ರಾಮ್‌ಚರಣ್ ಜೊತೆ ಕುಸ್ತಿ ಅಖಾಡಕ್ಕಿಳಿದ ಶಿವಣ್ಣ; ವಿಕ್ಕಿ ಕೌಶಲ್ ತಂದೆ ಮಾಗದರ್ಶನ
ಕನ್ನಡ ನಟ ಶಿವರಾಜ್‌ಕುಮಾರ್ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಒಂದು ದಿನ ವಿಶ್ರಾಂತಿ ಪಡೆಯುವುದಿಲ್ಲ. ಸಿನಿಮಾ ಚಿತ್ರೀಕರಣ ಮಾತ್ರವಲ್ಲ ಸಭೆ ಸಮಾರಂಭಗಳಲ್ಲಿ ಭಾಗಿ ಆಗುತ್ತಿರುತ್ತಾರೆ. 'ಡ್ಯಾಡ್' ಚಿತ್ರದಲ್ಲಿ ನಟಿಸುತ್ತಿರುವ ಶಿವಣ್ಣ ಇತ್ತೀಚೆಗೆ 'ಅಖಂಡ'-2 ಚಿತ್ರದ ಟ್ರೈಲರ್ ಲಾಂಚ್ ಈವೆಂಟ್‌ಗೆ ಹಾಜರಾಗಿದ್ದರು.
ಸದ್ಯ ಶಿವಣ್ಣ ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿದ್ದಾರೆ. 'ಪೆದ್ದಿ' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಬುಚ್ಚಿಬಾಬು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದು. ರಾಮ್ ಚರಣ್ ಜೊತೆ ಸೆಂಚುರಿ ಸ್ಟಾರ್ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ಟೀಸರ್ ಹಾಗೂ 'ಚಿಕ್ಕಿರಿ' ಸಾಂಗ್ ಮೂಲಕ ಈ ಸಿನಿಮಾ ಗಮನ ಸೆಳೆದಿದೆ.

ಹೈದರಾಬಾದ್ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ 'ಪೆದ್ದಿ' ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ. ಬಾಲಿವುಡ್ ನಟ ವಿಕ್ಕಿ ಕೌಶಲ್ ತಂದೆ ಶ್ಯಾಮ್ ಕೌಶಲ್ ನೇತೃತ್ವದಲ್ಲಿ ಕುಸ್ತಿ ಮಾದರಿಯ ಸಾಹಸ ಸನ್ನಿವೇಶಗಳನ್ನು ಚಿತ್ರತಂಡ ಸೆರೆ ಹಿಡಿಯುತ್ತಿದೆ. ಶ್ಯಾಮ್ ಕೌಶಲ್ ಮಾರ್ಗದರ್ಶನದಲ್ಲಿ ಮತ್ತೊಬ್ಬ ಸ್ಟಂಟ್ ಮಾಸ್ಟರ್ ನವಕಾಂತ್ ಸನ್ನಿವೇಶಗಳನ್ನು ಕಂಪೋಸ್ ಮಾಡುತ್ತಿದ್ದಾರೆ. ಅವಿನಾಶ್ ಕೊಲ್ಲ ಸೆಟ್ ನಿರ್ಮಾಣ ಮಾಡಿದ್ದಾರೆ.
ಶ್ಯಾಮ್ ಕೌಶಲ್ ಸ್ಟಂಟ್ ಮಾಸ್ಟರ್ ಆಗಿ ಬಾಲಿವುಡ್ ಅಂಗಳದಲ್ಲಿ ಚಿರಪರಿಚಿತಾಗಿದ್ಧಾರೆ. 'ದಂಗಲ್', 'ಪದ್ಮಾವತ್', 'ಭಾಜಿರಾವ್ ಮಸ್ತಾನಿ', 'ಗ್ಯಾಂಗ್ಸ್ ಆಫ್ ವಸ್ಸೆಪುರ್' ರೀತಿಯ ಹಿಟ್ ಚಿತ್ರಗಳಿಗೆ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ. 'ಪೆದ್ದಿ' ಚಿತ್ರದಲ್ಲಿ ಡಿಜಿಪಿ ಗೌರ್ನಾಯ್ಡು ಪ್ರಸಾದ್ ಆಗಿ ಶಿವಣ್ಣ ಅಬ್ಬರಿಸಿದ್ದಾರೆ. ಖಡಲ್ ಲುಕ್‌ನಲ್ಲಿ ಈಗಾಗಲೇ ಅವರ ಪಾತ್ರ ಪರಿಚಯ ಮಾಡಿಸಲಾಗಿದೆ. ಚರಣ್- ಶಿವಣ್ಣ ಆಕ್ಷನ್ ಸನ್ನಿವೇಶ ಚಿತ್ರದ ಹೈಲೆಟ್ ಎನ್ನಲಾಗ್ತಿದೆ.

