7 ಸಿನಿಮಾ 1 ವರ್ಷ : 2 ವರ್ಷಗಳ ಹಿಂದೆ ಅವಕಾಶಕ್ಕೆ ಬರ - ಈಗ ಪುರುಸೊತ್ತಿಲ್ಲದ ನಟಿ, ದಾಖಲೆ ಬರೆದ ಈ ಚೆಲುವೆ ಯಾರು ?
ಕೇವಲ ಒಂದೇ ಒಂದು ಚಿತ್ರದಲ್ಲಿ ಅಭಿನಯಿಸಿದರೆ ಸಾಕು, ಕೆಲ ನಾಯಕಿಯರಿಗೆ ಅವಕಾಶಗಳ ಹೆಬ್ಬಾಗಿಲೇ ತೆರೆದು ಬಿಡುತ್ತೆ. ನೋಡ..ನೋಡುತ್ತಲೇ.. ಇವರು ತಮ್ಮ ಭಾಷೆಯ ಚಿತ್ರರಂಗದಿಂದಲೇ ಮರೆಯಾಗಿ ಬೇರೆ ಭಾಷೆಗಳಿಗೆ ಹಾರಿ ಅಲ್ಲಿ ಮಿರ ಮಿರ ಮಿಂಚಲು ಶುರು ಮಾಡುತ್ತಾರೆ. ಖ್ಯಾತಿಯ ಉತ್ತುಂಗಕ್ಕೇರುತ್ತಾರೆ. ಒಮ್ಮೊಮ್ಮೆ ಅದೆಷ್ಟೇ ಅಲೆದಾಡಿದರೂ ಒಲಿಯದ ಅದೃಷ್ಟ ಎಂಬ ಮಾಯೆ, ಕೆಲವರ ಪಾಲಿಗೆ ಹಲವು ಸಂದರ್ಭಗಳಲ್ಲಿ...
ಬಯಸದೇನೆ ಒತ್ತರಿಸಿಕೊಂಡು ಬರೋದಿದೆ. ಬೇಡ ಬೇಡ ಎಂದರೂ ಕೂಡ ಇವರಿಗೆ ಅವಕಾಶಗಳು ಸಿಗುತ್ತಲೇ ಇರುತ್ತಾವೆ. ಇದಕ್ಕೆ ರಶ್ಮಿಕಾ ಮಂದಣ್ಣ .. ಶ್ರೀಲೀಲಾ .. ಸೇರಿ ಭಾರತೀಯ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ. ಆ ಪೈಕಿ ಅನುಪಮಾ ಪರಮೇಶ್ವರನ್ ಕೂಡ ಒಬ್ಬರು.

ಹೌದು, ಅನುಪಮಾ ಪರಮೇಶ್ವರನ್.. ದಕ್ಷಿಣದ ಚಂದ್ರ ಚಕೋರಿ. ಕಳೆದೊಂದು ದಶಕದಲ್ಲಿ 25ಕ್ಕೂ ಅಧಿಕ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಅನುಪಮಾ ಪರಮೇಶ್ವರನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ''ನಟಸಾರ್ವಭೌಮ'' ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದವರು. ತನ್ನ ಮುದ್ದು ಮುದ್ದಾದ ನಟನೆಯ ಮೂಲಕ ಕನ್ನಡಿಗರ ಮನ ಗೆದ್ದಿದ್ದರು.
ಇಂಥಾ ಅನುಪಮಾ ಪರಮೇಶ್ವರನ್ ಹೆಚ್ಚೇನು ಇಲ್ಲ ಎರಡು ವರ್ಷದ ಹಿಂದೆ ಕೆಲಸ ಇಲ್ಲದೇ ಎರಡು ವರ್ಷ ಖಾಲಿ ಕುಳಿತಿದ್ದರು. ''ರೌಡಿ ಬಾಯ್ಸ್''.. ''ಕಾರ್ತಿಕೇಯ 2''.. ''ಬಟರ್‌ಫ್ಲೈ''.. 18 ಪೇಜ್ಸ್.. ಹೀಗೆ 2022ರಲ್ಲಿ
5 ಚಿತ್ರಗಳಲ್ಲಿ ಕಾಣಿಸಿಕೊಂಡರು ಕೂಡ ಅನುಪಮಾಗೆ ಆ ನಂತರ 2023-2024ರಲ್ಲಿ ಒಂದೇ ಒಂದು ಅವಕಾಶ ಸಿಕ್ಕಿರಲಿಲ್ಲ.
ಆದರೆ ಬದುಕೇ ಹಾಗೇ. ಯಾವತ್ತು, ಎಲ್ಲಿ, ಯಾರಿಗೆ, ಹೇಗೆ ಅದೃಷ್ಟ ಒಲಿಯುತ್ತೆ ಎನ್ನುವುದನ್ನು ಯಾರಿಂದ ಕೂಡ ಊಹಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಸದ್ಯದ ಉದಾಹರಣೆಯಂತೆ ಇರುವ ಅನುಪಮಾ ಪರಮೇಶ್ವರನ್ ಈ ವರ್ಷ ಒಂದಲ್ಲ.. ಎರಡಲ್ಲ.. ಬದಲಿಗೆ 7 ಚಿತ್ರಗಳಲ್ಲಿ ನಾಯಕಿ ಪಾತ್ರ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ.
ಹೌದು, ಅನುಪಮಾ ಪರಮೇಶ್ವರನ್ ಅಭಿನಯದ ಆರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಆ ಪೈಕಿ ''ಡ್ರ್ಯಾಗನ್'' ಬ್ಲಾಕ್‌ಬಸ್ಟರ್ ಆದರೆ ಮಲಯಾಳಂನ ''ದಿ ಪೆಟ್ ಡಿಟೆಕ್ಟಿವ್''.. ಸೂಪರ್ ಹಿಟ್ ಸಿನಿಮಾ ಆಗಿ ಹೊರ ಹೊಮ್ಮಿದರೆ ''ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ'' ವಿಮರ್ಷಕರ ಮತ್ತು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯ್ತು.

