"ನಂಗೂ ಮುಂಚೆ ಅಪ್ಪು ಹೋಗಿದ್ದು ನೋವಾಗುತ್ತೆ.. ತೆಲುಗು ಪ್ರೇಕ್ಷಕರಿಗೆ ಒಂದು ಮಾತು ಕೊಡ್ತೀನಿ": ಶಿವಣ್ಣ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ವೇದ' ಸಿನಿಮಾ ತೆಲುಗಿಗೆ ಡಬ್ ಆಗಿ ಈ ವಾರ ರಿಲೀಸ್ ಆಗ್ತಿದೆ. ಹೈದರಾಬಾದ್‌ನಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು. 'ವೇದ' ಚಿತ್ರತಂಡಕ್ಕೆ ನಟಸಿಂಹ ಬಾಲಕೃಷ್ಣ ಸಾಥ್ ನೀಡಿದ್ದಾರೆ. ಸಿನಿಮಾ ನೋಡಿ ಗೆಲ್ಲಿಸುವಂತೆ ತೆಲುಗು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.
ತೆಲುಗಿಗೆ 'ಶಿವ ವೇದ' ಹೆಸರಿನಲ್ಲಿ ಸಿನಿಮಾ ಡಬ್ ಆಗಿ ರಿಲೀಸ್ ಆಗ್ತಿದೆ. ಹೈದರಾಬಾದ್‌ನ ದಾಸಪಲ್ಲ ಹೋಟೆಲ್‌ನಲ್ಲಿ ಚಿತ್ರದ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ಏರ್ಪಡಿಸಲಾಗಿತ್ತು. ಬಾಲಕೃಷ್ಣ ಮಾತನಾಡಿ ಎನ್‌ಟಿಆರ್ ಹಾಗೂ ಡಾ. ರಾಜ್‌ಕುಮಾರ್ ಫ್ಯಾಮಿಲಿ ನಡುವೆ ಆತ್ಮೀಯ ಒಡನಾಟವಿದೆ. ನಾನು, ಶಿವರಾಜ್‌ಕುಮಾರ್ ಸಹೋದರರು. ನನಗೆ ವೇದ ಸಿನಿಮಾ ಬಹಳ ಇಷ್ಟವಾಯಿತು, ನಿಮಗೂ ಇಷ್ಟವಾಗುತ್ತದೆ ನೋಡಿ ಎಂದರು.
ಸಂಕ್ರಾಂತಿ ಸಂಭ್ರಮದಲ್ಲೇ 'ವೇದ' ತೆಲುಗು ವರ್ಷನ್ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿದೆ. ಇನ್ನು ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಪುನೀತ್ ರಾಜ್‌ಕುಮಾರ್ ಸ್ಪೆಷಲ್ ಎವಿ ಪ್ರಸಾರ ಮಾಡಲಾಯಿತು. ಅದನ್ನು ನೋಡುತ್ತಾ ಶಿವರಾಜ್‌ಕುಮಾರ್ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡರು.

ಬಾಲಕೃಷ್ಣ ಕಾಂಬಿನೇಷನ್‌ನಲ್ಲಿ ಸಿನಿಮಾ
"ಶಿವ ವೇದ ಪ್ರೀ ರಿಲೀಸ್ ಈವೆಂಟ್‌ಗೆ ನನ್ನ ಬ್ರದರ್ ಬಾಲಕೃಷ್ಣ ಬಂದಿದ್ದಾರೆ. ಅದು ನನಗೆ ಇಷ್ಟವಾಯಿತು. ಗೌತಮಿಪುತ್ರ ಶಾತಕರ್ಣಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಳ್ಳುವ ಅವಕಾಶ ನನಗೆ ಸಿಕ್ಕಿತ್ತು. ಮತ್ತೆ ಸಾಂಗ್ ಬೇಡ. ಅವರೊಟ್ಟಿಗೆ ಒಂದು ಸಿನಿಮಾ ಮಾಡುವ ಆಸೆ ಇದೆ. ಬಿಗ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡ್ಬೇಕು. ಅದಕ್ಕಾಗಿ ಕಾಯುತ್ತಿದ್ದೇನೆ. ನಮ್ಮ, ಬಾಲಯ್ಯ ಫ್ಯಾಮಿಲಿ ನಡುವೆ ಆತ್ಮೀಯ ಒಡನಾಟವಿದೆ. ಎನ್‌ಟಿಆರ್, ಅಪ್ಪಾಜಿ ಕಾಲದಿಂದಲೂ ನಾವು ಹೀಗೆ ಇದ್ದೀವಿ. ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಬಾಲಯ್ಯ ಬರ್ತಾರೆ. ಅವರ ಕಾರ್ಯಕ್ರಮಗಳಿಗೆ ನಾವು ಬರ್ತೀವಿ"

