ನಾನು ಹೀರೋಯಿನ್ ಆಗಬಾರ್ದು ಅಂತ ನೋಡ್ದ, ಬಳಿಕ ಹುಚ್ಚನಾದ, ಕೊನೆಗೆ ಅಪಘಾತದಲ್ಲಿ ಸತ್ತ- ಸಂಜನಾ
ಕನ್ನಡ ನಟಿ ಸಂಜನಾ ಗರ್ಲಾನಿ ಈಗ ತೆಲುಗು ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿದ್ದಾರೆ. 4 ತಿಂಗಳ ಹಿಂದೆ 2ನೇ ಮಗುವಿಗೆ ಜನ್ಮ ನೀಡಿದ್ದ ಸಂಜನಾ ಮಗುಬಿಟ್ಟು ದೊಡ್ಮನೆ ಒಳಗೆ ಹೋಗಿರುವುದು ಅಚ್ಚರಿ ಮೂಡಿಸಿತ್ತು. ಇದೆಲ್ಲದರ ನಡುವೆ ಇತ್ತೀಚೆಗೆ ತಮ್ಮ ಕಾಲೇಜ್ ಲವ್‌ಸ್ಟೋರಿ ಬಗ್ಗೆ ಬಿಗ್‌ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ.
ನಾನು ಹೀರೊಯಿನ್ ಆಗಬಾರದು ಎಂದು ನನ್ನ ಬಾಯ್‌ಫ್ರೆಂಡ್ ಪ್ರಯತ್ನಿಸಿದ್ದ ಎಂದು ಸಂಜನಾ ಹೇಳಿದ್ದಾರೆ. ಬಿಗ್‌ಬಾಸ್ ತೆಲುಗು ಸೀಸನ್- 9 ಸೆಪ್ಟೆಂಬರ್ 7ರಂದು ಶುರುವಾಗಿತ್ತು. 12 ವರ್ಷಗಳ ಹಿಂದೆ ಬಿಗ್‌ಬಾಸ್ ಕನ್ನಡ ಸೀಸನ್ 1ರಲ್ಲಿ ಸಂಜನಾ ಸ್ಪರ್ಧಿಯಾಗಿದ್ದರು. ಹಾಗಾಗಿ ಒಳಗಿನ ಆಟ ಆಕೆಗೆ ಚೆನ್ನಾಗಿ ಗೊತ್ತಿದೆ. ಇದೇ ಕಾರಣಕ್ಕೆ ಇತರೆ ಸ್ಪರ್ಧಿಗಳಿಗೆ ಕಠಿಣ ಪೈಪೋಟಿ ಕೊಡುತ್ತಿದ್ದಾರೆ.

ಬಿಗ್‌ಬಾಸ್ ತೆಲುಗು ಸೀಸನ್ 9 ಇದೀಗ 2 ವಾರ ಮುಗಿಸಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಶ್ರೀಜಾ, ಕಲ್ಯಾಣ್, ರಿತು ಚೌಧರಿ, ಫ್ಲೋರಾ, ರಾಮು ರಾಥೋಡ್ ಮತ್ತು ಹರೀಶ್ ಈ ವಾರ ನಾಮಿನೇಟ್ ಆಗಿದ್ದಾರೆ. ಇನ್ನು ಮನೆಯಲ್ಲಿರುವ ಸ್ಪರ್ಧಿಗಳು ತಮ್ಮ ಜೀವನದ ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಮುಖ್ಯವಾಗಿ ಸಂಜನಾ ತಮ್ಮ ಕಾಲೇಜು ದಿನಗಳ ಲವ್ ಸ್ಟೋರಿ ನೆನಪಿಸಿಕೊಂಡಿದ್ದಾರೆ.
"ನಾನು ಕಾಲೇಜಿನಲ್ಲಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೆ. ಬಳಿಕ ಆತನಿಂದ ಸಂಕಷ್ಟಕ್ಕೆ ಸಿಲುಕಿದ್ದೆ" ಎಂದು ಸಂಜನಾ ಹೇಳಿದ್ದಾರೆ. "ನಾನು ಪ್ರೀತಿಸಿದ ಯುವಕ ನನ್ನನ್ನು ಹೊಡೆಯಲು ಪ್ರಯತ್ನಿಸಿದ್ದ. ನನ್ನ ತಲೆಗೆ ಹೊಡೆದರೆ ಮುಖಕ್ಕೆ ಹೊಲಿಗೆ ಹಾಕುತ್ತಾರೆ. ಅದರಿಂದ ಮುಖ ಕೆಟ್ಟದಾಗಿ ಕಂಡು ಸಿನಿಮಾ ಹೀರೊಯಿನ್ ಆಗಲು ಸಾಧ್ಯವಾಗುವುದಿಲ್ಲ, ಆಗ ನಾನು ಮದುವೆ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದ" ಎಂದಿದ್ದಾರೆ.
