ಗೌರ್ನಾಯ್ಡು ಪಾತ್ರಕ್ಕೆ ಶಿವಣ್ಣ ತಯಾರಾಗಿದ್ದು ಹೇಗೆ? ಮೇಕಪ್ ಆರ್ಟಿಸ್ಟ್ ಹೇಳಿದ್ದೇನು?- ವಿಡಿಯೋ
'ಪೆದ್ದಿ' ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಸೋಮವಾರ ಪರೀಕ್ಷೆಯಲ್ಲಿ ಪಾಸ್ ಆಗಿದ್ದ ರಾಮ್‌ಚರಣ್ ಮಂಗಳವಾರ ಕೂಡ ಗೆದ್ದಿದ್ದಾರೆ. ಉತ್ತರಭಾರತದಲ್ಲಿ ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗಾಗಲೇ ಸಿನಿಮಾ ವಿಶ್ವದಾದ್ಯಂತ 300 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಗೌರ್ನಾಯ್ಡು ಪಾತ್ರದಲ್ಲಿ ಶಿವಣ್ಣನ ನಟನೆಗೂ ಒಳ್ಳೆ ಅಂಕ ಸಿಕ್ಕಿದೆ.
ಇದೇ ಮೊದಲ ಬಾರಿಗೆ ತೆಲುಗು ಚಿತ್ರವೊಂದರ ಪರಿಪೂರ್ಣ ಪಾತ್ರದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದಾರೆ. ಕ್ಯಾನ್ಸರ್ ಸಮಸ್ಯೆಯಿಂದ ಬಳಲಿದ್ದ ಶಿವಣ್ಣ ಒಂದು ಹಂತಕ್ಕೆ 'ಪೆದ್ದಿ' ಚಿತ್ರದಲ್ಲಿ ನಟಿಸೋದು ಬೇಡ ಎಂದುಕೊಂಡಿದ್ದರಂತೆ. ಆದರೆ ನಿರ್ದೇಶಕ ಬುಚ್ಚಿಬಾಬು ಒಪ್ಪದೇ ನೀವೇ ನಟಿಸಬೇಕು ಎಂದು ಪಟ್ಟುಹಿಡಿದು ನಟಿಸುವಂತೆ ಮಾಡಿದ್ದರು. ತೆಲುಗು ಪ್ರೇಕ್ಷಕರು ಸೆಂಚುರಿ ಸ್ಟಾರ್ ನಟನೆಯನ್ನು ಕೊಂಡಾಡುತ್ತಿದ್ದಾರೆ. 'ಜೈಲರ್' ಚಿತ್ರದ ನರಸಿಂಹ ಬಳಿಕ ಗೌರ್ನಾಯ್ಡು ಆಗಿ ಪರಭಾಷಾ ಚಿತ್ರದಲ್ಲಿ ಶಿವಣ್ಣ ಅಬ್ಬರಿಸಿ ಗೆದ್ದಿದ್ದಾರೆ.

ಕುಸ್ತಿ ಉಸ್ತಾದ್ ಆಗಿ 'ಪೆದ್ದಿ'ಗೆ ಬೆಂಬಲವಾಗಿ ನಿಲ್ಲುವ ಪಾತ್ರದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದಾರೆ. ಮೊದಲಿಗೆ ಇದು ಕೇವಲ ಅತಿಥಿ ಪಾತ್ರ ಎಂದೇ ಭಾವಿಸಲಾಗಿತ್ತು. ಸಿನಿಮಾ ನೋಡಿದ ಮೇಲೆ ಬಹಳ ಪ್ರಮುಖ ಪಾತ್ರ ಎನ್ನುವುದು ಗೊತ್ತಾಗಿದೆ. ಜಾನಕಿ ಜಿ ನಾಯರ್ ಎಂಬ ಮೇಕಪ್ ಆರ್ಟಿಸ್ಟ್ ಚಿತ್ರಕ್ಕಾಗಿ ಶಿವಣ್ಣನಿಗೆ ಮೇಕಪ್ ಮಾಡಿದ್ದಾರೆ. ಬುಚ್ಚಿಬಾಬು ಊಹಿಸಿಕೊಂಡಂತೆ ಗೌರ್ನಾಯ್ಡು ಗೆಟಪ್‌ಗೆ ತಕ್ಕಂತೆ ಮೇಕಪ್ ಮಾಡಿದ್ದಾರೆ.