ಈಗಾಗಲೇ 'ಜೈಲರ್' ಚಿತ್ರದಲ್ಲಿ ನರಸಿಂಹ ಆಗಿ ಅಬ್ಬರಿಸಿ ಶಿವಣ್ಣ ಕಾಲಿವುಡ್ ಪ್ರವೇಶಿಸಿದ್ದಾರೆ. 'ಪೆದ್ದಿ' ಚಿತ್ರದಲ್ಲಿ ಕೂಡ ಅಂಥದ್ದೇ ಪವರ್‌ಫುಲ್ ಪಾತ್ರ ಸಿಕ್ಕಿದೆ. ಬಹಳ ದಿನಗಳ ಬಳಿಕ ಇಂತಾದೊಂದು ಕಥೆ ಕೇಳಿದೆ. ಬುಚ್ಚಿಬಾಬು ಕಥೆ ಹೇಳಿದ ಪರಿ ನಿಜಕ್ಕೂ ಚೆನ್ನಾಗಿತ್ತು ಎಂದು ಸ್ವತಃ ಶಿವಣ್ಣ ಹೇಳಿದ್ದರು. ಒಂದು ತೆಲುಗು ಚಿತ್ರದಲ್ಲಿ ಸೆಂಚುರಿ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಆದರೆ ಒಂದು ಪಾತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಬಾಲಕೃಷ್ಣ ನಟನೆಯ 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಹಾಡೊಂದರಲ್ಲಿ ಶಿವಣ್ಣ ಹೆಜ್ಜೆ ಹಾಕಿದ್ದರು.
ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ 'ಪೆದ್ದಿ' ಸಿನಿಮಾ ನಿರ್ಮಾಣವಾಗುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ರಾಮ್‌ಚರಣ್ ಈ ಬಾರಿ ಗೆದ್ದು ಬೀಗುವ ಉತ್ಸಾಹದಲ್ಲಿದ್ದಾರೆ. 90ರ ದಶಕದ ಕಾಲಘಟ್ಟದ ಕಥೆಯನ್ನು 'ಪೆದ್ದಿ' ಚಿತ್ರದಲ್ಲಿ ಹೇಳುತ್ತಿದ್ದಾರೆ. 'ರಂಗಸ್ಥಳಂ' ರೀತಿಯಲ್ಲೇ ಈ ಸಿನಿಮಾ ಕೂಡ ಗೆಲ್ಲುತ್ತದೆ ಎನ್ನಲಾಗ್ತಿದೆ. ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕೆ ಮತ್ತಷ್ಟು ಬಲ ತುಂಬಲಿದೆ.
ಬಾಲಿವುಡ್ ನಟಿ ಜಾನ್ವಿ ಕಪೂರ್ ಚಿತ್ರದಲ್ಲಿ ರಾಮ್‌ಚರಣ್ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಜಗಪತಿ ಬಾಬು, ದಿವ್ಯೆಂದು, ಶೋಭನಾ, ವಿಜಿ ಚಂದ್ರಶೇಖರ್ 'ಪೆದ್ದಿ' ಚಿತ್ರದ ತಾರಾಗಣದಲ್ಲಿದ್ದಾರೆ. ಈ ಹಿಂದೆ 'ಉಪ್ಪೆನ' ಸಿನಿಮಾ ನಿರ್ದೇಶಿಸಿ ಬುಚ್ಚಿಬಾಬು ಗೆದ್ದಿದ್ದರು. ಸುಕುಮಾರ್ ಗರಡಿಯಲ್ಲಿ ಪಳಗಿದ ಅವರು ಇದೀಗ ಮತ್ತೊಂದು ಹಿಟ್ ಮೇಲೆ ಕಣ್ಣಿಟ್ಟಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ 'ಪೆದ್ದಿ' ಸಿನಿಮಾ ನಿರ್ಮಾಣವಾಗ್ತಿದೆ. ಈಗಾಗಲೇ 'ಚಿಕ್ಕಿರಿ' ಸಾಂಗ್ 110 ಮಿಲಿಯನ್ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ರಾಮ್‌ಚರಣ್ ಡ್ಯಾನ್ಸ್ ಸ್ಟೆಪ್ಸ್ ವೈರಲ್ ಆಗ್ತಿದೆ. ಚಿತ್ರದ ಇನ್ನುಳಿದ ಸಾಂಗ್ಸ್ ಬಗ್ಗೆ ಕುತೂಹಲ ಮೂಡಿದೆ. ಟೀಸರ್ ಕೂಡ ಹಿಟ್ ಆಗಿತ್ತು.


Click it and Unblock the Notifications