ಮಾತು ಮುಂದುವರೆಸಿರುವ ಸಂಜನಾ "ಬಳಿಕ ನಮ್ಮಿಬ್ಬರಿಗೆ ಜಗಳವಾಯಿತು. ನನ್ನನ್ನು ಬಿಟ್ಟು ಹೋದಮೇಲೆ ಹುಚ್ಚನಂತಾದ. ದಟ್ಟ ಗಡ್ಡ ಮತ್ತು ಮೀಸೆ ಬೆಳೆಸಿ, ಹುಚ್ಚನಂತೆ ತಿರುಗಾಡಿದ. ಕೊನೆಗೊಂದು ದಿನ ಕಾರು ಚಾಲನೆ ಮಾಡುವಾಗ ಅಪಘಾತದಲ್ಲಿ ಸತ್ತ" ಎಂದು ಸಂಜನಾ ಗರ್ಲಾನಿ ಹೇಳಿರುವುದು ವೈರಲ್ ಆಗುತ್ತಿದೆ.
ಸಂಜನಾ ಬಹಳ ಹಿಂದೆಯೇ ಮಾಡೆಲಿಂಗ್ ಆರಂಭಿಸಿದ್ದರು. ಜಾಹೀರಾತುಗಳಲ್ಲಿ ನಟಿಸುತ್ತಿದ್ದರು. 2005ರಲ್ಲಿ 'ಸೊಗ್ಗಾಡು' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಮರುವರ್ಷ ಕನ್ನಡದ 'ಗಂಡ ಹೆಂಡತಿ' ಚಿತ್ರದಲ್ಲಿ ಮಿಂಚಿದ್ದರು. ಬಾಲಿವುಡ್‌ನಲ್ಲಿ ಬಂದಿದ್ದ 'ಮರ್ಡರ್' ಚಿತ್ರದ ರೀಮೆಕ್ ಅದಾಗಿತ್ತು. ಮೊದಲ ಚಿತ್ರದಲ್ಲೇ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿ ಹುಬ್ಬೇರಿಸಿದ್ದರು. ಮುಂದೆ 'ಗಂಡ ಹೆಂಡತಿ' ಸಂಜನಾ ಎಂದೇ ಜನಪ್ರಿಯರಾಗಿಬಿಟ್ಟರು.
'ಅರ್ಜುನ್', 'ಬುಜ್ಜಿಗಾಡು', 'ಮಸ್ತ್ ಮಜಾ ಮಾಡಿ', 'ಕೋ ಕೋ', 'ನರಸಿಂಹ', 'ಮಹಾನದಿ', 'ರಿಂಗ್ ರೋಡ್', 'ದಂಡುಪಾಳ್ಯ-2' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಸಂಜನಾ ಬಣ್ಣ ಹಚ್ಚಿದ್ದಾರೆ. ಆಕೆಗೆ ದೊಡ್ಡ ಬ್ರೇಕ್ ಸಿಗಲೇಯಿಲ್ಲ. ಬಹುತೇಕ ಸಿನಿಮಾಗಳಲ್ಲಿ ಗ್ಲಾಮರ್ ಗೊಂಬೆಯಾಗಿಯೇ ಮಿಂಚಿದರು. ಎರಡು ವೆಬ್ ಸೀರಿಸ್‌ಗಳಲ್ಲಿ ಕೂಡ ಸಂಜನಾ ನಟಿಸಿದ್ದಾರೆ. ಕೆಲ ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಸಂಜನಾ ಕಾಣಿಸಿಕೊಂಡಿದ್ದರು.
ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಕೂಡ ಸಂಜನಾ ಹೆಸರು ಕೇಳಿಬಂದಿತ್ತು. ಜೈಲುವಾಸ ಕೂಡ ಅನುಭವಿಸಿ ಬರುವಂತಾಗಿತ್ತು. ಸಂಜನಾ ಸಹೋದರಿ ನಿಕ್ಕಿ ಗರ್ಲಾನಿ ಕೂಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. 2021ರಲ್ಲಿ ಅಜೀಜ್ ಪಾಷಾ ಎಂಬುವವರನ್ನು ಸಂಜನಾ ಮದುವೆ ಆಗಿದ್ದರು. ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ.
ಮದುವೆ ಬಳಿಕ ಫ್ಯಾಮಿಲಿ, ಮಕ್ಕಳ ಲಾಲನೆಯಲ್ಲಿ ಬ್ಯುಸಿಯಾಗಿದ್ದ ಸಂಜನಾ ಗರ್ಲಾನಿ ಅಚ್ಚರಿ ಎನ್ನುವಂತೆ ತೆಲುಗು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ತಮ್ಮ ಉತ್ತಮ ಆಟದಿಂದ ಗಮನ ಸೆಳೆದಿದ್ದಾರೆ.


Click it and Unblock the Notifications











