ಗುಟ್ಟಾಗಿ 2ನೇ ಮದುವೆಯಾದ ನಟ ಸಿದ್ದಾರ್ಥ್- ನಟಿ ಅದಿತಿ ರಾವ್ ಹೈದರಿ
ತಮಿಳು ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಕೆಲ ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಇದೀಗ ಗುಟ್ಟಾಗಿ ಇಬ್ಬರು ಮದುವೆ ಆಗಿದ್ದಾರೆ ಎಂದು ವರದಿ ಆಗುತ್ತಿದೆ. ತೆಲಂಗಾಣದ ದೇವಸ್ಥಾನವೊಂದರಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ ಎಂದು ಹೇಳಲಾಗುತ್ತಿದೆ.
2021ರಲ್ಲಿ ಬಂದ 'ಮಹಾಸಮುದ್ರಂ' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆಗ ಶುರುವಾದ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿ ನಂತರ ಪ್ರೀತಿಯಾಗಿ ಬದಲಾಗಿತ್ತು. ಇತ್ತೀಚೆಗೆ ಕೆಲ ಕಾರ್ಯಕ್ರಮಗಳಿಗೂ ಕೂಡ ಇಬ್ಬರೂ ಒಟ್ಟಿಗೆ ಹಾಜರಾಗಿದ್ದರು. ಆದರೆ ತಮ್ಮ ರಿಲೇಷನ್‌ಶಿಪ್ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ.

ಸಿದ್ದಾರ್ಥ್ 2003ರಲ್ಲಿ ಮೇಘನಾ ಎಂಬಾಕೆಯನ್ನು ಮದುವೆಯಾಗಿ 2007ರಲ್ಲಿ ಡಿವೋರ್ಸ್ ಪಡೆದಿದ್ದರು. ಇನ್ನು ಅದಿತಿ ಕೂಡ ಸತ್ಯದೀಪ್ ಮಿಶ್ರಾ ಎಂಬುವವರ ಜೊತೆ ಮದುವೆಯಾಗಿ ದೂರಾಗಿದ್ದಾರೆ. ಹಾಗಾಗಿ ಇಬ್ಬರಿಗೂ ಇದು ಎರಡನೇ ಮದುವೆ ಆಗಿದೆ. ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಜೋಡಿ ಹಿರಿಯರ ಸಮ್ಮುಖದಲ್ಲಿ ಹೊಸ ಬಾಳಿಗೆ ಇಟ್ಟಿದ್ದಾರೆ. ಇವರ ಮದುವೆ ವನಪರ್ತಿಯ ಶ್ರೀರಂಗಪುರಂ ದೇವಸ್ಥಾನದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಎರಡೂ ಕುಟುಂಬದ ಹಿರಿಯರು, ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ಇವರ ಮದುವೆ ನಡೆದಿದೆಯಂತೆ.
ತಮಿಳುನಾಡು ಮೂಲದ ಪುರೋಹಿತರು ಶಾಸ್ತ್ರೋಕ್ತವಾಗಿ ಮದುವೆ ಶಾಸ್ತ್ರಗಳನ್ನು ನಡೆಸಿದ್ದಾರೆ. ಅದಿತಿ ರಾವ್ ಅಜ್ಜ ವನಪರ್ತಿ ಸಂಸ್ಥಾನದ ಆಳ್ವಿಕೆ ನಡೆಸಿದ್ದರು. ಹಾಗಾಗಿ 18 ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಸ್ಥಾನದ ಜೊತೆ ಅದಿತಿ ಕುಟುಂಬದವರಿಗೆ ಬಹಳ ನಂಟಿದೆ. ಅದೇ ಕಾರಣಕ್ಕೆ ಈ ದೇವಸ್ಥಾನದಲ್ಲಿ ಅದಿತಿ ಮದುವೆ ಆಗಲು ನಿರ್ಧರಿಸಿದ್ದರು ಎನ್ನಲಾಗುತ್ತಿದೆ.
ಖ್ಯಾತ ನಿರ್ದೇಶಕ ಶಂಕರ್ ಗರಡಿಯಲ್ಲಿ ಪಳಗಿನ ನಟ ಸಿದ್ದಾರ್ಥ್ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೂ ಸುದ್ದಿ ಆಗುತ್ತಿರುತ್ತಾರೆ. ತಮಿಳಿನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬಾಯ್ಸ್' ಚಿತ್ರದ ಮುನ್ನಾ ಪಾತ್ರ ದೊಡ್ಡ ಬ್ರೇಕ್ ಕೊಟ್ಟಿತ್ತು. ತೆಲುಗಿನಲ್ಲಿ ನಟಿಸಿದ 'ನುವ್ವೋಸ್ತಾನಂಟೆ ನೆನೊಡ್ಡಂಟಾನ' ಸಿನಿಮಾ ಕೂಡ ಹಿಟ್ ಆಗಿತ್ತು. ಆದರೆ ಬಳಿಕ ದೊಡ್ಡ ಸಕ್ಸಸ್ ಸಿಗಲಿಲ್ಲ.
ತಮಿಳು, ತೆಲುಗು ಮಾತ್ರವಲ್ಲ 'ರಂಗ್ ದೆ ಬಸಂತಿ' ಸಿನಿಮಾ ಮೂಲಕ ಸಿದ್ದಾರ್ಥ್ ಬಾಲಿವುಡ್ ಪ್ರವೇಶಿಸಿದ್ದರು. ನಟನಾಗಿ ಮಾತ್ರವಲ್ಲದೇ ಗಾಯಕರಾಗಿ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಫಿಲ್ಮ್‌ಫೇರ್ ಸೇರಿ ಸಾಕಷ್ಟು ಪ್ರಶಸ್ತಿಗಳು ಧಕ್ಕಿದೆ. ಇನ್ನು ಇತ್ತೀಚೆಗೆ ನಟ ಸಿದ್ದಾರ್ಥ್ ಬೆಂಗಳೂರಿನಲ್ಲಿ ಸಿನಿಮಾ ಸುದ್ದಿಗೋಷ್ಠಿ ನಡೆಸುವ ವೇಳೆ ಕನ್ನಡಪರ ಸಂಘಟನೆಗಳು ಅಡ್ಡಿ ಪಡಿಸಿದ ಘಟನೆ ಭಾರೀ ಸುದ್ದಿ ಆಗಿತ್ತು.

