ಸುಂದರಿಯರ ಮೇಲಿನ ಆಕರ್ಷಣೆ ಸಹಜ ; ಅವಕಾಶಕ್ಕಾಗಿ ಕೆಲವರು ರಾಜಿ ಮಾಡಿಕೊಳ್ತಾರೆ - ಆದರೆ..!
ಪುರುಷ ಪ್ರಧಾನ ಚಿತ್ರರಂಗದಲ್ಲಿ ಅನೇಕ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ನರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಬಣ್ಣದ ಬಣ್ಣದ ಈ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂ*ಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ.
ಆದರೆ ಹೀಗೆ ನಡೆದ ಸಾಕಷ್ಟು ಲೈಂ*ಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತವೆ. ಇನ್ನೂ ಕೆಲವೊಮ್ಮೆ ಪ್ರಜ್ಞಾವಂತ ನಾಯಕಿಯರು ತಮ್ಮ ಛಲದಿಂದ ತೆರೆಮರೆಯ ಕಳ್ಳಾಟ ಬಹಿರಂಗ ಪಡಿಸಿದ್ದಾರೆ. ಕಾಮುಕರ ಮುಖವಾಡ ಕಳಚಿದ್ದಾರೆ. ಒಂದರ್ಥದಲ್ಲಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ.

ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಈ ಕಪಿಮುಷ್ಠಿಯಿಂದ ಪಾರಾಗಿರುತ್ತಾರೆ. ಇವರಿಗೆ ವೈಯಕ್ತಿಕ ಕಹಿ ಅನುಭವ ಆಗಿರುವುದಿಲ್ಲ. ಆದರೆ, ಬೇರೆಯವರು ತಮಗಾದ ಕಹಿ ಅನುಭವವನ್ನು ಇವರ ಎದುರು ಹಂಚಿಕೊಂಡಿರುತ್ತಾರೆ. ಉದಾಹರಣೆಗೆ ಸತ್ಯ ಕೃಷ್ಣನ್.
ಹೌದು, ಸತ್ಯ ಕೃಷ್ಣನ್.. ತೆಲುಗು ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಪಾತ್ರಗಳ ಮೂಲಕವೇ ಜನ ಮನ ಗೆದ್ದ ನಟಿ. ಸಾಮಾನ್ಯವಾಗಿ ಚಿತ್ರರಂಗಕ್ಕೆ ಬರಬೇಕೆಂಬ ಕನಸನ್ನು ಹಲವರು ಕಾಣ್ತಾರೆ. ಆದರೆ ಸತ್ಯ ಕೃಷ್ಣನ್ ಅವರಿಗೆ ಚಿತ್ರರಂಗಕ್ಕೆ ಬರಬೇಕೆಂಬ ಯಾವ ಆಸೆಯೂ ಇರಲಿಲ್ಲ. ಹೋಟೆಲ್ ಮ್ಯಾನೇಜ್‌ಮೆಂಟ್ ಮುಗಿಸಿ, ಪುಣೆಯ ತಾಜ್ ಗ್ರೂಪ್ ಆಫ್ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ನಿರ್ದೇಶಕ ಶೇಖರ್ ಕಮ್ಮುಲ ಅವರ ಕಣ್ಣಿಗೆ ಇವರು ಬಿದ್ದಿದ್ದು ಇಲ್ಲಿಯೇ. ಇಲ್ಲಿಂದ ಇವರ ಬದುಕು ಬದಲಾಯ್ತು.
