ತಿರುಪತಿಯಲ್ಲಿ 15 ನಿಮಿಷ ದೇವರ ದರ್ಶನ ಮಾಡಿದ್ದೆ, ಯಾರು ಪಕ್ಕಕ್ಕೆ ತಳ್ಳಲಿಲ್ಲ; ವಿವಾದಕ್ಕೀಡಾಯ್ತು ನಟಿ ಹೇಳಿಕೆ
ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಭಕ್ತರ ಭೇಟಿ ನೀಡುತ್ತಾರೆ. ದಿನಕ್ಕೆ ಸುಮಾರು 60ರಿಂದ 70 ಸಾವಿರ ಜನ ದೇವ ದರ್ಶನ ಪಡೆಯುತ್ತಾರೆ. ವಿಶೇಷ ಸಂದರ್ಭದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಸರ್ವ ದರ್ಶನ (ಉಚಿತ) ಹಾಗೂ ದಿವ್ಯ ದರ್ಶನ (ನಡಿಗೆ ಮಾರ್ಗ) ಸೇರಿ 12 ವಿಧದಲ್ಲಿ ವೆಂಕಟೇಶ್ವರನ ದರ್ಶನ ಮಾಡಲು ಅವಕಾಶವಿದೆ. ವಿಐಪಿಗಳಿಗೆ ವಿಶೇಷ ದರ್ಶನವೂ ದೊರೆಯುತ್ತದೆ.
ಕೆಲವೊಮ್ಮೆ ಎರಡು ಗಂಟೆಯಿಂದ 3 ಗಂಟೆ ಅವಧಿಯಲ್ಲಿ ಭಕ್ತರು ದೇವರ ದರ್ಶನ ಮಾಡಬಹುದು. ಕೆಲವೊಮ್ಮೆ 30 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾದು ದೇವರ ದರ್ಶನ ಮಾಡುವಂತಾಗುತ್ತದೆ. ಅಷ್ಟೆಲ್ಲಾ ಕಾದು ದರ್ಶನಕ್ಕೆ ಹೋದರೂ ಕೆಲವೇ ಸೆಕೆಂಡ್‌ಗಳು ಕಾಲ ಮಾತ್ರ ದರ್ಶನ ಸಾಧ್ಯ. ಕಾರಣ ಅಷ್ಟಮಟ್ಟಿಗೆ ಭಕ್ತರ ದಟ್ಟಣೆ ಹೆಚ್ಚಿರುತ್ತದೆ. ದೇವರ ಮುಂದೆ ನಿಂತು ಕೈಮುಗಿಯುತ್ತಿದ್ದಂತೆ ಸಿಬ್ಬಂದಿ ಕೈ ಹಿಡಿದು ಮುಂದಕ್ಕೆ ತಳ್ಳುತ್ತಾರೆ. ಹಿಂದೆ ಬರುವವರಿಗೆ ದಾರಿ ಮಾಡಿಕೊಡಿ ಎನ್ನುತ್ತಾರೆ. ಆದರೆ ತೆಲುಗು ನಟಿ ಶಿವಾನಿ ನಾಗಾರಂ "ನಾನು 15 ನಿಮಿಷಗಳ ಕಾಲ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಪಡೆದೆ" ಎಂದು ಹೇಳಿದ್ದು ಭಾರೀ ಚರ್ಚೆ ಹುಟ್ಟು ಹಾಕಿತ್ತು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಶಿವಾನಿ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆ ಜೋರಾಗಿತ್ತು. 'ಅಂಬಾಜಿಪೇಟೆ ಮ್ಯಾರೇಜ್ ಬ್ಯಾಂಡ್', 'ಲಿಟಲ್ ಹಾರ್ಟ್ಸ್', 'ಹೇ ಬಲ್ವಂತ್' ಎಂಬ ತೆಲುಗು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ತಿರುಪತಿಯಲ್ಲಿ 15 ನಿಮಿಷ ದೇವರ ಮುಂದೆ ನಮ್ಮನ್ನು ನಿಲ್ಲಿಸಿದ್ದರು. ನಮ್ಮನ್ನು ಅಲ್ಲಿಂದ ಯಾರು ಪಕ್ಕಕ್ಕೆ ತಳ್ಳಲಿಲ್ಲ. ನನ್ನ ಜೀವನದಲ್ಲಿ ಆ ರೀತಿ ಎಂದು ತಿಮ್ಮಪ್ಪನ ದರ್ಶನ ಸಿಕ್ಕಿರಲಿಲ್ಲ ಎಂದು ಶಿವಾನಿ ಹೇಳಿದ್ದರು. ಅಲ್ಲಾ ಸಾಮಾನ್ಯ ಜನರನ್ನು 15 ಸೆಕೆಂಡ್ ದೇವರ ದರ್ಶನ ಮಾಡಲು ಬಿಡಲ್ಲ, ಈಕೆಗೆ 15 ನಿಮಿಷ ದರ್ಶನ ಹೇಗೆ ಸಾಧ್ಯವಾಯಿತು ಎಂದು ಕೆಲವರು ಕಾಮೆಂಟ್ ಮಾಡಿದ್ದರು.
ತಿರುಪತಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ನ್ಯಾಯಾನಾ? ಒಂದೊಂದು ರೀತಿ ದರ್ಶನನಾ? ಸೆಲೆಬ್ರೆಟಿ ಎಂದ ಮಾತ್ರಕ್ಕೆ 15 ನಿಮಿಷ ದರ್ಶನ ಮಾಡುವ ಅವಕಾಶ ಸಿಗುತ್ತಾ? ಟಿಟಿಡಿ ಈ ಬಗ್ಗೆ ಗಮನ ಹರಿಸುವುದಿಲ್ಲವೇ? ಎಂದು ಭಾರೀ ಚರ್ಚೆ ನಡೀತಿದೆ. ಟಿಟಿಡಿ ಮೇಲೆ ಕೂಡ ಆಕ್ರೋಶ ಹೆಚ್ಚಾಗುತ್ತಿದ್ದಂತೆ ನಟಿ ಶಿವಾನಿ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ. ನಾನು ಹೇಳಿದ್ದು ಆ ರೀತಿ ಅಲ್ಲ, ನಾನು ಮಾತನಾಡುವ ಭರದಲ್ಲಿ ಕೊಂಚ ಹೆಚ್ಚು ಮಾತನಾಡಿದ್ದೀನಿ ಅಷ್ಟೆ ಎಂದು ಹೇಳಿದ್ದಾರೆ.
ಶಿವಾನಿ ಮಾತನಾಡಿ "ನಾನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ನನ್ನ ಜೀವನದ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದೆ. ಅದರಲ್ಲಿ ತಿರುಪತಿ ತಿಮ್ಮಪ್ಪನ ದರ್ಶನದ ಬಗ್ಗೆ ಕೂಡ ಹೇಳಿದ್ದೆ. ಅದರಲ್ಲಿ 15 ನಿಮಿಷ ದೇವರ ದರ್ಶನ ಎನ್ನುವುದು ಹೈಲೆಟ್ ಆಗ್ತಿದೆ. ನಾನು ನಮ್ಮ ತಾಯಿ ಜೊತೆ ಶ್ರೀವಾಣಿ ದರ್ಶನಕ್ಕಾಗಿ 10500 ರೂ. ಟಿಕೆಟ್ ಖರೀದಿಸಿದ್ದೆ. ಅದಕ್ಕೆ ನಮ್ಮ ಆಧಾರ್ ಕಾರ್ಡ್ ಪುರಾವೆಗಳಾಗಿವೆ. ಶ್ರೀವಾಣಿ ದರ್ಶನ ಟಿಕೆಟ್ ಪಡೆದು ದರ್ಶನ ಮಾಡಿದ್ವಿ. ನಾವು ಸಾಲಿನಲ್ಲಿ ಹತ್ತಿರ ಹತ್ತಿರ ಹೋಗುತ್ತಿದ್ದಂತೆ ಸ್ವಾಮಿ ಕ್ರಮೇಣ ಕಾಣಿಸಿಕೊಳ್ಳುತ್ತಿದ್ದರು. ಇದನ್ನೆಲ್ಲಾ ಒಟ್ಟುಗೂಡಿಸಿ, ನಾನು 15 ನಿಮಿಷ ಎಂದು ಹೇಳಿದ್ದೆ. ಯಾರೂ ನನ್ನನ್ನು 15 ನಿಮಿಷಗಳ ಕಾಲ ಪಕ್ಕಕ್ಕೆ ಕಳುಹಿಸಲಿಲ್ಲ ಎಂದು ಅರ್ಥ ಅಲ್ಲ" ಎಂದಿದ್ದಾರೆ.
ಈ ಹಿಂದೆ 300 ರೂ.ಗೆ ಸರ್ವ ದರ್ಶನ ಟಿಕೆಟ್ ತೆಗೆದುಕೊಂಡು ನನ್ನ ಕುಟುಂಬದೊಂದಿಗೆ ತಿರುಪತಿಗೆ ಹೋಗಿದ್ದೆ. ಕೇವಲ 5 ಸೆಕೆಂಡುಗಳ ಕಾಲ ದೇವರನ್ನು ನೋಡಿದ್ದೆ. ಈ ಬಾರಿ ಸ್ವಾಮಿಯನ್ನು ಇಷ್ಟು ಹತ್ತಿರದಿಂದ ನೋಡಿದ್ದು. ಆ ಬಗ್ಗೆ ಬಹಳ ಸಂತೋಷವಾಯಿತು. ಅದನ್ನು ಬಹಳ ಉತ್ಸಾಹದಿಂದ ಸಂದರ್ಶನದಲ್ಲಿ ಹಂಚಿಕೊಂಡಿದ್ದೆ. ಆದರೆ ನಾನು ಹೇಳಿದ್ದು ಕೊಂಚ ಮಿಸ್ ಲೀಡ್ ಆಗಿದೆ. ನಾನು ಮಾತ್ರವಲ್ಲ, ನಿಮ್ಮಲ್ಲಿ ಯಾರಾದರೂ ಯಾವಾಗ ಬೇಕಾದರೂ ಶ್ರೀವಾಣಿ ದರ್ಶನ ಟಿಕೆಟ್ ತೆಗೆದುಕೊಂಡರೆ ಬಹಳ ಚೆನ್ನಾಗಿ ದರ್ಶನ ಆಗುತ್ತದೆ" ಎಂದು ಶಿವಾನಿ ವಿವರಿಸಿದ್ದಾರೆ.


Click it and Unblock the Notifications











