ಚಿತ್ರರಂಗಕ್ಕೆ ಮತ್ತೊಂದು ಆಘಾತ, ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಫಿಶ್ ವೆಂಕಟ್ ನಿಧನ
ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಹೀಗೆ ಭಾರತೀಯ ಚಿತ್ರರಂಗಕ್ಕೆ ಸೇವೆಯನ್ನು ಸಲ್ಲಿಸಿ, ತಮ್ಮದೇ ಕೊಡುಗೆಯನ್ನು ನೀಡಿದ ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಕಳೆದುಕೊಂಡು ಚಿತ್ರರಂಗ ದುಃಖದಲ್ಲಿದೆ. ಹೀಗಿರುವಾಗ ಇದೀಗ ಮತ್ತೊಂದು ಬರ ಸಿಡಿಲು ಚಿತ್ರರಂಗಕ್ಕೆ ಬಡಿದಿದ್ದು ತೆಲುಗು ಚಿತ್ರರಂಗದ ಖ್ಯಾತ ನಟ ಫಿಶ್ ವೆಂಕಟ್ ನಿನ್ನೆ {ಜುಲೈ 18} ನಿಧನರಾಗಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿದ್ದ ಫಿಶ್ ವೆಂಕಟ್ ಹಾಸ್ಯ ಕಲಾವಿದನಾಗಿ ಕೂಡ ಹೆಸರು ಮಾಡಿದ್ದರು. ಕಳೆದ ಕೆಲವು ದಿನಗಳಿಂದ ಚಿತ್ರರಂಗದಿಂದ ದೂರವೇ ಇದ್ದ ಫಿಶ್ ವೆಂಕಟ್ ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

ಕಾಯಿಲೆ ಉಲ್ಬಣಗೊಂಡು ಎರಡೂ ಮೂತ್ರಪಿಂಡಗಳು ಹಾಳಾದ ಕಾರಣ ಕಳೆದ ಕೆಲವು ದಿನಗಳಿಂದ ಫಿಶ್ ವೆಂಕಟ್ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು. ಇನ್ನು ಫಿಶ್ ವೆಂಕಟ್ ನೂರಕ್ಕೂ ಅಧಿಕ ಚಿತ್ರಗಳನ್ನು ಮಾಡಿದ್ದರು ಕೂಡ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು.
ಹೀಗಾಗಿ ಚಿತ್ರರಂಗದಿಂದ ಯಾರಾದರೂ ಸಹಾಯ ಮಾಡಬಹುದು ಎಂದು ನಿರೀಕ್ಷೆಯನ್ನು ಫಿಶ್ ವೆಂಕಟ್ ಇಟ್ಟುಕೊಂಡಿದ್ದರು. ಫಿಶ್ ವೆಂಕಟ್ ಅವರ ಮಗಳು ಶ್ರಾವಂತಿ ಕೂಡ ಆರ್ಥಿಕ ಸಹಾಯ ಮಾಡುವಂತೆ ಮನವಿಯನ್ನು ಕೂಡ ಮಾಡಿಕೊಂಡಿದ್ದರು. ಕಿಡ್ನಿ ಕಸಿ ಮಾಡಲು 50 ಲಕ್ಷ ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದರು.
ಇವರ ಈ ಮನವಿಗೆ ನಟ ವಿಶ್ವಕ್ ಸೇನ್ ಸೇರಿ ಕೆಲವರು ಸಹಾಯದ ಹಸ್ತವನ್ನು ಕೂಡ ಚಾಚಿದ್ದರು. ಪವನ್ ಕಲ್ಯಾಣ್ ಕೂಡ ಎರಡು ಲಕ್ಷ ಹಣವನ್ನು ನೀಡಿದ್ದರು. ಆದರೆ.. ಚಿತ್ರರಂಗ ಮತ್ತು ಅವರ ಕುಟುಂಬದ ಪ್ರಯತ್ನಗಳೆಲ್ಲ ವಿಫಲವಾದವು. ಕಳೆದ ಕೆಲವು ದಿನಗಳಿಂದ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 53 ವರ್ಷದ ಫಿಶ್ ವೆಂಕಟ್ ಜುಲೈ 18ರಂದು ಕೊನೆಯುಸಿರೆಳೆದರು.
ದಾಸರಿ ನಾರಾಯಣ್ ರಾವ್ ಅವರ 'ಸಮ್ಮಕ್ಕ ಸಾರಕ್ಕ' ಚಿತ್ರದ ಮೂಲಕ 2000ನೇ ಇಸ್ವಿಯಲ್ಲಿ ಚಿತ್ರರಂಗಕ್ಕೆ ಬಂದ ಫಿಶ್ ವೆಂಕಟ್ ಆ ನಂತರ ಪವನ್ ಕಲ್ಯಾಣ್ ಅವರ 'ಖುಷಿ'.. ಜ್ಯೂ.ಎನ್.ಟಿ.ಆರ್ ಅವರ 'ಆದಿ' ಚಿತ್ರದಲ್ಲಿ ಕಾಣಿಸಿಕೊಂಡರು. ವಿ.ವಿ.ವಿನಾಯಕ್ ನಿರ್ದೇಶನದ 'ಆದಿ' ಚಿತ್ರದಲ್ಲಿ 'ತೊಡಗೊಟ್ಟು ಚಿನ್ನ' ಎಂಬ ಇವರ ಡೈಲಾಗ್ ಆಗ ತುಂಬಾ ಫೇಮಸ್ ಆಗಿತ್ತು. 'ಆದಿ' ಚಿತ್ರದಿಂದ ಇವರಿಗೆ ಜನಪ್ರಿಯತೆಯೂ ಸಿಕ್ಕಿತ್ತು.