ಚಿಯಾನ್ ವಿಕ್ರಂ ಮಗ ಧ್ರುವ ಜೊತೆ ಕೂಡ ಅನುಪಮಾ ಪರಮೇಶ್ವರನ್ ತೆರೆ ಹಂಚಿಕೊಂಡರು. ''ಬೈಸನ್ ಕಾಲಮಾಡನ್'' ಚಿತ್ರದಲ್ಲಿ ಅಭಿನಯಿಸಿದರು. ವಿಶೇಷ ಅಂದರೆ ಇವರ ಈ ಚಿತ್ರ ಕೂಡ ಪ್ರಶಂಸೆಗೆ ಪಾತ್ರವಾಯ್ತು. ಅನುಪಮಾ ಪರಮೇಶ್ವರನ್‌ಗೆ ಈ ವರ್ಷ ಕೈ ಕೊಟ್ಟಿದ್ದು ಬೆಲ್ಲಮಕೊಂಡ ಸಾಯಿ ಶ್ರೀನಿವಾಸ್ ಅವರ ಜೊತೆ ಅಭಿನಯಿಸಿದ್ದ ''ಕಿಷ್ಕಿಂಧಾಪುರಿ'' ಚಿತ್ರ ಮಾತ್ರ. ಬಾಕ್ಸಾಫೀಸ್‌ನಲ್ಲಿ ಈ ಚಿತ್ರ ಸೋತರು ಕೂಡ ಅನುಪಮಾ ತಮ್ಮ ಅಭಿನಯದಿಂದ ಮತ್ತೊಮ್ಮೆ ಹಲವರ ಮನಸ್ಸು ಗೆದ್ದರು.
ಹೀಗೆ ಈ ವರ್ಷ ಮೂರು ಭಾಷೆಗಳಲ್ಲಿ ಆರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಅನುಪಮಾ ಪರಮೇಶ್ವರನ್ ಈ ಡಿಸೆಂಬರ್ 5ರಂದು ಬೆಳ್ಳಿತೆರೆಯ ಮೇಲೆ ಮತ್ತೆ ಪ್ರತ್ಯಕ್ಷವಾಗಲಿದ್ಧಾರೆ. ಅನುಪಮಾ ಅಭಿನಯದ ತಮಿಳು ಚಿತ್ರ ''ಲಾಕ್‌ಡೌನ್'' ಬಾಲಯ್ಯ ಅವರ ''ಅಖಂಡ'' ಎದುರು ಬಿಡುಗಡೆಯಾಗಲಿದೆ. ವಿಶೇಷ ಅಂದರೆ ನವ ನಿರ್ದೇಶಕ ಎ.ಆರ್.ಜೀವ ನಿರ್ದೇಶನದ ಈ ಚೊಚ್ಚಲ ಚಿತ್ರದಲ್ಲಿ ಇಡೀ ಕಥೆ ಅನುಪಮಾ ಪರಮೇಶ್ವರನ್ ಅವರ ಸುತ್ತ ಮುತ್ತವೇ ಸುತ್ತುತ್ತೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.
ಒಟ್ನಲ್ಲಿ ಒಂದೇ ಒಂದು ಅವಕಾಶ ಸಿಕ್ಕರೆ ಸಾಕು ಎಂದು ಅನೇಕ ಚೆಲುವೆಯರು ಕನಸೊತ್ತು ಪರದಾಡುತ್ತಿರುವ ಈ ಸಮಯದಲ್ಲಿ, ಅನುಪಮಾ ಪರಮೇಶ್ವರನ್ ಕೇವಲ ಒಂದೇ ವರ್ಷದಲ್ಲಿ 07 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಮೂಲಕ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ.


Click it and Unblock the Notifications











