'ಗುಮ್ಮಡಿ ನರಸಯ್ಯ' ಚಿತ್ರ ಮುಹೂರ್ತಕ್ಕೆ ಜನಸಾಗರ; ತಂದೆ, ತಾಯಿ, ಅಪ್ಪು ಭಾವಚಿತ್ರಕ್ಕೆ ಶಿವಣ್ಣ ಪೂಜೆ
ನಟ ಶಿವರಾಜ್‌ಕುಮಾರ್ ಅದ್ಧೂರಿಯಾಗಿ ತೆಲುಗು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಆಂಧ್ರದ ರಾಜಕೀಯ ಮುಖಂಡ 'ಗುಮ್ಮಡಿ ನರಸಯ್ಯ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ನರಸಯ್ಯ ಹುಟ್ಟೂರಾದ ಆಂಧ್ರದ ಪಲ್ವಂಚಾದಲ್ಲಿ ಚಿತ್ರ ಮುಹೂರ್ತ ಸಮಾರಂಭ ನಡೀತು. ಬಹಳ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಗೀತಾ ಶಿವರಾಜ್‌ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಾಶಯ ಕೋರಿದ್ದಾರೆ. ಕಾರ್ಯಕ್ರಮಕ್ಕೆ ಗುಮ್ಮಡಿ ನರಸಯ್ಯ ಕೂಡ ಮುಖ್ಯ ಅತಿಥಿಯಾಗಿ ಬಂದಿದ್ದರು. ನರಸಯ್ಯನವರ ಅಭಿಮಾನಿಗಳು, ಶಿವಣ್ಣ ಅಭಿಮಾನಿಗಳು ಸೇರಿದಂತೆ ಸಾಕಷ್ಟು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿ ಆಗಿದ್ದರು. ಪ್ರವಲ್ಲಿಕಾ ಆರ್ಟ್ಸ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಪ್ರಶಾಂತ್ ಹಿರ್ವಾಲೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕೆಲ ದಿನಗಳ ಹಿಂದೆ 'ಗುಮ್ಮಡಿ ನರಸಯ್ಯ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಮಾದರಿಯಾಗಿದ್ದ ರಾಜಕಾರಣಿ ನರಸಯ್ಯ. ಅಂತಹ ಮಹಾನ್ ವ್ಯಕ್ತಿಯ ಜೀವನಾಧರಿತ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಈ ಬಯೋಪಿಕ್ ಸಿನಿಮಾ ನಿರ್ಮಾಣ ಆಗಲಿದೆ. ಕಳೆದ ಕೆಲ ದಿನಗಳಿಂದ ಹೈದರಾಬಾದ್‌ನಲ್ಲಿ ಶಿವಣ್ಣ ಉಳಿದುಕೊಂಡಿದ್ದರು. 'ಪೆದ್ದಿ' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು.
ನಿನ್ನೆ(ಡಿಸೆಂಬರ್ 5) ಗುಮ್ಮಡಿ ನರಸಯ್ಯ ಅವರ ನಿವಾಸಕ್ಕೆ ಶಿವರಾಜ್‌ಕುಮಾರ್ ಭೇಟಿ ನೀಡಿದ್ದರು. ವಿಜಯವಾಡ ಕನಕದುರ್ಗಮ್ಮ ಆಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಮಾಧ್ಯಮಗಳ ಜೊತೆ ಮಾತನಾಡಿ ತೆಲುಗು ಚಿತ್ರದಲ್ಲಿ ಹೀರೊ ಆಗಿ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು. ಅವಕಾಶ ಸಿಕ್ಕರೆ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಜೀವನಾಧರಿತ ಚಿತ್ರದಲ್ಲಿ ನಟಿಸೋಕೆ ಸಿದ್ಧ ಎಂದು ಶಿವಣ್ಣ ಹೇಳಿದ್ದಾರೆ. ಮುಹೂರ್ತ ಸಮಾರಂಭದ ವೇದಿಕೆಯಲ್ಲಿ ಡಾ. ರಾಜ್‌ಕುಮಾರ್, ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಗಳಿಗೆ ಶಿವಣ್ಣ ದಂಪತಿ ಪುಷ್ಪಾರ್ಚನೆ ಮಾಡಿ ನಮಿಸಿದ್ದಾರೆ.

