ಮಗನ ತ್ಯಾಗದ ಬಗೆಗಿನ ಸಿನಿಮಾ ಕಂಡು ಕಣ್ಣೀರುಗರೆದ ಸಂದೀಪ್ ಉನ್ನಿಕೃಷ್ಣನ್ ಪೋಷಕರು
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಬೆಂಗಳೂರಿಗ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ, ಹೋರಾಟ, ತ್ಯಾಗದ ಕುರಿತ ತೆಲುಗು ಸಿನಿಮಾ 'ಮೇಜರ್' ಇಂದು ಬಿಡುಗಡೆ ಆಗಿದ್ದು, ಸಂದೀಪ್ ಉನ್ನಿಕೃಷ್ಣನ್ ಪೋಷಕರು ತಮ್ಮ ಮಗನ ಕುರಿತಾದ ಸಿನಿಮಾ ನೋಡಿ ಭಾವುಕರಾಗಿದ್ದಾರೆ.
ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ವಿಶೇಷ ಶೋನಲ್ಲಿ ತಮ್ಮ ಮಗನ ಕುರಿತಾದ ಸಿನಿಮಾ ನೋಡಿರುವ ಸಂದೀಪ್ ಉನ್ನಿಕೃಷ್ಣನ್ ಪೋಷಕರು, ಸಿನಿಮಾವನ್ನು ಮನಸಾರೆ ಹೊಗಳಿದ್ದಾರೆ. ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಸಿನಿಮಾ ವೀಕ್ಷಿಸಿ ಮಾಧ್ಯಮದವರೊಟ್ಟಿಗೆ ಮಾತನಾಡಿದ ಸಂದೀಪ್ ಉನ್ನಿಕೃಷ್ಣನ್ ತಂದೆ ಕೆ ಉನ್ನಿಕೃಷ್ಣನ್, ''ಆವು ಅನುಭವಿಸಿದ್ದನ್ನು, ನೊಂದದ್ದನ್ನು ಹೆಮ್ಮೆ ಪಟ್ಟಿದ್ದನ್ನು ಸಿನಿಮಾ ಮೂಲಕ ಎಲ್ಲರಿಗೂ ತಲುಪಿಸುತ್ತಿದ್ದಾರೆ. ಇಂಥಹದ್ದೊಂದು ಅದ್ಭುತವಾದ ಸಿನಿಮಾವನ್ನು ತೆಲುಗು, ಹಿಂದಿಯಲ್ಲಿ ಮಾಡಿರುವ ಚಿತ್ರತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ'' ಎಂದಿದ್ದಾರೆ.

''ಎಷ್ಟು ಚೆನ್ನಾಗಿ ಇವರು ಸಿನಿಮಾ ಮಾಡಿದ್ದಾರೆಂದರೆ ನಾವು ನಮ್ಮ ದುಃಖವನ್ನು ಸಹ ಮರೆತು ಹೋಗುತ್ತೇವೆ. ಕೆಲವರು ಹೇಳುತ್ತಿದ್ದರು, ಸಂದೀಪ್ ಅಂದು ಘಟನಾ ಸ್ಥಳಕ್ಕೆ ಹೋದ ಹಾಗೂ ಅಚಾನಕ್ ಸತ್ತು ಹೋದ ಎಂದು. ಆದರೆ ಅದು ನಿಜವಲ್ಲ, ಅದು ನಿಜವಲ್ಲ, ಆತ ತನ್ನ ಅಂತಿಮ ಕ್ಷಣದ ವರೆಗೆ ಹೋರಾಡಿದ. ಈಗ ಎಷ್ಟೋಂದು ಜನರಿಗೆ ಆತ ಸ್ಪೂರ್ತಿ ತುಂಬುತ್ತಿದ್ದಾನೆ. ಸಂದೀಪ್ ಬಗ್ಗೆ ಸಿನಿಮಾ ಮಾಡಿರುವ ಇಡೀ ಚಿತ್ರತಂಡಕ್ಕೆ ಅಭಿನಂದನೆ ಹೇಳಲೇ ಬೇಕು'' ಎಂದಿದ್ದಾರೆ ಕೆ ಉನ್ನಿಕೃಷ್ಣನ್.

'ನಿರ್ದೇಶಕ, ನಟನೆ, ಸೌಂಡ್ ಸಿಸ್ಟಮ್, ಎಡಿಟಿಂಗ್, 'ಮೇಜರ್' ಸಿನಿಮಾದಲ್ಲಿ ಎಲ್ಲವೂ ಚೆನ್ನಾಗಿದೆ. ಚಿತ್ರತಂಡ ನಮ್ಮ ಮನೆಗೆ ಬಂದಿತ್ತು. ಎಲ್ಲ ಚಿತ್ರಗಳನ್ನು ಸ್ಕ್ಯಾನ್ ಮಾಡಿಕೊಂಡು ಹೋಗಿದ್ದರು. ಆ ಚಿತ್ರಗಳೆಲ್ಲ ಬಹಳ ಹಾಳಾಗಿದ್ದವು. ಆದರೆ ಅವಕ್ಕೆ ಅವರು ಮರುರೂಪ ನೀಡಿ ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ. ನನಗೆ ಬಹಳ ಹೆಮ್ಮೆಯಾಗುತ್ತಿದೆ'' ಎಂದಿದ್ದಾರೆ ಉನ್ನಿಕೃಷ್ಣನ್.
ಸಂದೀಪ್ ಉನ್ನಿಕೃಷ್ಣನ್ ಕುರಿತಾದ 'ಮೇಜರ್' ಸಿನಿಮಾವನ್ನು ತೆಲುಗಿನಲ್ಲಿ ನಿರ್ಮಿಸಲಾಗಿದ್ದು, ಸಿನಿಮಾ ಇಂದಷ್ಟೆ (ಮೇ 03) ಬಿಡುಗಡೆ ಆಗಿದೆ. ಸಂದೀಪ್ ಉನ್ನಿಕೃಷ್ಣ ಪಾತ್ರದಲ್ಲಿ ಅಡವಿ ಶೇಷ ನಟಿಸಿದ್ದಾರೆ. ಸಿನಿಮಾ ಬರದೆರಿವುದು ಸಹ ಅವರೇ, ನಿರ್ದೇಶನವನ್ನು ಸಾಶಿ ಕಿರಣ್ ಟಿಕ್ಕಾ ಮಾಡಿದ್ದಾರೆ. ಸಿನಿಮಾದಲ್ಲಿ ಸಂದೀಪ್ ತಂದೆಯ ಪಾತ್ರದಲ್ಲಿ ಪ್ರಕಾಶ್ ರೈ ನಟಿಸಿದ್ದಾರೆ. ಸಂದೀಪ್ ತಾಯಿ ಪಾತ್ರದಲ್ಲಿ ಸೋಭಿತಾ ದುಲಿಪಾಲ ನಟಿಸಿದ್ದಾರೆ. ಸಿನಿಮಾವನ್ನು ನಟ ಮಹೇಶ್ ಬಾಬು ಸಹ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











