"ಕಮಲ್ ಹಾಸನ್ ಕಂಡ್ರೆ ಹೊಟ್ಟೆಕಿಚ್ಚು.. ಚಿತ್ರರಂಗದಲ್ಲಿ ನನ್ನನ್ನು ತುಳಿಯುವ ಪ್ರಯತ್ನ ನಡೀತ್ತಿದೆ": ಸಿದ್ದಾರ್ಥ್
'ಬಾಯ್ಸ್', 'ನುವೊಸ್ತಾನಂಟೆ ನೇನೊದ್ದಂಟಾನ', 'ಬೊಮ್ಮರಿಲ್ಲು' ರೀತಿಯ ಸಿನಿಮಾಗಳಿಂದ ಗಮನ ಸೆಳೆದ ನಟ ಸಿದ್ದಾರ್ಥ್. ಹೀರೊ ಆಗಿ ಮಾತ್ರವಲ್ಲದೇ ನಿರ್ಮಾಪಕನಾಗಿ, ಗಾಯಕನಾಗಿಯೂ ಗಮನ ಸೆಳೆದಿದ್ದರು. ನಿರ್ದೇಶಕ ಮಣಿರತ್ನಂ ಬಳಿ ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಿದ್ದಾರ್ಥ್ ಮುಂದೆ ಹೀರೊ ಆಗಿ ಸಕ್ಸಸ್ ಕಂಡರು. ಆದರೆ ದಿಢೀರನೇ ಗೆದ್ದಷ್ಟೇ ಬೇಗ ಸೋಲಿನ ಸುಳಿಗೆ ಸಿಲುಕಿದ್ದರು.
ಕಾಲಿವುಡ್ ಮಾತ್ರವಲ್ಲದೇ ಟಾಲಿವುಡ್‌ನಲ್ಲೂ ಸಿದ್ದಾರ್ಥ್ ಹವಾ ಶುರುವಾಗಿತ್ತು. ಸಾಲು ಸಾಲು ಸಿನಿಮಾ ಆಫರ್‌ಗಳನ್ನು ಪಡೆದುಕೊಂಡಿದ್ದರು. ಅಷ್ಟೇ ಅಲ್ಲ ತೆಲುಗಿನ ಸ್ಟಾರ್ ಹೀರೊಗಳ ರೇಂಜ್‌ಗೆ ಬೆಳೆಯುತ್ತಾರೆ ಅಂದುಕೊಳ್ಳುವ ವೇಳೆಗೆ ಏನೇನೋ ಮಾತಾಡಿ ಇಂಡಸ್ಟ್ರಿಗೆ ದೂರಾಗಿದ್ದರು. ತನ್ನ ಕೈಯಾರೆ ತಾನೇ ತೆಲುಗು ಅವಕಾಶಗಳು ಮಿಸ್ ಆಗುವಂತೆ ಮಾಡಿಕೊಂಡಿದ್ದರು. ಇತ್ತೀಚೆಗೆ ಮತ್ತೆ 'ಮಹಾಸಮುದ್ರಂ' ಸಿನಿಮಾ ಮೂಲಕ ಅವಕಾಶಗಳು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸದ್ಯ ಸಿದ್ದಾರ್ಥ್ ನಟನೆಯ 'ಟಕ್ಕರ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.

ಈ ವಾರ 'ಟಕ್ಕರ್' ಸಿನಿಮಾ ರಿಲೀಸ್ ಆಗುತ್ತಿದೆ. ರಿಲೀಸ್ ಹೊಸ್ತಿಲಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ವಿವಿಧ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಈ ವೇಳೆ ಚಿತ್ರರಂಗದಲ್ಲಿ ತಮಗೆ ಹಿನ್ನಡೆ ಆಗುತ್ತಿದೆ. ಯಾಕೆ ಅಂತ ಗೊತ್ತಿಲ್ಲ ಎಂದು ಆಕ್ರೋಶಭರಿತವಾಗಿ ಮಾತನಾಡುತ್ತಿದ್ದಾರೆ. ನೇರವಾಗಿ ಹೇಳದೇ ಇದ್ದರೂ ಪರೋಕ್ಷವಾಗಿ ನನ್ನನ್ನು ಚಿತ್ರರಂಗದಲ್ಲಿ ತುಳಿಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇಂಡಸ್ಟ್ರಿಯಲ್ಲಿ ಕೆಲವರು ನನ್ನ ಮೇಲೆ ಸಂಚು ರೂಪಿಸಿದ್ದಾರೆ ಎನ್ನುವ ಅರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ.