ಆ ನಂತರ 'ಚೆನ್ನ ಕೇಶವ ರೆಡ್ಡಿ'.. 'ದಿಲ್'.. 'ಬನ್ನಿ'.. 'ಭಾಗೀರಥ'.. 'ಅಶೋಕ್'.. 'ರೆಡಿ'.. 'ಕಿಂಗ್'.. 'ಆಂಜನೇಯುಲು'.. 'ಅದುರ್ಸ್'.. 'ಡಾನ್ ಶ್ರೀನು'.. 'ಗಬ್ಬರ್ ಸಿಂಗ್'.. 'ದರವು'.. 'ಸುಡಿಗಾಡು'.. 'ನಾಯಕ್'.. 'ಮಿರ್ಚಿಲಾಂಟಿ ಕುರ್ರೋಡು'.. 'ಖೈದಿ ನಂಬರ್ 150'.. ಹೀಗೆ ನೂರಕ್ಕೂ ಅಧಿಕ ಚಿತ್ರಗಳಲ್ಲಿ ಫಿಶ್ ವೆಂಕಟ್ ಅಭಿನಯಿಸಿದರು. ತಮ್ಮ ಅಭಿನಯದಿಂದ ಜನ ಮನ ಗೆದ್ದರು. 'ಕಾಫಿ ವಿತ್ ಎ ಕಿಲ್ಲರ್' ಇವರು ಅಭಿನಯಿಸಿದ ಕೊನೆಯ ಸಿನಿಮಾ.
ಅಂದ್ಹಾಗೇ ಫಿಶ್ ವೆಂಕಟ್ ಅವರ ಮೂಲ ಹೆಸರು ಮಂಗಳಂಪಲ್ಲಿ ವೆಂಕಟೇಶ್. ಹೈದರಾಬಾದ್‌ನ ರಾಮನಗರದಲ್ಲಿ ಮೀನು ವ್ಯಾಪಾರವನ್ನು ಇವರು ಮಾಡುತ್ತಿದ್ದರಿಂದ ಇವರ ಸ್ನೇಹಿತರು ಮತ್ತು ಆಪ್ತರು ಇವರನ್ನು ಪ್ರೀತಿಯಿಂದ ಫಿಶ್ ವೆಂಕಟ್ ಎಂದು ಕರೆಯುತ್ತಿದ್ದರು. ಇನ್ನು ಮೀನುಗಾರ ಕುಟುಂಬದಲ್ಲಿ ಜನಿಸಿದ ಫಿಶ್ ವೆಂಕಟ್ ಅವರಿಗೆ ಚಿತ್ರರಂಗದ ಮೇಲೆ ಸೆಳೆತ ಇತ್ತು. ಪತ್ನಿ ಸುವರ್ಣ ಮತ್ತು ಮಗಳು ಶ್ರಾವಂತಿ ಅವರನ್ನು ಫಿಶ್ ವೆಂಕಟ್ ಅಗಲಿದ್ದು ತೆಲುಗು ಚಿತ್ರರಂಗದ ಅನೇಕ ತಾರೆಯರು ಸಂತಾಪವನ್ನು ಸೂಚಿಸಿದ್ದಾರೆ.


Click it and Unblock the Notifications











