ಪ್ರಭಾಸ್ vs ಮಹೇಶ್ ಬಾಬು: ಸಂಕ್ರಾಂತಿ ಹಬ್ಬದಲ್ಲಿ 'ಬಿಗ್' ವಾರ್
ಸ್ಯಾಂಡಲ್‌ವುಡ್ ನಿರೀಕ್ಷೆಯ ಚಿತ್ರಗಳು ಬಹುತೇಕ ಈ ವರ್ಷದ ಅಂತ್ಯದೊಳಗೆ ಚಿತ್ರಮಂದಿರಕ್ಕೆ ಬರಲಿದೆ. ಬಹುಶಃ ಸಂಕ್ರಾಂತಿ ಹಬ್ಬಕ್ಕೆ ಕನ್ನಡದಲ್ಲಿ ಯಾವ ಸಿನಿಮಾ ರಿಲೀಸ್ ಆಗಬಹುದು ಎಂಬುದಕ್ಕೆ ಸದ್ಯಕ್ಕೆ ಉತ್ತರ ಇಲ್ಲ. ಆದರೆ, ಸೌತ್ ಇಂಡಸ್ಟ್ರಿ ಬಾಕ್ಸ್ ಆಫೀಸ್‌ನಲ್ಲಿ ಮೆಗಾ ವಾರ್ ಆಗುವ ಎಲ್ಲಾ ಸೂಚನೆ ಸಿಕ್ಕಿದೆ.
ಭಾರತೀಯ ಸಿನಿಮಾರಂಗದ ಎರಡು ನಿರೀಕ್ಷೆಯ ಚಿತ್ರಗಳು ಏಕಕಾಲಕ್ಕೆ ಚಿತ್ರಮಂದಿರಗಳಿಗೆ ಬರ್ತಿದೆ. ಒಂದು ದಿನದ ಅಂತರದಲ್ಲಿ ಎರಡು ದೊಡ್ಡ ಪ್ರಾಜೆಕ್ಟ್‌ಗಳು ಪ್ರೇಕ್ಷಕರೆದುರು ಬರ್ತಿದ್ದು, ಇದರಿಂದ ಸಹಜವಾಗಿ ಬಾಕ್ಸ್ ಅಫೀಸ್‌ನಲ್ಲಿ ಫೈಟ್ ಆಗಲಿದೆ.
ಈಗಷ್ಟೇ ಪ್ರಕಟವಾಗಿರುವ ಮಾಹಿತಿ ಪ್ರಕಾರ, ಪ್ರಿನ್ಸ್ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಚಿತ್ರ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಜನವರಿ 13, 2022 ರಂದು ತೆರೆಗೆ ಬರ್ತಿದೆ. ಸ್ವತಃ ಮಹೇಶ್ ಬಾಬು ಅವರೇ ತಮ್ಮ ಮುಂದಿನ ಸಿನಿಮಾ ರಿಲೀಸ್ ದಿನಾಂಕ ಘೋಷಿಸಿದ್ದಾರೆ.

ಸರ್ಪ್ರೈಸ್ ಅಂದ್ರೆ ಪ್ರಭಾಸ್ ಅಭಿನಯ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ್ ಸಹ ಜನವರಿ 14, 2022ಕ್ಕೆ ಬಿಡುಗಡೆಯಾಗುತ್ತಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಹೀಗೆ 5 ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ಇತ್ತೀಚಿಗಷ್ಟೆ 'ರಾಧೆ ಶ್ಯಾಮ್' ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸಲಾಗಿತ್ತು.
ಹೀಗೆ ಒಂದು ದಿನದ ಅಂತರದಲ್ಲಿ ಎರಡು ಮೆಗಾ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿರುವುದು ಸಹಜವಾಗಿ ಚಿತ್ರಪ್ರೇಮಿಗಳಿಗೆ ಹಬ್ಬದ ಮೆರಗನ್ನು ಹೆಚ್ಚಿಸಲಿದೆ. ಆದರೆ, ಬಾಕ್ಸ್ ಆಫೀಸ್ ಆಯಾಮದಲ್ಲಿ ನೋಡಿದಾಗ ಯಾವ ಸಿನಿಮಾದ ಗಳಿಕೆ ಹೆಚ್ಚಾಗಬಹುದು ಎಂಬ ಲೆಕ್ಕಾಚಾರವೂ ಈಗಲೇ ಶುರುವಾಗಿದೆ.