ನನಗೆ ಪ್ರಶಸ್ತಿ ಸಿಕ್ಕಿಲ್ಲ
"ತೆಲುಗು ಚಿತ್ರರಂಗದಲ್ಲಿ ನನಗೆ ಸಾಕಷ್ಟು ಸಿಕ್ಕಿದೆ. 8 ವರ್ಷ ಇಲ್ಲೇ ಇದ್ದೆ. 8 ವರ್ಷಗಳ ನಂತರ ಚೆನ್ನೈಗೆ ಹೋದೆ. ಎಲ್ಲಿ ಅವಕಾಶಗಳು ಸಿಕ್ಕರೆ ಅಲ್ಲಿ ಕೆಲಸ ಮಾಡುತ್ತೇನೆ. ನನ್ನ ಮುಂದಿನ ತೆಲುಗು ಸಿನಿಮಾ ಬಗ್ಗೆ ಈ ಚರ್ಚೆ ಆಗ್ತಿದೆ ಅಂದ್ರೆ ಅದು ತೆಲುಗು ಪ್ರೇಕ್ಷಕರು ನೀಡಿದ ಉಡುಗೊರೆ. ಜೀವನವಿಡೀ ಅದು ಹೋಗಲ್ಲ. ನಾಳೆ ಎಷ್ಟೇ ಜನ ಹೀರೊಗಳು ಬಂದರೂ ನನಗೆ ಇಲ್ಲಿನ ಪ್ರೇಕ್ಷಕರ ಕೊಡ ಸ್ಥಾನ ಶಾಶ್ವತವಾಗಿ ಇರುತ್ತದೆ. ಆದರೆ ಯಾಕೆ ಇಷ್ಟು ದಿನ ತೆಲುಗು ಸಿನಿಮಾದಲ್ಲಿ ನಟಿಸಿಲ್ಲ, ಅಂದ್ರೆ ಯಾವುದೇ ಒಳ್ಳೆ ಕತೆ ನನ್ನ ಬಳಿ ಬಂದಿಲ್ಲ ಎಂದು ಹೇಳುತ್ತೇನೆ"
ನನಗೆ ಯಾಕೆ ನಂದಿ ಸಿಕ್ಕಿಲ್ಲ
"ನೀವು ನನ್ನನ್ನು ಕೇಳಬಹುದು, ಯಾಕೆ ನಿಮಗೆ ನಂದಿ (ಆಂಧ್ರ ಪ್ರದೇಶದ ರಾಜ್ಯ ಪ್ರಶಸ್ತಿ) ಅವಾರ್ಡ್ ಬಂದಿಲ್ಲ, ಇಷ್ಟು ಒಳ್ಳೆ ಸಿನಿಮಾ ಮಾಡಿದ್ದೀರಾ ಅಂತ. ಈ ಪ್ರಶ್ನೆ ನನ್ನನ್ನು ಕೇಳಬಾರದು. ನಂದಿ ಅವಾರ್ಡ್‌ನ ಕೇಳಬೇಕು. ನಾನು ಏನಾದರೂ ತಪ್ಪು ಮಾಡಿದ್ದೀನಾ? ನನಗೆ ಯಾಕೆ 'ಬೊಮ್ಮರಿಲ್ಲು', 'ನುವೊಸ್ತಾನಂಟೆ ನೇನೊದ್ದಂಟಾನ' ಸಿನಿಮಾಗಳಿಗೆ ಕೊಟ್ಟಿಲ್ಲ ಅಂತ. ಒಂದು ವೇಳೆ ಅವಾರ್ಡ್ ಕೊಟ್ಟಿದ್ದರೆ ಏನಾಗುತ್ತಿತ್ತು. ಬೇರೆ ಅವಕಾಶಗಳು ಸಿಗುತ್ತಿತ್ತಾ? ಬಂದಿಲ್ಲ ಅಲ್ವಾ?
