ನಾಯಕಿಯಾಗಿ ಗಳಿಸೋಕ್ಕಿಂತ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಿ ಹೆಚ್ಚು ಸಂಪಾದಿಸ್ತಾರಾ ಶ್ರುತಿ ಹಾಸನ್?
ನಾಯಕಿಯರೇ ಐಟಂ ಸಾಂಗ್‌ಗಳಿಗೆ ಕುಣಿಯುವ ಬಗ್ಗೆ ಮೂಗು ಮುರಿಯುವ ಕಾಲ ಹೋಯ್ತು. ಈಗ ಅದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವುದಕ್ಕಿಂತ ಎರಡ್ಮೂರು ದಿನ ಒಂದು ಸಾಂಗ್‌ಗೆ ಹೆಜ್ಜೆ ಹಾಕಿದ್ರೆ ಒಳ್ಳೆ ಲಾಭ ಎನ್ನುವ ಲೆಕ್ಕಾಚಾರ ಶುರುವಾಗಿದೆ. 'ಪೆದ್ದಿ' ಚಿತ್ರದಲ್ಲಿ ಶ್ರುತಿ ಹಾಸನ್ ಬಿಂದಾಸ್ ಸ್ಟೆಪ್ಸ್ ಹಾಕ್ತಿದ್ದಾರೆ.
ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಡಲಾಗ್ತಿದೆ. ರಾಮ್‌ಚರನ್ ಜೋಡಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಶಿವರಾಜ್‌ಕುಮಾರ್, ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 80-90ರ ದಶಕದ ಕಥೆ ಚಿತ್ರದಲ್ಲಿದೆ. ಹಳ್ಳಿಯೊಂದರ ರಗಡ್ ಹೈದ 'ಪೆದ್ದಿ' ಕಥೆ ಇದು. ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಶ್ರುತಿ ಹಾಸನ್ ಹೆಜ್ಜೆ ಹಾಕಿದ್ದಾರೆ.

ಈ ಹಿಂದೆ 'ಎವಡು' ಚಿತ್ರದಲ್ಲಿ ರಾಮ್‌ಚರಣ್ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದರು. ಇದೀಗ ಚರಣ್ ಜೊತೆ ಬಿಂದಾಸ್ ಡ್ಯಾನ್ಸ್ ಮಾಡಿ ರಂಜಿಸೋಕೆ ಬರ್ತಿದ್ದಾರೆ. ಅದಕ್ಕಾಗಿ ಭಾರೀ ಸಂಭಾವನೆ ಕೂಡ ಪಡೆದುಕೊಂಡಿದ್ದಾರೆ. 'ಪೆದ್ದಿ' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಕುಣಿಯೋಕೆ ಮೃಣಾಲ್ ಠಾಕೂರ್, ಸಂಯುಕ್ತಾ ಮೆನನ್ ಸೇರಿ ಸಾಕಷ್ಟು ನಟಿಯರ ಹೆಸರು ಕೇಳಿಬಂದಿತ್ತು. ಕೊನೆಗೆ ಶ್ರುತಿ ಹಾಸನ್ ಆಯ್ಕೆ ಆಗಿದ್ದಾರೆ. ಈಗಾಗಲೇ ಸಾಂಗ್ ಶೂಟ್ ಕೂಡ ಮುಗಿದಿದೆ.
ಅಂದಹಾಗೆ 'ಪೆದ್ದಿ' ಚಿತ್ರದ ಡ್ಯಾನ್ಸಿಂಗ್ ನಂಬರ್‌ಗೆ ಕುಣಿಯಲು ಚೆನ್ನೈ ಚೆಲುವೆ 3.5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಚಿತ್ರವೊಂದಕ್ಕೆ ಕಮಲ್ ಹಾಸನ್ ಪುತ್ರಿ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನುವ ಅಂದಾಜಿದೆ. ಆದರೆ ಈಗ ಕೇವಲ ಒಂದು ಸಾಂಗ್‌ನಲ್ಲಿ ಕುಣಿಯೋಕೆ ಇಷ್ಟು ಸಂಭಾವನೆ ಪಡೆದ್ರಾ ಎಂದು ಕೆಲವರು ಹುಬ್ಬೇರಿಸಿದ್ದಾರೆ. ನಾಯಕಿಯಾಗಿ ಶ್ರುತಿಗೆ ಹೆಚ್ಚು ಅವಕಾಶಗಳು ಸಿಕ್ತಿಲ್ಲ. 'ಸಲಾರ್' ಬಿಟ್ರೆ ಇತ್ತೀಚೆಗೆ ಯಾವುದೇ ದೊಡ್ಡ ಸಿನಿಮಾಗಳಲ್ಲಿ ಆಕೆ ನಟಿಸಿಲ್ಲ.