ಸರ್ಕಾರು ವಾರಿ ಪಾಟ ಚಿತ್ರದ ಬಗ್ಗೆ
'ಸರಿಲೇರು ನೀಕೆವ್ವರು' ಸಿನಿಮಾದ ಗೆಲುವಿನ ನಂತರ ಮಹೇಶ್ ಬಾಬು ಪರುಶರಾಮ್ ಕಾಂಬಿನೇಷನ್‌ನಲ್ಲಿ ಬರ್ತಿರುವ ಚಿತ್ರ 'ಸರ್ಕಾರು ವಾರಿ ಪಾಟ'. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರ ನಿರ್ಮಿಸುತ್ತಿದ್ದು, ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಅಂದ್ಹಾಗೆ, ಮಹೇಶ್ ಬಾಬು ಜೊತೆ ಮೊದಲ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸುತ್ತಿರುವುದು ಸಹಜವಾಗಿ ಥ್ರಿಲ್ ಹೆಚ್ಚಿಸಿದೆ. ಎಸ್ ತಮನ್ ಸಂಗೀತ ನಿರ್ದೇಶನ ಮಾಡಿದ್ದು, ಬಿಡುಗಡೆಗೂ ಮುಂಚೆಯೇ ಚಿತ್ರದ ಆಡಿಯೋ ಹಕ್ಕು ದಾಖಲೆ ಬೆಲೆಗೆ ಮಾರಾಟವಾಗಿದೆಯಂತೆ. ಈ ಚಿತ್ರ ಮುಗಿಯುತ್ತಿದ್ದಂತೆ ತ್ರಿವಿಕ್ರಮ್ ನಿರ್ದೇಶನದಲ್ಲಿ ಮಹೇಶ್ ಬಾಬು ಹೊಸ ಪ್ರಾಜೆಕ್ಟ್ ಆರಂಭಿಸಲಿದ್ದಾರೆ. ಈ ಸಿನಿಮಾದ ಪೂರ್ವ ತಯಾರಿ ಸಹ ನಡೆದಿದೆ.

ರಾಧೆ ಶ್ಯಾಮ್ ಚಿತ್ರದ ಬಗ್ಗೆ
ಪ್ರಭಾಸ್ ಕೊನೆಯದಾಗಿ ಸಾಹೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 2019ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಪ್ರಭಾಸ್ ಪಾಲಿಗೆ ಈ ಚಿತ್ರ ಅಷ್ಟಾಗಿ ಸಕ್ಸಸ್ ಕೊಡಲಿಲ್ಲ. ಈ ಚಿತ್ರದ ಬಳಿಕ ಥಿಯೇಟರ್‌ಗೆ ಲಗ್ಗೆಯಿಡ್ತಿರುವ ರಾಧೆ ಶ್ಯಾಮ್ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾ ಬಿಟ್ಟು ಪ್ರಭಾಸ್ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್, ಆದಿಪುರುಷ್ ಹಾಗೂ ನಾಗ್ ಅಶ್ವಿನ್ ಜೊತೆ ಪ್ರಭಾಸ್21 ಕೈಯಲ್ಲಿದೆ.
ಈ ಎರಡು ಚಿತ್ರಗಳ ಜೊತೆ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ನಟಿಸುತ್ತಿರುವ ಹೊಸ ಸಿನಿಮಾನೂ ಅದೇ ದಿನಕ್ಕೆ ತೆರೆಗೆ ಬರಲಿದೆ ಎಂದು ವರದಿಯಾಗಿದೆ. ಪ್ರಸ್ತುತ, ಈ ಚಿತ್ರ ಶೂಟಿಂಗ್ ಮಾಡ್ತಿದೆ.
ಈ ಸಿನಿಮಾಗಳ ಜೊತೆ ವಿಕ್ಟರಿ ವೆಂಕಟೇಶ್ ಮತ್ತು ವರುಣ್ ತೇಜ ನಟಿಸಿರುವ 'ಎಫ್3' ಸಿನಿಮಾನೂ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ. ಅನಿಲ್ ರವಿಪುಡಿ ಈ ಚಿತ್ರ ನಿರ್ದೇಶನ ಮಾಡಿದ್ದು, ತಮನ್ನಾ ಮತ್ತು ಮೆಹ್ರೀನ್ ನಾಯಕಿಯರಾಗಿ ನಟಿಸಿದ್ದಾರೆ.


Click it and Unblock the Notifications