ಶೇಖರ್ ಕಮ್ಮುಲ ತಮ್ಮ ಮೊದಲ ಚಿತ್ರ ''ಡಾಲರ್ ಡ್ರೀಮ್ಸ್''ನಲ್ಲಿ ಅವಕಾಶ ನೀಡಿದರು. ಈ ಚಿತ್ರದಲ್ಲಿ ಇವರ ಪಾತ್ರ ಚಿಕ್ಕದಾಗಿತ್ತು. ಆದರೆ.. ಆ ನಂತರ ಶೇಖರ್ ಕಮ್ಮಲ ತಮ್ಮ ''ಆನಂದ್'' ಚಿತ್ರದಲ್ಲಿ ಮತ್ತೊಂದು ಅವಕಾಶವನ್ನು ಸತ್ಯ ಕೃಷ್ಣನ್ ಅವರಿಗೆ ನೀಡಿದರು. ನಾಯಕಿ ಕಮಲಿನಿ ಮುಖರ್ಜಿ ಅವರ ಗೆಳತಿಯ ಪಾತ್ರ ಇದು. ಈ ಪಾತ್ರದ ಮೂಲಕ ಸತ್ಯ ಕೃಷ್ಣನ್ ತೆಲುಗು ಚಿತ್ರ ರಸಿಕರ ಮನ ಗೆದ್ದರು. ಇಷ್ಟೇ ಅಲ್ಲ ಪ್ರತಿಷ್ಟಿತ ನಂದಿ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡರು.
ಇದಾದ ನಂತರ ಹೋಟೆಲ್ ಕೆಲಸಕ್ಕೆ ಶಾಶ್ವತವಾಗಿ ಗುಡ್ ಬೈ ಹೇಳಿದ ಸತ್ಯ ಕೃಷ್ಣನ್ ಒಂದಾದ ಮೇಲೊಂದು ಚಿತ್ರಗಳನ್ನು ಮಾಡಿದರು. ''ಬೊಮ್ಮರಿಲ್ಲು''.. ''ಪ್ರಸ್ಥಾನಂ''.. ''ಬೃಂದಾವನಂ''.. ''ದೂಕುಡು''.. ''ಮನಮಂತ''.. ''ವಿನಾಯಕಡು''.. ''ದೇವದಾಸ್''.. ''ಮೋಸ್ಟ್ ಎಲಿಜಿಬಲ್ ಬ್ಯಾಚುಲರ್''.. ಇವರ ಕೆಲ ಪ್ರಖ್ಯಾತ ಸಿನಿಮಾಗಳು.

ಇಂಥಾ ಸತ್ಯ ಕೃಷ್ಣನ್ ಒಂದೆರಡು ವರ್ಷದ ಹಿಂದೆ ''ಐಡ್ರೀಮ್ ಮೀಡಿಯಾ''ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ್ದರು. ಈಗ ಅದೇ ಸಂದರ್ಶನದ ತುಣುಕುಗಳನ್ನು ''ಐಡ್ರೀಮ್'' ಯೂಟ್ಯೂಬ್ ಚಾನೆಲ್ ತನ್ನ ''ಐಡ್ರೀಮ್ ಧರ್ಮವರಂ'' ಎಂಬ ಇನ್ನೊಂದು ಚಾನೆಲ್‌ನಲ್ಲಿ ಪುನಃ ಹಂಚಿಕೊಂಡಿದೆ. ಈ ಹಿನ್ನೆಲೆ ಇವರು ಅಂದು ಆಡಿದ್ದ ಮಾತು ಇಂದು ಮತ್ತೆ ವೈರಲ್ ಆಗಿದೆ.
ಈ ಸಂದರ್ಶನದಲ್ಲಿ ಮಾತನಾಡಿದ್ದ ಸತ್ಯ ಕೃಷ್ಣನ್ ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿ ಇದೆ ಎಂದು ಒಪ್ಪಿಕೊಂಡಿದ್ದರು. ಈ ಸಮಸ್ಯೆ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ ಬದಲಿಗೆ ಎಲ್ಲ ಕ್ಷೇತ್ರದಲ್ಲಿರುವಂತೆ ಇಲ್ಲಿಯೂ ಕೂಡ ಅಲ್ಲಲ್ಲಿ ಹುಳುಕುಗಳಿವೆ ಎಂದು ಹೇಳಿದ್ದ ಸತ್ಯ ಕೃಷ್ಣನ್ ನಾವು ನಮ್ಮ ಜೀವನವನ್ನು ಹೇಗೆ ಎದುರಿಸುತ್ತೇವೆ ಎಂಬುದೇ ಮುಖ್ಯ ಎಂದು ಹೇಳಿದ್ದರು. ತಮಗೆ ವೈಯಕ್ತಿಕವಾಗಿ ಅಂತಹ ಅನುಭವ ಆಗಿಲ್ಲ ಆದರೂ ಅಂತಹ ಪರಿಸ್ಥಿತಿಗಳನ್ನು ಎದುರಿಸಿದವರನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದರು.