'ಪೆದ್ದಿ' ಚಿತ್ರಕ್ಕೆ ಎ. ಆರ್ ರಹಮಾನ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಈಗಾಗಲೇ 'ಚಿಕ್ರಿ ಚಿಕ್ರಿ' ಹಾಗೂ 'ರೈ ರೈ ರಾರಾ' ಎನ್ನು ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಈ ಹಿಂದೆ ಸಾಕಷ್ಟು ಸ್ಪೆಷಲ್ ಸಾಂಗ್‌ಗಳಿಗೆ ರಹಮಾನ್ ಟ್ಯೂನ್ ಹಾಕಿದ್ದಾರೆ. 'ಪೆದ್ದಿ' ಚಿತ್ರಕ್ಕಾಗಿ ಅಂಥದ್ದೇ ಮೈ ಕುಣಿಸುವ ಸಾಂಗ್ ಕಂಪೋಸ್ ಮಾಡಿದ್ದಾರೆ. ಅದನ್ನು ಅಷ್ಟೇ ಸೊಗಸಾಗಿ ಕಟ್ಟಿಕೊಡಲಾಗಿದೆ. ಭಾರೀ ಸೆಟ್ ಹಾಕಿ ಸಾಂಗ್ ಶೂಟ್ ಮಾಡಿದ್ದಾರೆ. ಇತ್ತೀಚೆಗೆ ಸಾಂಗ್ ಮೇಕಿಂಗ್ ವಿಡಿಯೋ ಲೀಕ್ ಆಗಿತ್ತು.
ಒಂದು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ರೆ 40 ದಿನ ಕಾಲ್‌ಶೀಟ್ ಕೊಡಬೇಕು. ಪದೇ ಪದೆ ಟೇಕ್ ಮಾಡಬೇಕು.. ತಮ್ಮ ದೃಶ್ಯಗಳನ್ನು ಸೆರೆ ಹಿಡಿಯುವರೆಗೆ ಸೆಟ್‌ನಲ್ಲಿ ಕಾಯಬೇಕು. ಸಿನಿಮಾ ಸೋತ್ರೆ ಟೀಕೆಗಳನ್ನು ಎದುರಿಸಬೇಕು. ಅದೆಲ್ಲಾ ಯಾಕೆ ಒಳ್ಳೆ ಸಂಭಾವನೆ ಪಡೆದು 4 ದಿನ ಡ್ಯಾನ್ಸ್ ಮಾಡಿದ್ರೆ ಮುಗೀತು. ಕೋಟಿ ಕೋಟಿ ಹಣ ಎಣಿಸಬಹುದು ಎಂದು ನಟಿಯರು ಯೋಚಿಸುತ್ತಿದ್ದಾರೆ. ಅದೇ ಕಾರಣಕ್ಕೆ ನಾಯಕಿ ಇನ್ನುವ ಇಮೇಜ್ ಬಿಟ್ಟು ಸ್ಪೆಷಲ್ ಸಾಂಗ್‌ಗಳಲ್ಲಿ ಕುಣಿಯುತ್ತಿದ್ದಾರೆ.
ಒಮ್ಮೆ ಸ್ಪೆಷಲ್ ಸಾಂಗ್‌ನಲ್ಲಿ ಕುಣಿದರೆ ಮುಗೀತು, ಅದಕ್ಕೆ ಬ್ರ್ಯಾಂಡ್ ಮಾಡಿಬಿಡ್ತಾರೆ. ಮತ್ತೆ ನಾಯಕಿಯಾಗಿ ಅವಕಾಶ ಸಿಗಲ್ಲ ಎನ್ನುವ ಭಯ ಒಂದ್ಕಾಲದಲ್ಲಿ ಇತ್ತು. ಆದರೆ ಈಗ ಆತಂಕ ಇಲ್ಲ. ಐಟಂ ಸಾಂಗ್‌ನಲ್ಲಿ ಕುಣಿದು ಕ್ರೇಜ್ ಹೆಚ್ಚಿಸಿಕೊಂಡು ನಾಯಕಿಯಾಗಿ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುವವರು ಇದ್ದಾರೆ. 'ಪುಷ್ಪ'-2 ಚಿತ್ರದಲ್ಲಿ 'ಕಿಸ್ಸಿಕ್' ಎಂದು ಕುಣಿದ ಬಳಿಕ ಬಾಲಿವುಡ್ ಅಂಗಳದಲ್ಲಿ ಶ್ರೀಲೀಲಾ ಕ್ರೇಜ್ ಶುರುವಾಯಿತು ಎನ್ನಲಾಗ್ತಿದೆ.


Click it and Unblock the Notifications