಿತರಿಸಿದ್ದಾರೆ. ಹೀಗಾಗಿ ಚಿತ್ರದ ಕಲೆಕ್ಷನ್ ತೀರಾ ಕಳಪೆ ಮಟ್ಟದಲ್ಲಿರುವ ಕಾರಣ ನಿರ್ಮಾಪಕರಿಗೆ ದೊಡ್ಡ ಮಟ್ಟದ ಲಾಸ್ ಆಗುವುದು ಪಕ್ಕಾ.

ಮೊದಲ ದಿನ 4.70 ಕೋಟಿ ಗಳಿಕೆ ಮಾಡಿದ್ದ ಶಾಕುಂತಲಂ ಎರಡನೇ ದಿನ ಶನಿವಾರ ಕೇವಲ 1.45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಈ ಮೂಲಕ ಎರಡು ದಿನಗಳಲ್ಲಿ 6.15 ಕೋಟಿ ಗಳಿಕೆ ಮಾಡಿದ್ದು, ಲಾಸ್ ಆಗದೇ ಸೇಫ್ ಆಗಬೇಕೆಂದರೆ ಇನ್ನೂ 12.85 ಕೋಟಿ ಗಳಿಕೆ ಮಾಡಬೇಕಿದೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರ ಹಾಗೂ ತೆಲುಗು ರಾಜ್ಯಗಳ ಹಲವು ಕಡೆ ಪ್ರೇಕ್ಷಕರಿಲ್ಲದೇ ಚಿತ್ರ ಎತ್ತಂಗಡಿ ಆಗಿದ್ದು ಚಿತ್ರ ಅಬ್ಬಬ್ಬಾ ಎಂದರೆ ಇನ್ನೊಂದು ಆರೇಳು ಕೋಟಿ ಗಳಿಸಿದರೆ ಅದೇ ಹೆಚ್ಚು ಎನ್ನಬಹುದು. ಈ ಮೂಲಕ ನಿರ್ಮಾಪಕ ಹಾಗೂ ವಿತರಕ ದಿಲ್ ರಾಜುಗೆ ಏನಿಲ್ಲವೆಂದರೂ ಐದರಿಂದ ಆರು ಕೋಟಿ ನಷ್ಟ ಖಚಿತ.
ಇನ್ನು ಚಿತ್ರದ ಸೋಲಿಗೆ ನಿರ್ದೇಶಕರ ಎಡವಟ್ಟೇ ಕಾರಣ ಎನ್ನಬಹುದು. ಅತಿ ನೀರಸವೆನಿಸುವ, ಬೋರ್ ಹೊಡೆಸುವ ಚಿತ್ರಕಥೆ ಎಣೆದಿರುವ ನಿರ್ದೇಶಕರು ಸೋತಿದ್ದಾರೆ. ಯಾವ ಪಾತ್ರವೂ ಸಹ ಯಾರಿಗೂ ಸಂಪೂರ್ಣವಾಗಿ ಹೊಂದಿಕೊಂಡಿಲ್ಲ. ಇನ್ನು ಮೇಕಿಂಗ್ ಹಾಗೂ ವಿಎಫ್ಎಕ್ಸ್ ಅಂತೂ ಪಂಚತಂತ್ರವನ್ನು ನೆನಪಿಸಿಬಿಡುತ್ತದೆ. ಇಂತಹ ಕಳಪೆ ಚಿತ್ರ ಮಾಡಿ ಲಾಭ ನಿರೀಕ್ಷಿಸುವುದು ಹಗಲುಗನಸೇ ಸರಿ.


Click it and Unblock the Notifications