ಸುಂದರಿಯರ ಮೇಲಿನ ಆಕರ್ಷಣೆ ಸಹಜ ಎಂದು ಹೇಳಿದ್ದ ಸತ್ಯ ಕೃಷ್ಣನ್ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳುತ್ತೇವೆ ಎಂಬುದೇ ಮುಖ್ಯ ಎಂದು ಹೇಳಿದ್ದರು. ಮಹಿಳೆಯರಿಗೆ ಧೈರ್ಯವಿರಬೇಕು. ಯಾರಾದರೂ ಮಿತಿ ಮೀರಿದರೆ, ತಕ್ಷಣವೇ 'ಬೇಡ' ಎಂದು ಹೇಳಬೇಕು ಎಂದು ಹೇಳಿದ್ದ ಸತ್ಯಕೃಷ್ಣನ್ ಕಮಿಟ್‌ಮೆಂಟ್‌ಗೆ ಒಪ್ಪದಿದ್ದರೆ ಅವಕಾಶಗಳು ಸಿಗುವುದಿಲ್ಲ ಎಂದು ಕೆಲವರು ಮಣಿಯುತ್ತಾರೆ. ಆದರೆ ಅದು ಸರಿಯಾದ ದಾರಿಯಲ್ಲ ಎಂದು ಹೇಳಿದ್ದರು.
ಚಿತ್ರರಂಗದಲ್ಲಿ ನನಗೆ ಅವಕಾಶ ಸಿಗದೇ ಇದ್ದರೆ ನನ್ನ ಬದುಕೇ ಅಂತ್ಯವಾದಂತೆ ಎನ್ನುವ ಆಲೋಚನೆ ಹೊಂದಿರುವವರೇ ಚಿತ್ರರಂಗಕ್ಕೆ ಹೆಚ್ಚು ಬರುತ್ತಾರೆ ಎಂದು ಹೇಳಿದ್ದ ಸತ್ಯ ಕೃಷ್ಣನ್ ಪ್ರತಿಭೆ ಇದ್ದರೆ ಇಂದಲ್ಲ ನಾಳೆ ಅವಕಾಶ ಸಿಕ್ಕೇ ಸಿಗುತ್ತದೆ. ಆದರೆ, ಒಮ್ಮೆ ನೀವು ನಿಮ್ಮ ಸ್ವಾಭಿಮಾನವನ್ನು ಒತ್ತೆ ಇಟ್ಟರೆ, ಮತ್ತೆ ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಕೆಲವರು ಅವಕಾಶಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಆ ನಂತರ ಅದೇ ವಿಷಯವನ್ನು ದೊಡ್ಡದಾಗಿ ಮಾಡುತ್ತಾರೆ ಎಂದು ಕೂಡ ಹೇಳಿದ್ದ ಸತ್ಯ ಕೃಷ್ಣನ್ ತಪ್ಪು ಮಾಡಿದವರು ಮುಚ್ಚಿಹಾಕಲು ಪ್ರಯತ್ನಿಸುತ್ತಾರೆ. ಆದರೆ ನಿಜವಾಗಿಯೂ ಧೈರ್ಯದಿಂದ ನಿಂತರೆ ಯಾರೂ ನಮ್ಮನ್ನು ಬಲವಂತಪಡಿಸಲು ಸಾಧ್ಯವಿಲ್ಲ ಎಂದು ಕೂಡ ಹೇಳಿದ್ದರು. ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧೈರ್ಯದಿಂದ ಹೋರಾಡಬೇಕು, ಯಾವುದೇ ಪರಿಸ್ಥಿತಿಯಲ್ಲೂ 'ಬೇಡ' ಎಂದು ಹೇಳುವ ಧೈರ್ಯ ಹೊಂದಿರಬೇಕು ಎಂದು ಹೇಳಿದ್ದರು. ಸತ್ಯ ಕೃಷ್ಣನ್ ಅಂದು ಆಡಿದ ಈ ಮಾತುಗಳು ಆಗಲೇ ಹೇಳಿದಂತೆ ಈಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


Click it and Unblock the Notifications