ನನ್ನ ಪ್ರತಿಭೆ ನಿರ್ದೇಶಕರಿಗೆ ಕಾಣಲಿಲ್ಲ
"ಕಮಲ್ ಹಾಸನ್‌ನ ನೋಡಿದ್ರೆ ನನಗೆ ಹೊಟ್ಟೆಕಿಚ್ಚು. ಯಾಕಂದ್ರೆ ಅವರು ಹೀರೋ ಆದ ಸಂದರ್ಭದಲ್ಲಿ ತೆಲುಗಿನ ಖ್ಯಾತ ನಿರ್ದೇಶಕರ ಜೊತೆ ಅವರು ಸಿನಿಮಾ ಮಾಡಿದರು. ಅವರಿಗೆ ಸಿಕ್ಕ ಅವಕಾಶಗಳು ನನಗೆ ಸಿಗಲಿಲ್ಲ. ಆ ಸಮಯಲ್ಲಿ ನನ್ನ ಪ್ರತಿಭೆ ದೊಡ್ಡ ನಿರ್ದೇಶಕರಿಗೆ ಗೊತ್ತಾಗಲಿಲ್ಲ ಅಂತ ನಾನು ಹೇಳ್ತೀನಿ. ಫೀಕ್‌ನಲ್ಲಿ ಇದ್ದಾಗಲೇ ನನ್ನ ಪ್ರತಿಭೆ ಯಾರಿಗೂ ಗೊತ್ತಾಗಲಿಲ್ಲ. ಚೆನ್ನೈಗೆ ಹೋಗಿ 8 ವರ್ಷ ಇದ್ದಾಗ ಹೇಗೆ ಕಾಣಿಸುತ್ತೆ?" ಎಂದು ಕೇಳಿದ್ದಾರೆ.
ಡಬ್ ಮಾಡಿದ್ರೆ ಪ್ಯಾನ್ ಇಂಡಿಯಾ ಅಲ್ಲ
"ಇವತ್ತು ಪ್ಯಾನ್ ಇಂಡಿಯಾ, ಪ್ಯಾನ್ ಮಸಾಲಾ ಎಲ್ಲಾ ಕೇಳ್ತಿದ್ದೇವೆ. ಒಂದೇ ಚಿತ್ರವನ್ನು ಮೂರು ಕ್ಲಾಪ್ ಬೋರ್ಡ್ ಇಟ್ಟು ಒಂದೇ ಸೀನ್‌ನ ಮತ್ತೆ ಮತ್ತೆ ಬೇರೆ ಬೇರೆ ಭಾಷೆಗಳಲ್ಲಿ ಮಾಡೋದನ್ನು ನಾನು 4 ವರ್ಷ ಮಾಡಿದ್ದೀನಿ. ಅದನ್ನ ಬೈಲಿಂಗುಲ್ ಸಿನಿಮಾ ಎನ್ನುತ್ತಾರೆ. ಒಂದು ಸಿನಿಮಾ ಮಾಡಿ ಡಬ್ ಮಾಡಿದ್ರೆ, ಪ್ಯಾನ್ ಇಂಡಿಯಾ ಸಿನಿಮಾ ಹೇಗಾಗುತ್ತೆ? ನನ್ನ 180, ಲವ್ ಫೇಲ್ಯೂರ್ ಸಿನಿಮಾಗಳನ್ನು ನೋಡಿ ಪ್ರತಿ ದೃಶ್ಯವನ್ನು ಎರಡೆರು ಬಾರಿ ಶೂಟ್ ಮಾಡಿದ್ದೇವೆ. ಅದು ಮಲ್ಟಿಲಾಂಗ್ವೇಜ್ ಸಿನಿಮಾ, ಆ ರೀತಿ ಮಲ್ಟಿಲಾಂಗ್ವೇಜ್ ಸಿನಿಮಾ ಮಾಡುವಾಗ ಯೂನಿಟ್‌ನಲ್ಲಿ ಡಬಲ್ ಬಾಟ ಕೊಡಬೇಕು. ಪ್ಯಾನ್ ಇಂಡಿಯಾ ಅಂದ್ರೆ ಒಂದು ಭಾಷೆಯಲ್ಲಿ ಮಾಡಿ ಡಬ್ ಮಾಡೋದು ಹೇಗಾಗುತ್ತದೆ? ಎಂದು ಸಿದ್ದಾರ್ಥ್ ಪ್ರಶ್ನಿಸಿದ್ದಾರೆ.


Click it and Unblock the Notifications