ಹಿಂದುಪುರದಲ್ಲಿ ನಮ್ಮ ಬ್ರದರ್ MLA
"ಹಿಂದುಪುರದ ಲೇಪಾಕ್ಷಿ ಉತ್ಸವಕ್ಕೆ ಹೋಗುತ್ತಿರುತ್ತೇನೆ. ಅದು ನಮ್ಮ ಮನೆಯ ಕಾರ್ಯಕ್ರಮ ಎನಿಸುತ್ತದೆ. ನಮ್ಮ ಸಹೋದರ(ಬಾಲಕೃಷ್ಣ) ಅಲ್ಲಿರ್ತಾರೆ. ನಮ್ಮ ಸಹೋದರ ಅಲ್ಲಿ ಎಂಎಲ್‌ಎ ಆಗಿದ್ದಾರೆ. ಈಗ ಬಾಲಕೃಷ್ಣ ಸಹೋದರನ ಪುತ್ರ (ತಾರಕ ರತ್ನ) ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ. ನಾನು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದೆ. ಆದಷ್ಟು ಬೇಗ ಅವರು ಗುಣಮುಖರಾಗಿ ಬರುತ್ತಾರೆ. ನಾವು ಯಾವಾಗಲೂ ಅವರೊಟ್ಟಿಗೆ ಇರುತ್ತೇವೆ.

ತೆಲುಗು ಪ್ರೇಕ್ಷಕರಿಗೆ ಶಿವಣ್ಣ ಪ್ರಾಮಿಸ್
'ವೇದ' ಸಿನಿಮಾ ಕನ್ನಡದಲ್ಲಿ ಹಿಟ್ ಆಗಿದೆ. ತೆಲುಗಿನಲ್ಲಿ ಬರ್ತಾ ಇದೆ. ಸಿನಿಮಾ ನೋಡಿ ಇಷ್ಟವಾಗುತ್ತದೆ. ಎಲ್ಲಾ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗುತ್ತದೆ. ಯಾಕಂದರೆ ಒಳ್ಳೆ ಎಂಟರ್‌ಟೈನ್‌ಮೆಂಟ್ ಇದೆ. ಒಳ್ಳೆ ಮೆಸೇಜ್ ಇದೆ. ಈ ಸಲ ಏಕಕಾಲದಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಮುಂದಿನ ಬಾರಿ ಖಂಡಿತ ನನ್ನ ಎಲ್ಲಾ ಸಿನಿಮಾಗಳನ್ನು ಏಕಕಾಲಕ್ಕೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ತೆರೆಗೆ ತರುತ್ತೇವೆ. ಈ ಬಗ್ಗೆ ನಾನು ತೆಲುಗು ಪ್ರೇಕ್ಷಕರಿಗೆ ಮಾತು ಕೊಡುತ್ತೇನೆ. ಎಲ್ಲರಿಗೂ ಧನ್ಯವಾದ. ಜೈ ಬಾಲಯ್ಯ" ಎಂದರು.

ಅಪ್ಪು ನಮ್ಮೊಂದಿಗೆ ಇದ್ದಾನೆ
"ಕ್ಷಮಿಸಿ. ಅಪ್ಪು ಎವಿ ನೋಡುತ್ತಾ ಭಾವುಕನಾದೆ. ಕೆಲವೊಮ್ಮೆ ನಾನು ಅಂದುಕೊಳ್ಳುತ್ತೇನೆ ಅಳಬಾರದು ಎಂದು. ಆದರೆ ಆ ಮಗು ಮುಖ ನೋಡಿದರೆ ಎಂತಹವರಿಗೂ ಕಣ್ಣಲ್ಲಿ ನೀರು ಬರುತ್ತೆ. ನಾನು 13 ವರ್ಷ ದೊಡ್ಡವನು. ನನಗೆ ಮಗುವಿನ ತರಹ ಅಪ್ಪು. ನಂಗೂ ಮುಂಚೆ ಅಪ್ಪು ಹೋಗಿದ್ದು ನೋವಾಗುತ್ತೆ. ಆದರೆ ಅಪ್ಪು ನಮ್ಮೊಂದಿಗೆ ಇದ್ದಾನೆ. ಅವನನ್ನು ಸದಾ ಸೆಲೆಬ್ರೇಟ್ ಮಾಡೋಣ. ಸದಾ ನಮ್ಮ ಹೃದಯಲ್ಲಿ ಶಾಶ್ವತವಾಗಿ ಇರ್ತಾನೆ" ಎಂದು ಶಿವಣ್ಣ ಹೇಳಿದ್ದಾರೆ.


Click it and Unblock the Notifications











