"ಬರೆದಿಟ್ಟುಕೊಳ್ಳಿ 'ಸಲಾರ್' ಸಿನಿಮಾ 2000 ಕೋಟಿ ರೂ. ಕಲೆಕ್ಷನ್ ಮಾಡುತ್ತೆ": ಸಪ್ತಗಿರಿ
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಪ್ರಭಾಸ್ ಹೀರೊ ಆಗಿ ಅಬ್ಬರಿಸಿರುವ ಸಿನಿಮಾ ಟೀಸರ್ 2 ದಿನಕ್ಕೆ 10 ಕೋಟಿಗೂ ಅಧಿಕ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ ಚಿತ್ರ ಸೆಪ್ಟೆಂಬರ್ 28ಕ್ಕೆ ತೆರೆಗಪ್ಪಳಿಸಲಿದೆ. ಸದ್ಯ 'ಸಲಾರ್' ಸಿನಿಮಾ ಡಬ್ಬಿಂಗ್ ಕಾರ್ಯ ಭರದಿಂದ ಸಾಗಿದೆ.
'KGF' ಸರಣಿಗೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡ್ತಿದೆ. 'KGF' ಚಾಪ್ಟರ್-2 ಮೀರಿಸುವಂತಹ ಚಿತ್ರಕ್ಕೆ ಪ್ರಶಾಂತ್ ನೀಲ್ ಕೈ ಹಾಕಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸಾಥ್ ಸಿಕ್ಕಿದೆ. ಇಬ್ಬರು ಸೇರಿ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸೋ ಪ್ರಯತ್ನದಲ್ಲಿದ್ದಾರೆ. ಅಂದಾಜು 400 ಕೋಟಿ ರೂ. ವೆಚ್ಚದಲ್ಲಿ 'ಸಲಾರ್' ಸಿನಿಮಾ ನಿರ್ಮಾಣವಾಗ್ತಿದೆ. ವಿದೇಶಗಳಲ್ಲೂ ಚಿತ್ರದ ವಿಎಫ್ಎಕ್ಸ್ ಕೆಲಸ ನಡೆದಿದ್ದು, ಆಕ್ಷನ್ ದೃಶ್ಯಗಳಲ್ಲಿ ಬೇರೆ ದೇಶಗಳಿಂದ ಬಂದ ಹಲವು ನುರಿತ ಸಾಹಸ ಕಲಾವಿದರು ದುಡಿದಿದ್ದಾರೆ.

'ಸಲಾರ್' ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಮಿಕ್ಕಂತೆ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ತಾರಾಗಣದಲ್ಲಿದ್ದಾರೆ. ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ.
2000 ಕೋಟಿ ರೂ. ಕಲೆಕ್ಷನ್
ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ 'ಸಲಾರ್' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ತೆಲುಗು ಹಾಸ್ಯನಟ ಸಪ್ತಗಿರಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತಮ್ಮ ಪಾತ್ರದ ಡಬ್ಬಿಂಗ್ ಮುಗಿಸಿರುವುದಾಗಿ ಸಪ್ತಗಿರಿ ಮಾಹಿತಿ ನೀಡಿದ್ದು 'ಸಲಾರ್' ಸಿನಿಮಾ 2000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕಾನ್ಫಿಡೆಂಟ್ ಆಗಿ ಇದ್ದು ಡಬಲ್ ಬ್ಲಾಕ್‌ಬಸ್ಟರ್ ಆಗೋದು ಗ್ಯಾರೆಂಟಿ ಎಂದಿದ್ದಾರೆ.

2 ಭಾಗಗಳಾಗಿ ಸಿನಿಮಾ ರಿಲೀಸ್
ಬಹಳ ದಿನಗಳಿಂದ 'ಸಲಾರ್' ಸಿನಿಮಾ 2 ಭಾಗಗಳಾಗಿ ತೆರೆಗೆ ಬರುವ ಬಗ್ಗೆ ಚರ್ಚೆ ನಡೀತಿದೆ. ಟೀಸರ್‌ನಲ್ಲಿ ಆ ವಿಚಾರವನ್ನು ಹೊಂಬಾಳೆ ಸಂಸ್ಥೆ ಖಚಿತಪಡಿಸಿದೆ. ಮೊದಲ ಭಾಗ 'ಸಲಾರ್ ಪಾರ್ಟ್ 1: ಸೀಸ್ ಫೈರ್' ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. 2ನೇ ಭಾಗ ಯಾವಾಗ ಎನ್ನುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಇನ್ನು 5 ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ.
ಆಗಸ್ಟ್ ಕೊನೆ ವಾರ ಟ್ರೈಲರ್
'ಸಲಾರ್' ಟೀಸರ್ 2 ದಿನಕ್ಕೆ 10 ಕೋಟಿ ವೀವ್ಸ್ ಸಾಧಿಸಿದರೂ ಕೂಡ ಅಭಿಮಾನಿಗಳ ಮನಗೆಲ್ಲುವಲ್ಲಿ ವಿಫಲವಾಗಿದೆ. ಚಿತ್ರದ ಫಸ್ಟ್ ಗ್ಲಿಂಪ್ಸ್ ಬಗ್ಗೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಟೀಸರ್ ಆ ನಿರೀಕ್ಷೆ ತಲುಪಲಿಲ್ಲ. ಸದ್ಯ ಸಿನಿಮಾ ಟ್ರೈಲರ್ ಬಗ್ಗೆ ಭಾರೀ ಕುತೂಹಲ ಇದೆ. ಆಗಸ್ಟ್ ಕೊನೆ ವಾರದಲ್ಲಿ ಟ್ರೈಲರ್ ರಿಲೀಸ್ ಮಾಡೋದಾಗಿ ಹೊಂಬಾಳೆ ಸಂಸ್ಥೆಯೇ ಘೋಷಿಸಿದೆ. ಅಭಿಮಾನಿಗಳು ಆ ದಿನಕ್ಕಾಗಿ ಕಾಯುವಂತಾಗಿದೆ.
'ಸಲಾರ್' ನಂಬಿಕೊಂಡ ಅಭಿಮಾನಿಗಳು
'ಬಾಹುಬಲಿ' ಸರಣಿ ನಂತರ ಪ್ರಭಾಸ್ ನಟಿಸಿದ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಚೆನ್ನಾಗಿದ್ದರೂ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಹಿಂದೆ ಬಿದ್ದಿವೆ. 'ಸಾಹೋ', 'ರಾಧೆಶ್ಯಾಮ್' ಬಳಿಕ ಬಂದ 'ಆದಿಪುರುಷ್' ಚಿತ್ರ ಕೂಡ ಮುಗ್ಗರಿಸಿತ್ತು. ಹಾಗಾಗಿ ಪ್ರಭಾಸ್ ಅಭಿಮಾನಿಗಳು ಸಲಾರ್ ಸಿನಿಮಾ ಮೇಲೆ ಬಹಳ ನಂಬಿಕೆ ಇಟ್ಟುಕೊಂಡಿದ್ದಾರೆ.


Click it and Unblock the Notifications