ತೆಲಂಗಾಣದ ಕಮ್ಮಂ ಜಿಲ್ಲೆಯ ಯೆಲ್ಲಂಡು ವಿಧಾನಸಭಾ ಕ್ಷೇತ್ರದಲ್ಲಿ 5 ಬಾರಿ ಶಾಸಕರಾಗಿ ಗುಮ್ಮಡಿ ನರಸಯ್ಯ ಸೇವೆ ಸಲ್ಲಿಸಿದ್ದವರು. ಬುಡಕಟ್ಟು ಜನಾಂಗದಲ್ಲಿ ಜನಿಸಿಯ ನರಸಯ್ಯ 5ನೇ ತರಗತಿವರೆಗೆ ಮಾತ್ರ ಓದಿದವರು. ಶಾಸಕರಾಗಿ ಸೇವೆ ಎಂದಿಗೂ ಐಷಾರಾಮಿ ಜೀವನ ನಡೆಸಲಿಲ್ಲ. ಸೈಕಲ್‌ನಲ್ಲೇ ಆಂಧ್ರ ವಿಧಾನಸಭೆಗೆ ಕೂಡ ಬರುತ್ತಿದ್ದರು. ದೂರದ ಊರುಗಳಿಗೆ ಬಸ್‌ನಲ್ಲೇ ಪ್ರಯಾಣಿಸುತ್ತಿದ್ದರು. 25 ವರ್ಷ ಸಿಪಿಐ ಪಕ್ಷದಿಂದ ಶಾಸಕರಾಗಿ ಸೇವೆ ಸಲ್ಲಿಸಿದರೂ ಆಸ್ತಿ ಪಾಸ್ತಿ ಮಾಡಲಿಲ್ಲ. ಜನ ನನ್ನನ್ನು ಗೆಲ್ಲಿಸಿರುವುದು ಜನಸೇವೆ ಮಾಡಲು ಎನ್ನುವುದನ್ನು ನಂಬಿದ್ದರು. ಇಂತಿಪ್ಪ ನಾಯಕನ ಕಥೆಯಲ್ಲಿ ಶಿವಣ್ಣ ನಟಿಸುತ್ತಿದ್ದಾರೆ.
ಪಾರ್ವತಮ್ಮ ರಾಜ್‌ಕುಮಾರ್ ಹುಟ್ಟುಹಬ್ಬದ ದಿನವೇ 'ಗುಮ್ಮಡಿ ನರಸಯ್ಯ' ಸಿನಿಮಾ ಸೆಟ್ಟೇರಿರುವುದು ಮತ್ತೊಂದು ವಿಶೇಷ. ಮಹೂರ್ತದ ಬೆನ್ನಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ನರಸಯ್ಯ ಅವರ ಊರಿನ ಸುತ್ತಾಮುತ್ತಾ ಬಹುತೇಕ ಚಿತ್ರೀಕರಣ ನಡೆಯಲಿದೆ. ಒಂದಷ್ಟು ಸೆಟ್‌ಗಳನ್ನು ಹಾಕಿ ಚಿತ್ರೀಕರಣ ನಡೆಸುವ ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ತರುವ ಪ್ರಯತ್ನ ಜೋರಾಗಿದೆ.
ಬಾಲಕೃಷ್ಣ ನಟನೆಯ 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಹಾಡೊಂದಕ್ಕೆ ಶಿವಣ್ಣ ಹೆಜ್ಜೆ ಹಾಕಿದ್ದರು. 'ಪೆದ್ದಿ' ಚಿತ್ರದಲ್ಲಿ ರಾಮ್‌ಚರಣ್ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅತ್ತ ತಮಿಳಿನಲ್ಲಿ 'ಜೈಲರ್'-2 ಚಿತ್ರೀಕರಣ ಮುಗಿಸಿದ್ದಾರೆ. ಮತ್ತೊಮ್ಮೆ ನರಸಿಂಹನಾಗಿ ಅಬ್ಬರಿಸಲಿದ್ದಾರೆ. ಕನ್ನಡದಲ್ಲಿ 'ಡ್ಯಾಡ್' ಹಾಗೂ '666 ಆಪರೇಷನ್ ಡ್ರೀಮ್ ಥಿಯೇಟರ್' ಎಂಬ ಸಿನಿಮಾಗಳಲ್ಲಿ ಶಿವಣ್ಣ ಬಣ್ಣ ಹಚ್ಚಿದ್ದಾರೆ. ಡಿಸೆಂಬರ್ '25' ಸೆಂಚುರಿ ಸ್ಟಾರ್ ನಟನೆಯ '45' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