ಶಿವಣ್ಣ ಮಾತ್ರವಲ್ಲ ಅಪ್ಪಲಸೂರಿ ಪಾತ್ರ ಮಾಡಿದ್ದ ಜಗಪತಿ ಬಾಬು ಅವರಿಗೂ ಜಾನಕಿ ಜಿ ನಾಯರ್ ಮೇಕಪ್ ಮಾಡಿದ್ದರು. ಇನ್ನು ಕನ್ನಡ ನಟ ತಾರಕ್ ಪೊನ್ನಪ್ಪ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ. ತಾರಕ್, ಅಜಯ್ ಘೋಷ್ ಮತ್ತು ಗಗನ್ ಎಲ್ಲರಿಗೂ ತಮ್ಮ ಮೇಕಪ್ ಕೈಚಳಕ ತೋರಿಸಿದ್ದಾರೆ. ಶಿವಣ್ಣನ ಬಗ್ಗೆ ಆಕೆ ಮೆಚ್ಚಿಕೊಂಡಿದ್ದಾರೆ. ಈ ಹಿಂದೆ ಕೂಡ ಸಾಕಷ್ಟು ಸಿನಿಮಾಗಳಿಗೆ ಆಕೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ.
"ನಾನು ಮೊದಲು ಶಿವರಾಜ್ ಕುಮಾರ್ ಸರ್ ಅವರನ್ನು ಭೇಟಿಯಾದಾಗ ನನಗೆ ತುಂಬಾ ಆತಂಕವಾಗಿತ್ತು. ಕಾರಣ ಅವರು ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಆದರೆ ಅವರ ಶಾಂತ ಸ್ವಭಾವ ಮತ್ತು ಅದ್ಭುತ ವ್ಯಕ್ತಿತ್ವವು ತಕ್ಷಣವೇ ನನಗೆ ನಿರಾಳತೆಯನ್ನುಂಟುಮಾಡಿತು. ಇಡೀ ಪ್ರಕ್ರಿಯೆಯನ್ನು ತುಂಬಾ ಸುಲಭಗೊಳಿಸಿತು. ಆ ಚರೀಷ್ಮಾ ಹಾಗೂ ಸ್ಟಾರ್‌ಡಮ್ ಏನೇ ಇದ್ದರೂ ಅವರು ತುಂಬಾ ವಿನಮ್ರರು" ಎಂದು ಜಾನಕಿ ಜಿ ನಾಯರ್ ಪೋಸ್ಟ್ ಮಾಡಿದ್ದಾರೆ.
'ಪೆದ್ದಿ' ಚಿತ್ರದಲ್ಲಿ ರಾಮ್‌ಚರಣ್ ಬಿಟ್ಟರೆ ಚಿತ್ರದಲ್ಲಿ ಶಿವಣ್ಣನ ಪಾತ್ರಕ್ಕೆ ಹೆಚ್ಚು ಅವಕಾಶ ಸಿಕ್ಕಿದೆ. ತಮ್ಮ ಅನುಭವದ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಗಂಭೀರವಾದ ಖಡಕ್ ಉಸ್ತಾದ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಸಣ್ಣ ಫ್ಯಾಶ್‌ಬ್ಯಾಕ್ ತೋರಿಸಿ ಗೌರ್ನಾಯ್ಡು ಹಿನ್ನೆಲೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಸದ್ಯ ಆ ದೃಶ್ಯಕ್ಕೆ ಕತ್ತರಿ ಹಾಕಲು ಚಿತ್ರತಂಡ ಮುಂದಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.
ಫಸ್ಟ್ ವೀಕೆಂಡ್ ಭರ್ಜರಿ ಕಲೆಕ್ಷನ್ ಮಾಡಿರುವ 'ಪೆದ್ದಿ' ಸಿನಿಮಾ 2ನೇ ವಾರದತ್ತ ಕಾಲಿಟ್ಟಿದೆ. ಇನ್ನು 'ಪೆದ್ದಿ' ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರಿಗೆ ಶಿವಣ್ಣ ಹಚ್ಚಿವಾಗಿದ್ದಾರೆ. 'ಜೈಲರ್' ಬಳಿಕ ತಮಿಳು, ತೆಲುಗಿನಿಂದ ಸಾಕಷ್ಟು ಅವಕಾಶಗಳು ಅವರನ್ನು ಹುಡುಕಿ ಬಂದಿತ್ತು. ಅದರಲ್ಲಿ 'ಪೆದ್ದಿ' ಜೊತೆಗೆ 'ಗುಮ್ಮಡಿ ನರಸಯ್ಯ' ಚಿತ್ರಗಳನ್ನು ಮಾತ್ರ ಒಪ್ಪಿಕೊಂಡಿದ್ದರು. ಈ ಬಯೋಪಿಕ್ ಚಿತ್ರದ ಲೀಡ್ ರೋಲ್‌ನಲ್ಲಿ ಸೆಂಚುರಿ ಸ್ಟಾರ್ ನಟಿಸುತ್ತಿರುವುದು ವಿಶೇಷ.


Click it and Unblock the Notifications