ವಿವಾದಾಸ್ಪದ ಡೈಲಾಗ್: ಕ್ಷಮೆ ಕೇಳಿದ 'ಸರ್ಕಾರು ವಾರಿ ಪಾಟ' ನಿರ್ದೇಶಕ
ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಹಿಟ್ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದರೂ ಸಹ ಗಳಿಕೆಯಲ್ಲಿ ಸಿನಿಮಾ ಹಿಂದೆ ಬಿಂದಿಲ್ಲ.
ಸಿನಿಮಾ ಬಿಡುಗಡೆ ಆಗುವ ಮುಂಚೆ ಹಾಗೂ ಬಿಡುಗಡೆ ಆದಾಗಿನಿಂದಲೂ ಸಿನಿಮಾದಲ್ಲಿನ ಕೆಲವು ಅಂಶಗಳಿಗಾಗಿ ವಿವಾದಕ್ಕೆ ಕಾರಣವಾಗುತ್ತಲೇ ಇದೆ.
ಸಿನಿಮಾ ಬಿಡುಗಡೆಗೆ ಮುನ್ನ ಮಹೇಶ್ ಬಾಬು, ಬಾಲಿವುಡ್ ಬಗ್ಗೆ ನೀಡಿದ್ದ ಕೆಲವು ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ಸಿನಿಮಾ ಬಿಡುಗಡೆಗೆ ಬಳಿಕ, ಸಿನಿಮಾದಲ್ಲಿನ ಕೆಲವು ದೃಶ್ಯಗಳ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಸಿನಿಮಾದಲ್ಲಿನ ಒಂದು ಸಂಭಾಷಣೆ ಕುರಿತು ವಿವಾದ ಎದ್ದಿದ್ದು, ನಿರ್ದೇಶಕ ಕ್ಷಮೆ ಕೇಳಿದ್ದಾರೆ.

ಸಮುದ್ರಕಿಣಿ ಹೇಳುವ ಡೈಲಾಗ್ ವಿವಾದವಾಗಿತ್ತು
ಸಿನಿಮಾದಲ್ಲಿ ಖಳನಟನ ಪಾತ್ರಧಾರಿ ಸಮುದ್ರಕಿಣಿ ಡೈಲಾಗ್ ಒಂದನ್ನು ಹೇಳುತ್ತಾರೆ. ತಮ್ಮನ್ನು ತಾವು ಹಿಂಹಾಚಲಂ ಶ್ರೀ ವರಾಹ ಲಕ್ಷ್ಮಿನರಸಿಂಹ ಸ್ವಾಮಿ ಜೊತೆ ತಮ್ಮನ್ನು ತಾವು ಹೋಲಿಸಿಕೊಳ್ಳುತ್ತಾರೆ. ಈ ಸಂಭಾಷಣೆಗೆ ವರಾಹ ಲಕ್ಷ್ಮಿನರಸಿಂಹ ಸ್ವಾಮಿ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖಳನಟನೊಬ್ಬನಿಗೆ ದೇವರೊಟ್ಟಿಗೆ ಹೋಲಿಸಿರುವುದು ಸರಿಯಲ್ಲ ಎಂದಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿಯೂ ಸಹ ಈ ಸಂಭಾಷಣೆಗೆ ಆಕ್ಷೇಪ ವ್ಯಕ್ತಪಡಿಸಿದೆ.

ಕ್ಷಮೆ ಕೇಳಿದ ನಿರ್ದೇಶಕ
ಇದೇ ಕಾರಣವಾಗಿ ಶ್ರೀ ವರಾಹ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟಿದ್ದ ಸಿನಿಮಾದ ನಿರ್ದೇಶಕ ಪರಶುರಾಮ್, ದೇವರ ದರ್ಶನ ಮಾಡಿ ವಿಶೇಷ ಪೂಜೆ ಮಾಡಿಸಿದ್ದಾರೆ. ದೇವಾಲಯದ ಭೇಟಿ ಸಂದರ್ಭ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಪರಶುರಾಮ್, ''ಉದ್ದೇಶಪೂರ್ವಕವಾಗಿ ಅಥವಾ ಭಕ್ತರಿಗೆ ಬೇಸರ ಮೂಡಿಸುವ ಕಾರಣಕ್ಕೆ ಆ ಸಂಭಾಷಣೆ ಬರೆದಿದ್ದಲ್ಲ. ಒಂದೊಮ್ಮೆ ನಮ್ಮ ಸಿನಿಮಾದ ಸಂಭಾಷಣೆಯಿಂದ ಭಕ್ತರಿಗೆ ಬೇಸರವಾಗಿದ್ದರೆ ಕ್ಷಮೆ ಕೇಳುವೆ'' ಎಂದಿದ್ದಾರೆ.

ಕಾಲಿನಿಂದ ನಾಯಕಿಯ ಮೈಮುಟ್ಟಿದ್ದು ವಿವಾದ
ಸಿನಿಮಾದ ಮತ್ತೊಂದು ದೃಶ್ಯದ ಬಗ್ಗೆಯೂ ವಿವಾದವಾಗಿತ್ತು, ಸಿನಿಮಾದಲ್ಲಿ ನಾಯಕ ಮಹೇಶ್ ಬಾಬು, ಬಲವಂತವಾಗಿ ನಾಯಕಿಯನ್ನು ತನ್ನ ಪಕ್ಕ ಮಲಗುವಂತೆ ಮಾಡುತ್ತಾನೆ ಹಾಗೂ ತನ್ನ ಕಾಲನ್ನು ನಾಯಕಿಯ ಮೈಮೇಲೆ ಹಾಕುತ್ತಾನೆ ಇದರ ಬಗ್ಗೆಯೂ ಆಕ್ಷೇಪಣೆ ವ್ಯಕ್ತವಾಗಿತ್ತು. ಇದಕ್ಕೆ ಬಾಲಿಷ ಉತ್ತರ ನೀಡಿದ್ದ ಪರಶುರಾಮ್, ಮಗುವೊಬ್ಬ ತಾಯಿಯ ಪಕ್ಕ ಮಲಗಲು ಆಸೆ ಪಡುವಂತೆ, ನಾಯಕ, ನಾಯಕಿಯ ಪಕ್ಕ ಮಲಗಲು ಆಸೆ ಪಡುತ್ತಾನೆ ಅಷ್ಟೆ ಎಂದು ಉತ್ತರಿಸಿದ್ದರು. ಪರಶುರಾಮ್ ಉತ್ತರದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು ನೆಟ್ಟಿಗರು.

ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾದ ಸಿನಿಮಾ
'ಸರ್ಕಾರು ವಾರಿ ಪಾಟ' ಸಿನಿಮಾವು ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಚರ್ಚೆ ಮಾಡುವ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಮಹೇಶ್ ಬಾಬು, ಕೀರ್ತಿ ಸುರೇಶ್ ನಟಿಸಿದ್ದಾರೆ. ಸಮುದ್ರಕಿಣಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಪರಶುಮಾರ್ ನಿರ್ದೇಶನದ ಈ ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದಾರೆ. ಸಿನಿಮಾವು 12 ಮೇನಂದು ಬಿಡುಗಡೆ ಆಗಿದ್ದು, ಸುಮಾರು 200 ಕೋಟಿಗೂ ಹೆಚ್ಚು ಹಣ ಗಳಿಸಿದೆ.


Click it and Unblock the Notifications