ಕರ್ನಾಟಕದಲ್ಲಿ ಕಾವೇರಿ ಕಿಚ್ಚು ತಾರಕಕ್ಕೇರಿದ್ದ ಸಮಯದಲ್ಲಿ ಸಿದ್ದಾರ್ಥ್ ತಮ್ಮ ಸಿನಿಮಾ ಪ್ರಚಾರಕ್ಕೆ ಬಂದಿದ್ದರು. ತಮಿಳಿನ 'ಚಿತ್ತಾ' ಸಿನಿಮಾ 'ಚಿಕ್ಕು' ಹೆಸರಿನಲ್ಲಿ ಕನ್ನಡಕ್ಕೆ ಡಬ್ ಆಗಿತ್ತು. ಸುದ್ದಿಗೋಷ್ಠಿ ನಡುವೆಯೇ ಕರವೇ ಸ್ವಾಭಿಮಾನಿ ಸೇನೆಯಿಂದ ವಿರೋಧ ವ್ಯಕ್ತವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಸಿದ್ದಾರ್ಥ್ ಅಲ್ಲಿಂದ ಹೊರಟುಬಿಟ್ಟರು.
ಇನ್ನು ಇತ್ತೀಚಿಗೆ WPL ಕ್ರಿಕೆಟ್ ಟೂರ್ನಿಯಲ್ಲಿ ಆರ್‌ಸಿಬಿ ವನಿತೆಯರ ತಂಡ ಗೆದ್ದಿತ್ತು. ರಾಜ್ಯಾದ್ಯಂತ ಭಾರೀ ಸಂಭ್ರಮ ಮನೆ ಮಾಡಿತ್ತು. ಬೆಂಗಳೂರಿನ ಕೆಲವೆಡೆ ಮಧ್ಯರಾತ್ರಿ ಜನ ರಸ್ತೆಗಿಳಿದು ಕುಣಿದು ಸಂಭ್ರಮಿಸಿದ್ದರು. ಈ ವಿಡಿಯೋ ಬಗ್ಗೆ ವ್ಯಂಗ್ಯ ಮಾಡಿ ನಟ ಸಿದ್ದಾರ್ಥ್ ಮಾಡಿದ್ದ ಟ್ವೀಟ್ ವೈರಲ್ ಆಗಿತ್ತು.
"ಮಹಿಳೆಯರ ತಂಡವು ಟೂರ್ನಿಯನ್ನು ಗೆದ್ದಿದೆ. ಆದರೆ ಓರ್ವ ಮಹಿಳೆ ಕೂಡ ರಸ್ತೆಯಲ್ಲಿ ಇದನ್ನು ಸಂಭ್ರಮಿಸಲಿಲ್ಲ. ಇದ ಭಾರತದಲ್ಲಿ ಪಿತೃಪ್ರಭುತ್ವದ ಅತ್ಯುನ್ನತ ಕ್ಷಣ" ಎಂದು ನಟ ಸಿದ್ದಾರ್ಥ್ ಟ್ವೀಟ್ ಮಾಡಿದ್ದರು.


Click it and Unblock the Notifications











